ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಪುಣ್ಯಸ್ಮರಣೆ

KannadaprabhaNewsNetwork | Published : Sep 9, 2024 1:35 AM

ಸಾರಾಂಶ

ಸ್ಕ್ವಾಡ್ರನ್‌ ಲೀಡರ್‌ ಅಜ್ಜಮಾಡ ದೇವಯ್ಯ ಅವರ 59ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ನಡೆಯಿತು. ಮಾಜಿ ಯೋಧರು, ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಭಾರತ-ಪಾಕ್ ನಡುವಿನ 1965ರ ಯುದ್ಧದಲ್ಲಿ ಶತ್ರು ರಾಷ್ಟ್ರದ ಯುದ್ಧ ವಿಮಾನವನ್ನು ಸಾಹಸಿಕ ಪ್ರಯತ್ನದ ಮೂಲಕ ಹೊಡೆದುರುಳಿಸಿ ಬಲಿದಾನಗೈದ ಕೊಡಗಿನ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ 59ನೇ ಪುಣ್ಯಸ್ಮರಣಾ ಕಾರ್ಯಕ್ರಮ ನಗರದ ಖಾಸಗಿ ಬಸ್ ನಿಲ್ದಾಣದ ವೀರಯೋಧನ ವೃತ್ತದಲ್ಲಿ ಪುಷ್ಪನಮನ ಸಲ್ಲಿಸುವ ಮೂಲಕ ಹೃದಯಸ್ಪರ್ಶಿಯಾಗಿ ನಡೆಯಿತು.

ಕೊಡವ ಮಕ್ಕಡ ಕೂಟ, ಅಜ್ಜಮಾಡ ಒಕ್ಕ (ಕುಟುಂಬಸ್ಥರು) ಹಾಗೂ ಸ್ವಾ.ಲೀ.ಅಜ್ಜಮಾಡ ದೇವಯ್ಯ ಟ್ರಸ್ಟ್‌ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಖಾಸಗಿ ಬಸ್ ನಿಲ್ದಾಣದ ವೃತ್ತದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ವೀರ ಯೋಧನ ಭಾವ ಚಿತ್ರಕ್ಕೆ ಅಜ್ಜಮಾಡ ಕುಟುಂಬಸ್ಥರು ಸೇರಿದಂತೆ, ಮಾಜಿ ಯೋಧರು, ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.

‘ರಾಷ್ಟ್ರೀಯ ಪುಣ್ಯದಿನ’ವನ್ನಾಗಿ ಘೋಷಿಸಿ-ಸ್ವಾ.ಲೀ.ಅಜ್ಜಮಾಡ ದೇವಯ್ಯ ಟ್ರಸ್ಟ್ನ ಅಧ್ಯಕ್ಷ ಅಜ್ಜಮಾಡ ಕಟ್ಟಿಮಂದಯ್ಯ ವೀರ ಯೋಧನಿಗೆ ಗೌರವ ನಮನ ಸಲ್ಲಿಸಿ ಮಾತನಾಡಿ, ಭಾರತ-ಪಾಕ್ ಯುದ್ಧದ ಸಂದರ್ಭ ಶತ್ರು ರಾಷ್ಟ್ರದ ವಿಮಾನವನ್ನು ಹೊಡೆದುರುಳಿಸುವ ಮೂಲಕ ಕೆಚ್ಚೆದೆಯ ಸಾಹಸ ಮೆರೆದು ಸ್ಕ್ವಾ.ಲೀ.ದೇವಯ್ಯ ಹುತಾತ್ಮರಾಗಿದ್ದಾರೆ. ಅವರ ಬಲಿದಾನದ ಈ ದಿನವನ್ನು ‘ರಾಷ್ಟ್ರೀಯ ಪುಣ್ಯದಿನ’ವನ್ನಾಗಿ ಘೋಷಿಸುವ ಮೂಲಕ ಸರ್ಕಾರವೆ ಪುಣ್ಯದಿನವನ್ನು ಆಚರಿಸಬೇಕೆಂದು ಮನವಿ ಮಾಡಿದರು.

