ಹುಬ್ಬಳ್ಳಿ: ನಗರದ ಹಳೇಹುಬ್ಬಳ್ಳಿ, ಉಣಕಲ್, ವಿದ್ಯಾನಗರ, ಗೋಪನಕೊಪ್ಪ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶದ ಹಲವು ಕಡೆಗಳಲ್ಲಿ ಶನಿವಾರ ಜನತೆ ಕಾಮದಹನ ಮಾಡಿ ಬಣ್ಣದೋಕುಳಿ ಆಡಿ ಸಂಭ್ರಮಿಸಿದರು. ಹಳೇ ಹುಬ್ಬಳ್ಳಿಯಲ್ಲಿ ಹಿಂದು-ಮುಸಲ್ಮಾನ್ ಬಾಂಧವರು ಪರಸ್ಪರ ಬಣ್ಣದಾಟವಾಡಿ ಭಾವೈಕ್ಯತೆ ಮೆರೆದರು.
ಶುಕ್ರವಾರ ಸಂಜೆ ಮಹಾನಗರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ನೂರಾರು ರತಿ-ಕಾಮಣ್ಣರ ಮೂರ್ತಿಗಳನ್ನು ಶನಿವಾರ ಬೆಳ್ಳಂಬೆಳಗ್ಗೆ ದಹನ ಮಾಡಿದರು. ಗ್ರಾಮೀಣ ಭಾಗದಲ್ಲೂ ಶನಿವಾರದಂದು ಅದ್ಧೂರಿ ಮೆರವಣಿಗೆ ನಡೆಸಿ ಕಾಮ-ರತಿ ಮೂರ್ತಿಗಳನ್ನು ದಹನ ಮಾಡುವ ಮೂಲಕ ಪರಸ್ಪರ ಬಣ್ಣ ಎರಚಿ ಹೋಳಿ ಆಡಿ ಸಂಭ್ರಮಿಸಿದರು.ಕರಿಬಂಡಿ ಮೆರವಣಿಗೆ:
ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಇಲ್ಲಿನ ಹಳೇ ಹುಬ್ಬಳ್ಳಿ ಭಾಗದಲ್ಲಿ ಕರಿಬಂಡಿ ಹಾಗೂ ಚಕ್ಕಡಿಗಳಲ್ಲಿ ರತಿ- ಕಾಮಣ್ಣರ ಮೂರ್ತಿಗಳನ್ನಿರಿಸಿ ಯುವಕರೇ ಚಕ್ಕಡಿ ಹಾಗೂ ಕರಿಬಂಡಿ ಎಳೆಯುವ ಮೂಲಕ ಮೆರವಣಿಗೆಗೆ ಮೆರುಗು ತಂದರು. ಈ ವೇಳೆ ಮಹಿಳೆಯರು, ಯುವಕರಾದಿಯಾಗಿ ಎಲ್ಲರೂ ಓಕುಳಿಯಲ್ಲಿ ಪಾಲ್ಗೊಂಡು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.ಹಳೇಹುಬ್ಬಳ್ಳಿಯ ಚೆನ್ನಪೇಟ, ಹಿರೇಪೇಟ, ನೇಕಾರ ನಗರ, ಕೃಷ್ಣಾಪುರ ಓಣಿ, ಹಿರೇಪೇಟೆ ಓಣಿ, ಇಂಡಿ ಪಂಪ್, ಅಂಬೇಡ್ಕರ್ ನಗರ, ಘೋಡ್ಕೆ ಓಣಿ, ಕೇಶ್ವಾಪುರದ ಕೆಲವು ಭಾಗ, ಗೋಪನಕೊಪ್ಪದ ಕೆಲವು ಭಾಗಗಳಲ್ಲಿ ಶನಿವಾರ ಓಕುಳಿ ಆಡಿ ಸಂಭ್ರಮಿಸಿದರು. ಹಳೇ ಹುಬ್ಬಳ್ಳಿಯಲ್ಲಿ ರೇನ್ ಡ್ಯಾನ್ಸ್‌ನಲ್ಲಿ ಯುವಕರು, ಯುವತಿಯರು, ಮಕ್ಕಳು, ವೃದ್ಧರಾದಿಯಾಗಿ ಕುಣಿದು ಕುಪ್ಪಳಿಸಿದರು.
ಭಾವೈಕ್ಯತೆಯ ಬಣ್ಣ:ಇಲ್ಲಿನ ಹಳೇ ಹುಬ್ಬಳ್ಳಿ ಹಾಗೂ ಆನಂದ ನಗರದಲ್ಲಿ ಶನಿವಾರ ನಡೆದ ರತಿ-ಕಾಮಣ್ಣ ಮೂರ್ತಿಗಳ ಮೆರವಣಿಗೆಯಲ್ಲಿ ಮುಸಲ್ಮಾನ ಬಾಂಧವರು ಪಾಲ್ಗೊಳ್ಳುವ ಮೂಲಕ ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದರು. ರಂಜಾನ್ ತಿಂಗಳ ಉಪವಾಸ ವೃತಾಚರಣೆ ಆರಂಭವಾಗಿದ್ದರೂ ರಂಗಪಂಚಮಿಯಲ್ಲಿ ಮುಸಲ್ಮಾನರು ಪಾಲ್ಗೊಂಡು ಹಿಂದು ಬಾಂಧವರಿಗೆ ಬಣ್ಣ ಹಚ್ಚಿ ಸಂಭ್ರಮಿಸುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾಯಿತು.