ಕೊಪ್ಪಳ: ಆರು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಪಂಚಮಸಾಲಿ ಸಮುದಾಯದ 2 ಎ ಮೀಸಲಾತಿ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಮೀಸಲಾತಿ ನಮ್ಮ ಹಕ್ಕು, ಅದನ್ನು ಪಡೆದೇ ತೀರುತ್ತೇವೆ. ಡಿ. 10ರಂದು ಬೆಳಗಾವಿಯ ಸುವರ್ಣಸೌಧದ ಎದುರು ನಡೆಯಲಿರುವ ಹೋರಾಟಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಪಂಚಮಸಾಲಿ ಬಂಧುಗಳು ಆಗಮಿಸಬೇಕು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಮಹಾಸ್ವಾಮೀಜಿ ಕರೆ ನೀಡಿದರು.
ಪಂಚಮಸಾಲಿ ಹೋರಾಟದ ಜನ್ಮಭೂಮಿ ಕೊಪ್ಪಳ. ಹೀಗಾಗಿ ಕೊಪ್ಪಳ ಜಿಲ್ಲೆಯಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದ ಜನರು ಬೆಳಗಾವಿಗೆ ಆಗಮಿಸಿ ಹೋರಾಟಕ್ಕೆ ಶಕ್ತಿ ತುಂಬಬೇಕು. ನಮ್ಮ ಸಮುದಾಯದಲ್ಲಿ ಹೋರಾಟದ ಕಿಚ್ಚು ಕಿತ್ತೂರು ರಾಣಿ ಚೆನ್ನಮ್ಮನ ಕಾಲದಿಂದಲೂ ಜೀವಂತವಾಗಿದೆ. ಪಂಚಮಸಾಲಿ ಸಮಾಜ ಕೇವಲ ತನ್ನ ಹಕ್ಕುಗಳಿಗಾಗಿ ಹೋರಾಡುವ ಸಮಾಜವಲ್ಲ; ಸಮಾಜಮುಖಿ ಚಿಂತನೆ, ದಾನ-ಧರ್ಮ ಹಾಗೂ ಜನಪರ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಹಲವು ಸವಾಲುಗಳು ಎದುರಾಗಬಹುದು. ಅವುಗಳಿಗೆ ಎದೆಗುಂದದೆ ಸಮಾಜವನ್ನು ಸಂಘಟಿಸಿ, ಸಮುದಾಯದ ಅಭಿವೃದ್ಧಿಗೆ ಶ್ರಮಿಸುವ ಜವಾಬ್ದಾರಿ ಪಂಚಸೇನೆಯ ಯುವಕರ ಮೇಲಿದೆ. ರಾಜ್ಯಾದ್ಯಂತ ಪಂಚಸೇನೆಯ ಯುವಕರು ಸಮಾಜದ ಒಳಿತಿಗಾಗಿ ನಿರಂತರವಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.ಖಡ್ಗ ಹಿಡಿಯುವುದಲ್ಲ, ಸಮಾನತೆಗಾಗಿ ಕ್ರಾಂತಿ: ಪಂಚಸೇನೆ ಎಂದರೆ ಕೈಯಲ್ಲಿ ಖಡ್ಗ ಹಿಡಿದು ಹಿಂಸಾತ್ಮಕ ಹೋರಾಟ ನಡೆಸುವ ಸಂಘಟನೆಯಲ್ಲ. ಸತ್ಯ, ಶಾಂತಿ ಮತ್ತು ಅಹಿಂಸೆಯ ಮೂಲಕ ಸಮಾನತೆಯ ಬದುಕನ್ನು ಕಟ್ಟಿಕೊಡುವ ಕ್ರಾಂತಿಯ ಶಕ್ತಿಯಾಗಿದೆ. ನಮ್ಮ ಹೋರಾಟ ಯಾರ ವಿರುದ್ಧವೂ ದ್ವೇಷ ಸಾಧಿಸುವುದಕ್ಕಲ್ಲ; ಸಂವಿಧಾನಬದ್ಧ ಹಕ್ಕು ಮತ್ತು ಸಾಮಾಜಿಕ ನ್ಯಾಯ ಪಡೆಯುವುದಕ್ಕಾಗಿ ಎಂದು ಶ್ರೀಗಳು ಸ್ಪಷ್ಟಪಡಿಸಿದರು.
ವೇದಿಕೆಯಲ್ಲಿ ಪಂಚಸೇನೆಯ ರಾಜ್ಯಾಧ್ಯಕ್ಷ ರುದ್ರಗೌಡ ಸೋಲಭಗೌಡ್ರ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಶರಣಪ್ಪ ಹ್ಯಾಟಿ, ರಾಜ್ಯ ಉಪಾಧ್ಯಕ್ಷ ವಿಜಯಕುಮಾರ ಎಂ.ಪಿ., ಶಿವಮೊಗ್ಗ ಜಿಲ್ಲಾಧ್ಯಕ್ಷ ರುದ್ರಗೌಡ, ವಿಜಯನಗರ ಜಿಲ್ಲಾಧ್ಯಕ್ಷ ವೀರೇಶ, ಬಾಗಲಕೋಟೆ ಜಿಲ್ಲಾಧ್ಯಕ್ಷ ಶ್ರೀಮಂತೇಶ, ಮುಖಂಡರಾದ ಮಂಜುನಾಥ ಸೊರಟೂರು, ಕುಕನೂರಿನ ಬಸನಗೌಡ ಬಹದ್ದೂರ ದೇಸಾಯಿ, ಮಾಜಿ ಯೋಧ ವೀರೇಶ ಬಣಗಾರ್, ಶರಣಪ್ಪ ಗೋಣಿ, ಮಂಜುನಾಥ ನಿಟ್ಟಾಲಿ, ಯಲಬುರ್ಗಾ ತಾಲೂಕು ಅಧ್ಯಕ್ಷ ಬಸವರಾಜ ಬಿಜಕಲ್, ಆರ್.ಬಿ. ಗಾಂಜಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳಿಗೆ ಸೇವಾ ಆದೇಶ ಪತ್ರ ವಿತರಿಸಿ, ಪ್ರಮಾಣವಚನ ಬೋಧಿಸಲಾಯಿತು.