ಕೊಡಗು ಫೀ.ಮಾ.ಕೆ.ಎಂ.ಕಾರ್ಯಪ್ಪ, ಜ.ತಿಮ್ಮಯ್ಯ ಅವರಂತಹ ಮಹಾನ್ ವೀರ ಸೇನಾನಿಗಳನ್ನು, ಕೆಚ್ಚೆದೆಯ ಯೋಧರನ್ನು ಈ ನಾಡಿಗೆ ನೀಡಿದ ಪುಣ್ಯಭೂಮಿ. ಈ ನೆಲದ ಸುಪುತ್ರರಾಗಿ ದೇಶ ರಕ್ಷಣೆಗಾಗಿ ಬಲಿದಾನಗೈದ ಸ್ಕ್ವಾ.ಲೀ. ದೇವಯ್ಯ ಅವರ ಭಾವ ಚಿತ್ರವನ್ನು ಎಲ್ಲಾ ಕೊಡವ ಸಮಾಜಗಳಲ್ಲಿ ಅಳವಡಿಸಬೇಕೆಂದು ಕೋರಿದ ಅವರು, ಸ್ಕ್ವಾ.ಲೀ. ದೇವಯ್ಯ ಅವರು ಅಜ್ಜಮಾಡ ಕುಟುಂಬದಲ್ಲಿ ಜನಿಸಿರಬಹುದು. ಆದರೆ, ಅವರು ಇಡೀ ರಾಷ್ಟ್ರಕ್ಕೆ ಸೇರಿದ ವ್ಯಕ್ತಿಯಾಗಿದ್ದಾರೆಂದು ಹೆಮ್ಮೆಯಿಂದ ನುಡಿದರು.

ಮಾಜಿ ಸ್ಪೀಕರ್‌ ಕೆ.ಜಿ. ಬೋಪಯ್ಯ ಅವರು ಮಾತನಾಡಿ, ಭಾರತ-ಪಾಕ್ ಯುದ್ಧದಲ್ಲಿ ಹುತಾತ್ಮರಾದ ಸ್ಕ್ವಾ.ಲೀ.. ದೇವಯ್ಯ ಅವರು, ರಾಷ್ಟ್ರರಕ್ಷಣೆಗಾಗಿ ನಡೆಸಿದ ಹೋರಾಟದ ಮೂಲಕ ಎಲ್ಲ ವಿಚಾರಗಳಿಗೂ ಮಿಗಿಲಾಗಿ ‘ದೇಶ ಮೊದಲು’ ಎನ್ನುವುದನ್ನು ತೋರಿಸಿಕೊಡುವ ಮೂಲಕ ಪ್ರತಿಯೊಬ್ಬರಿಗೂ ಮಾರ್ಗದರ್ಶಕರಾಗಿದ್ದಾರೆಂದು ಹೇಳಿದರು.

ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪ ಮಾತನಾಡಿ, ರಾಷ್ಟ್ರದ ಹೆಮ್ಮೆಯ ಪುತ್ರ ಸ್ಕ್ವಾ.ಲೀ. ದೇವಯ್ಯ ಅವರ ಭಾವಚಿತ್ರವನ್ನು ಮಡಿಕೇರಿ ಕೊಡವ ಸಮಾಜದಲ್ಲಿ ಅಳವಡಿಸಲಾಗುತ್ತದೆಂದು ಸ್ಪಷ್ಟಪಡಿಸಿ, ಸ್ಕ್ವಾ.ಲೀ.ದೇವಯ್ಯ ಅವರು ತಮ್ಮ ದೇಶ ಪ್ರೇಮ, ಸಾಹಸ, ಕೆಚ್ಚೆದೆಯ ನಿಲುವುಗಳ ಮೂಲಕ ಯುವಪೀಳಿಗೆಗೆ ಮಾರ್ಗದರ್ಶಕರಾಗಿದ್ದಾರೆ ಎಂದು ತಿಳಿಸಿದರು.

ಮಡಿಕೇರಿ ನಗರಸಭೆ ಮಾಜಿ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಯೋಧರ ನಾಡೆಂದು ಕರೆಯಲ್ಪಡುವ ಕೊಡಗಿನಲ್ಲಿ ಇತ್ತೀಚಿನ ದಿನಗಳಲ್ಲಿ ಸೈನ್ಯಕ್ಕೆ ಭರ್ತಿಯಾಗುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಸ್ಕ್ವಾ.ಲೀ.ದೇವಯ್ಯ ಅವರ ಆದರ್ಶಗಳನ್ನು ಯುವ ಪೀಳಿಗೆ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯಕ್ಕೆ ಭರ್ತಿಯಾಗಲು ಮುಂದೆ ಬರುವಂತೆ ಕರೆ ನೀಡಿದರು.

ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯು ಅವರು, ದೇಶ ಕಾಯುವ ಯೋಧರು ರಾಷ್ಟ್ರದ ಬೆನ್ನೆಲುಬು ಮಾತ್ರವಲ್ಲ ಅವರೊಂದು ದೊಡ್ಡ ಶಕ್ತಿಯೇ ಆಗಿದ್ದಾರೆ ಎಂದು ನುಡಿದರು.

