ಸಾದರ‌ ಸಮುದಾಯದಿಂದ ಸ್ತುತ್ಯಾರ್ಹ ಕೆಲಸ: ವಿ. ಸೋಮಣ್ಣ

KannadaprabhaNewsNetwork | Published : Jun 30, 2025 12:34 AM

ಬಡತನವನ್ನು ಮೆಟ್ಟಿನಿಂತು ಸಮಾಜದ ಏಳಿಗೆಗೆ ಸಮುದಾಯದ ದಾನಿಗಳು ನಿರಂತರವಾಗಿ ನಿಸ್ವಾರ್ಥದಿಂದ ಶ್ರಮಿಸುತ್ತಿರುವುದೇ ಸಮುದಾಯ ಉತ್ತರೋತ್ತರವಾಗಿ ಬೆಳೆಯಲು ಕಾರಣವಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ತುಮಕೂರು

ತನ್ನ ಅಭಿವೃದ್ಧಿಗೆ ಬೇರೆ ಸಮುದಾಯದ ಆಸರೆ ಬೇಡದೆ, ಸ್ವತಹಃ ಸಂಘಟಿತರಾಗಿ, ಸ್ವಾಭಿಮಾನದದ ಬದುಕುತ್ತಿರುವ ಹಿಂದೂ ಸಾದರ ಸಮಾಜ ತನ್ನ ಶೈಕ್ಷಣಿಕ ಅಭಿವೃದ್ಧಿಗಾಗಿ ಬಾಲಕ, ಬಾಲಕಿಯರ ಹಾಸ್ಟಲ್‌ಗಳನ್ನು ತೆರೆದು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಂಡಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅಭಿಪ್ರಾಯಪಟ್ಟಿದ್ದಾರೆ.

ನಗರದ ಕ್ಯಾತ್ಸಂದ್ರ ರಿಂಗ್‌ರಸ್ತೆಯಲ್ಲಿ ಹಿಂದೂ ಸಾದರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ನೂತನವಾಗಿ ನಿರ್ಮಿಸಿರುವ ಬಾಲಕರ ವಿದ್ಯಾರ್ಥಿ ನಿಲಯದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಬಡತನವನ್ನು ಮೆಟ್ಟಿನಿಂತು ಸಮಾಜದ ಏಳಿಗೆಗೆ ಸಮುದಾಯದ ದಾನಿಗಳು ನಿರಂತರವಾಗಿ ನಿಸ್ವಾರ್ಥದಿಂದ ಶ್ರಮಿಸುತ್ತಿರುವುದೇ ಸಮುದಾಯ ಉತ್ತರೋತ್ತರವಾಗಿ ಬೆಳೆಯಲು ಕಾರಣವಾಗಿದೆ ಎಂದರು.

ಹಿಂದೂ ಸಾದರು ಜನಸಂಖ್ಯೆಯಲ್ಲಿ ಕಡಿಮೆಯಿದ್ದರೂ ಶೈಕ್ಷಣಿಕವಾಗಿ, ಅರ್ಥಿಕವಾಗಿ ಸಾಕಷ್ಟು ಪ್ರಗತಿ ಸಾಧಿಸಿದ್ದಾರೆ. ಇದಕ್ಕೆ ಮಂಡಿ ಹರಿಯಣ್ಣನವರಿಂದ ಹಿಡಿದು ಇಂದಿನ ರವಿಕುಮಾರ್ ಅವರವರೆಗೆ ಎಲ್ಲರೂ ಸಹ ಶ್ರಮಿಸಿದ್ದಾರೆ. ಸಮುದಾಯದ ವತಿಯಿಂದ ನಿರ್ಮಿಸಿರುವ ಹಾಸ್ಟಲ್‌ಗಳಿಗೆ ರಾಜ್ಯದಲ್ಲಿ ಆಡಳಿತದಲ್ಲಿದ್ದ ಆಯಾಯ ಕಾಲದ ಸರ್ಕಾರಗಳು ನೆರವು ನೀಡಿವೆ. ಹಿರಿಯರ ಕೋರಿಕೆಯಂತೆ ತುಮಕೂರಿನಲ್ಲಿ ನಿರ್ಮಾಣವಾಗುತ್ತಿರುವ ಬಾಲಕಿಯರ ವಿದ್ಯಾರ್ಥಿ ನಿಲಯ ಹಾಗೂ ವಾಣಿಜ್ಯ ಸಂಕೀರ್ಣ ಕಟ್ಟಡಕ್ಕೆ ಸೋಮಣ್ಣ ಪ್ರತಿಷ್ಠಾನದಿಂದ 25 ಲಕ್ಷ ರು.ಗಳನ್ನು ನೀಡುವುದಾಗಿ ಭರವಸೆ ನೀಡಿದರು.

