ಮನೆಗಳಲ್ಲಿ ದುರ್ಗಾದೇವಿ, ವಾಹನ ಹಾಗೂ ಆಯುಧಗಳಿಗೆ ಪೂಜೆ ನಡೆದರೆ ದೇವಸ್ಥಾನಗಳಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆದವು.
ಹುಬ್ಬಳ್ಳಿ:
ದುಷ್ಟಶಕ್ತಿಗಳ ವಿರುದ್ಧ ದೈವಶಕ್ತಿಯ ವಿಜಯದ ಸಂಕೇತವಾದ ವಿಜಯದಶಮಿ ಹಾಗೂ ದಸರಾ ಹಬ್ಬವನ್ನು ಬುಧವಾರ ನಗರದಲ್ಲಿ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.
ಮನೆಗಳಲ್ಲಿ ದುರ್ಗಾದೇವಿ, ವಾಹನ ಹಾಗೂ ಆಯುಧಗಳಿಗೆ ಪೂಜೆ ನಡೆದರೆ ದೇವಸ್ಥಾನಗಳಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆದವು. ಬನ್ನಿ ತಗೊಂಡ ಬಂಗಾರದಂಗ ಇರುವ... ಎಂದು ಪರಸ್ಪರ ಬನ್ನಿ ವಿನಿಮಯ ಮಾಡಿಕೊಳ್ಳುವ ಮೂಲಕ 9 ದಿನಗಳ ನವರಾತ್ರಿ ಮಹೋತ್ಸವ ಸಂಪನ್ನಗೊಂಡಿತು.
ಆಯುಧ ಪೂಜೆ ಹಿನ್ನೆಲೆಯಲ್ಲಿ ಮನೆ, ಅಂಗಡಿ- ಮುಂಗಟ್ಟು ಹಾಗೂ ವಿವಿಧ ಸಂಸ್ಥೆಗಳಲ್ಲಿ ವಾಹನ, ಕೃಷಿ ಉಪಕರಣ ಮತ್ತು ಯಂತ್ರೋಪಕರಣ, ವಾಹನಗಳಿಗೆ ಪೂಜೆ ಸಲ್ಲಿಸಲಾಯಿತು. ನಗರದ ದುರ್ಗಾದೇವಿ, ದ್ಯಾಮವ್ವದೇವಿ, ಲಕ್ಷ್ಮೀದೇವಿ, ಕಾಳಿಕಾ, ಕರಿಯಮ್ಮ, ಬನಶಂಕರಿ ದೇವಸ್ಥಾನಗಳು, ಚೆನ್ನಪೇಟೆಯ ಬನ್ನಿ ಮಹಾಕಾಳಿ ದೇವಸ್ಥಾನ, ಶ್ರೀಸಿದ್ಧಾರೂಢ ಮಠ, ಮೂರುಸಾವಿರ ಮಠ, ಉಣಕಲ್ಲ ಸಿದ್ಧಪ್ಪಜ್ಜನ ಮಠ ಹಾಗೂ ಎರಡೆತ್ತಿನ ಮಠ ಸೇರಿದಂತೆ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷ ಪೂಜೆ ನೆರವೇರಿತು.
ಪಲ್ಲಕ್ಕಿ ಉತ್ಸವದ ಸಂಭ್ರಮ:
ಚೆನ್ನಪೇಟೆಯ ಬನ್ನಿ ಮಹಾಕಾಳಿ ದೇವಸ್ಥಾನದಲ್ಲಿ ಉಡಿ ತುಂಬುವ ಹಾಗೂ ಬನ್ನಿ ಮುಡಿಯುವ ಕಾರ್ಯಕ್ರಮ ನಡೆದವು. ಬಳಿಕ ಪಲ್ಲಕ್ಕಿ ಉತ್ಸವ ಜರುಗಿತು. ಶ್ರೀ ಸಿದ್ಧಾರೂಢ ಮಠದಲ್ಲಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ದುರ್ಗದ ಬೈಲ್ ಗೌಳಿಗಲ್ಲಿಯ ವೆಂಕಟೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ರಥೋತ್ಸವ ನಡೆಯಿತು.ಹುಲಿಗೆಮ್ಮ ದೇವಿಗೆ ಮಹಾಭಿಷೇಕ
ಹಳೇಹುಬ್ಬಳ್ಳಿ ಅರವಿಂದ ನಗರದ ಶ್ರೀಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ವಿಜಯದಶಮಿ ಅಂಗವಾಗಿ ದೇವಿಗೆ ಅಮೃತಗಳಿಗೆಯಲ್ಲಿ ಮಹಾಭಿಷೇಕ ನೆರವೇರಿಸಲಾಯಿತು. ಬಳಿಕ ವಿವಿಧ ಪುಷ್ಪಗಳಿಂದ ಅಲಂಕರಿಸಿ, ಮುತ್ತೈದೆಯರಿಂದ ಅರಿಶಿಣ-ಕುಂಕುಮ ಹಾಗೂ 108 ತುಪ್ಪದ ಬತ್ತಿಗಳ ಆರತಿಯೊಂದಿಗೆ ಉದಯಪೂಜೆ ಸಲ್ಲಿಸಲಾಯಿತು.
ನಂತರ ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಬೆಳಗ್ಗೆ 9ಕ್ಕೆ ಡೊಳ್ಳುಗಳೊಂದಿಗೆ ಮೆರವಣಿಗೆ ಆರಂಭಿಸಲಾಯಿತು. ಅರವಿಂದ ನಗರದ ಕೆಎಚ್ಬಿ ಕಾಲನಿಯ ಬನ್ನಿ ಮಹಾಕಾಳಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ಬನ್ನಿ ಮುಡಿದು ಮರಳಿ ಮೂಲ ದೇವಸ್ಥಾನಕ್ಕೆ ಆಗಮಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ರವಿಕುಮಾರ ಮಡ್ಡಿ ನವರಾತ್ರಿ ಅಂಗವಾಗಿ ನಡೆದ ಶ್ರೀ ದೇವಿ ಮಹಾತ್ಮೆ ಪುರಾಣದ ಮಂಗಲ ನೆರವೇರಿಸಿದರು. ಬಳಿಕ ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆಯಿತು. ಸಂಜೆ 7.30ಕ್ಕೆ ದೇವಿಗೆ ಮಹಾಪೂಜೆ ಮತ್ತು ಮಹಾಮಂಗಳಾರತಿ ಸಲ್ಲಿಸುವ ಮೂಲಕ ದಸರಾ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು. ಮಾತೋಶ್ರೀ ಡಾ. ಹುಲಿಗೆಮ್ಮ ಪೋಸಾ ಅಮ್ಮನವರು ಸಾನ್ನಿಧ್ಯ ವಹಿಸಿದ್ದರು. ಕೆ.ಕೆ. ಮುಳಗುಂದ, ಲಕ್ಷ್ಮಣರಾವ್ ಸೂರ್ಯವಂಶಿ, ಬಸವಂತಪ್ಪ ಅನವಾಲ, ಗೋಪಾಲ ಶೆಲ್ಲಿಕೇರಿ ಸೇರಿ ಹಲವರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.