ಮಾಜಿ ಯೋಧ ಬಾಳೆಯಡ ಶಂಭು ಮಾತನಾಡಿ, ಸ್ಕ್ವಾ.ಲೀ.ದೇವಯ್ಯ ಅವರದ್ದು ಈ ದೇಶ ರಕ್ಷಣೆಗಾಗಿ ಮಾಡಿರುವ ಸರ್ವೋಚ್ಛ ಬಲಿದಾನವಾಗಿದೆ. ಇಂತಹ ವೀರ ಯೋಧರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಭಾರತ-ಪಾಕ್ ಯುದ್ಧದಲ್ಲಿ ಹುತಾತ್ಮರಾದ ಸ್ಕ್ವಾ.ಲೀ.ದೇವಯ್ಯ ಅವರ ಅಂತ್ಯ ಸಂಸ್ಕಾರ ನಡೆದಿದೆ ಎನ್ನಲಾಗುತ್ತದೆ. ಈ ಬಗ್ಗೆ ಭಾರತ ಸರ್ಕಾರ ಪರಿಶೀಲನೆ ನಡೆಸಿ, ಅವರ ಅಸ್ಥಿ ದೊರಕಿದಲ್ಲಿ, ವೀರ ಯೋಧನ ಹೆಸರಿನ ಸ್ಮಾರಕ ನಿರ್ಮಿಸಬೇಕೆಂದು ಮನವಿ ಮಾಡಿದರು.

ಮಾಜಿ ಯೋಧ ಮುಂಜಾಂದಿರ ಅಪ್ಪಯ್ಯ ರಾಜಾ ಅವರು, ಮಡಿಕೇರಿಯ ಕೇಂದ್ರ ಸ್ಥಾನದಲ್ಲಿ ಸ್ಕ್ವಾ.ಲೀ. ದೇವಯ್ಯ ವೃತ್ತ ನಿರ್ಮಾಣ, ಪ್ರತಿಮೆ ನಿರ್ಮಾಣದ ಬಗೆಗಿನ ಪರಿಶ್ರಮವನ್ನು ನೆನಪು ಮಾಡಿಕೊಂಡರು.

ಕೊಡವ ಮಕ್ಕಡ ಕೂಟದ ಬೊಳ್ಳಜಿರ ಅಯ್ಯಪ್ಪ ಅವರು ಕಾರ್ಯಕ್ರಮದ ಬಳಕ ಸ್ಕ್ವಾ.ಲೀ.ದೇವಯ್ಯ ಅವರ ಭಾವ ಚಿತ್ರವನ್ನು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಎಂ.ಪಿ.ಮುತ್ತಪ್ಪ ಅವರಿಗೆ ಕೊಡುಗೆಯಾಗಿ ನೀಡಿದರು.

ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ ಅವರು ಸ್ಕ್ವಾ.ಲೀ. ದೇವಯ್ಯ ಅವರ ವೃತ್ತಕ್ಕೆ ಆಗಮಿಸಿ ವೀರ ಯೋಧನಿಗೆ ಗೌರವ ನಮನ ಸಲ್ಲಿಸಿದರು.

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಅವರು ಸರ್ವರನ್ನು ಸ್ವಾಗತಿಸಿ ವಂದಿಸಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್, ಮಾಜಿ ಯೋಧರಾರ ಮಲಚ್ಚೀರ ಅಚ್ಚಯ್ಯ, ಮಾಜಿ ಯೋಧರಾದ ಬೊಟ್ಟಂಗಡ ಜಪ್ಪು, ಮಾಜಿ ಯೋಧರಾದ ಬಾಳೆಯಡ ಮಂದಪ್ಪ, ಅಜ್ಜಮಾಡ ಕುಟುಂಬಸ್ಥರಾದ ಅಜ್ಜಮಾಡ ಬೆಳ್ಯಪ್ಪ, ಅಜ್ಜಮಾಡ ಕಾರ್ಯಪ್ಪ, ಅಜ್ಜಮಾಡ ಚಂಗಪ್ಪ, ಅಜ್ಜಮಾಡ ಬೋಪಯ್ಯ, ಅಜ್ಜಮಾಡ ಅಯ್ಯಣ್ಣ, ಪುಟ್ಟಿಚಂಡ ಡಾನ್ ದೇವಯ್ಯ, ಕೂಟದ ಪದಾಧಿಕಾರಿ ಪುತ್ತೇರಿರ ಕಾಳಯ್ಯ ಮೊದಲಾದವರು ಪಾಲ್ಗೊಂಡು ವೀರ ಯೋಧನಿಗೆ ಗೌರವ ಸಲ್ಲಿಸಿದರು.

Share this article