ಸಂಘದ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ವಾಣಿಜ್ಯ ಸಂಕಿರಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಹಕಾರ ಸಚಿವ ಕೆ.ಎನ್. ರಾಜಣ್ಣ,ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ ದಾನಿಗಳನ್ನು ಸ್ಮರಿಸುವುದು ನಿಜಕ್ಕೂ ಒಳ್ಳೆಯ ಸಂಪ್ರದಾಯ. ಸಾದರ ಸಮುದಾಯ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವ ಮೂಲಕ ಅವರನ್ನು ಸಮಾಜದ ಆಸ್ತಿಯಾಗಿ ಪರಿವರ್ತಿಸುತ್ತಿರುವುದು ಪುಣ್ಯದ ಕೆಲಸ ಎಂದರು

ಹಿಂದೂ ಸಾದರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಬಾಲಕಿಯರು ವಿದ್ಯಾರ್ಥಿ ನಿಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಶ್ರೀಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ ವೇಳೆ ನಮ್ಮ ತಂದೆಗೆ ಸಾದರ ಸಮುದಾಯ ನೀಡಿದ ಕೊಡುಗೆಯನ್ನು ಹಾಗೂ ಮಧುಗಿರಿಯಲ್ಲಿ ಪ್ರಥಮ ಬಾರಿಗೆ ಚುನಾವಣೆ ಎದುರಿಸಿದಾಗ ನನಗೆ ನೀಡಿದ ಸಹಕಾರವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.ಶಿಕ್ಷಣವನ್ನು ಅದ್ಯತಾ ವಿಷಯವಾಗಿ ತೆಗೆದುಕೊಂಡಿರುವುದು ನಿಜಕ್ಕೂ ಮೆಚ್ಚುವಂತಹದ್ದು, ಭಾರತ ಇಂದು ಇಡೀ ವಿಶ್ವಕ್ಕೆ ತಾಂತ್ರಿಕ ಮಾನವ ಸಂಪನ್ಮೂಲವನ್ನು ನೀಡುವಷ್ಟು ಎತ್ತರಕ್ಕೆ ಬೆಳೆದಿದೆ ಎಂದರೆ ಅದಕ್ಕೆ ಶಿಕ್ಷಣಕ್ಕೆ ನೀಡಿದ ಪ್ರಾಮುಖ್ಯತೆಯೇ ಕಾರಣ ಎಂದರು.

ಸಾದರ ಕ್ಷೇಮಾಭಿವೃದ್ದಿ ಸಂಘದಿಂದ ನೂತನ ಬಾಲಕಿಯರ ಹಾಸ್ಟಲ್ ಮತ್ತು ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಸರಕಾರದವತಿಯಿಂದ ಒಂದು ಕೋಟಿ ರೂ ಅನುದಾನ ಕೊಡಿಸುತ್ತೇನೆ.ಹಾಗೆಯೇ ಮಧುಗಿರಿ ಮತ್ತು ಕೊರಟಗೆರೆ ತಾಲೂಕುಗಳಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯಭವನಗಳಿಗೆ ಶಾಸಕರ ನಿಧಿಯಿಂದ ಒಟ್ಟು 15 ಲಕ್ಷ ರೂ ನೀಡುವುದಾಗಿ ಗೃಹ ಸಚಿವರು ಘೋಷಿಸಿದರು

ಪಾಸ್ತಾವಿಕವಾಗಿ ಹಿಂದೂ ಸಾದರ ಕ್ಷೇಮಾಭಿವೃದ್ದಿ ಸಂಘದ ಕೇಂದ್ರ ಸಮಿತಿ ಅಧ್ಯಕ್ಷ ರವಿಕುಮಾರ್.ಡಿ.ಈ ಮಾತನಾಡಿದರು

ಕಾರ್ಯಕ್ರಮ ಉದ್ಘಾಟಿಸಿದ ವಿಧಾನಪರಿಷತ್ ಮಾಜಿ ಸದಸ್ಯರು ಹಾಗೂ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು,ಸಮುದಾಯದ ಅಭಿವೃದ್ದಿಯ ದೃಷ್ಟಿಯಿಂದ 1943ರಲ್ಲಿ ಸ್ಥಾಪನೆಯಾದ ಹಿಂದೂ ಸಾದರ ಕ್ಷೇಮಾಭಿವೃದ್ದಿ ಸಂಘ ಸಮುದಾಯದ ಅಭಿವೃದ್ದಿಗೆ ನಿರಂತರವಾಗಿ ಶ್ರಮಿಸುತ್ತಿದೆ.ಸಂಘದ ಅಧ್ಯಕ್ಷರಾಗಿರುವ ರವಿಕುಮಾರ್ ಮತ್ತು ಸಂಗಡಿಗರು ಹೊಸ ಹೊಸ ಯೋಜನೆಗಳ ಮೂಲಕ ಸಮಾಜಕ್ಕೆ ಗಟ್ಟಿ ನೆಲೆಯನ್ನು ಒದಗಿಸಿದ್ದಾರೆ.ವಿದ್ಯೆ ಯಾರಿಂದಲೂ ಕಸಿಯಲಾಗದ ಸಂಪತ್ತು. ಅದರಲ್ಲಿಯೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.

ಮಾಜಿ ಮಂತ್ರಿ ಹಾಗೂ ದೆಹಲಿ ವಿಶೇ಼ಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಗೌರಿಬಿದನೂರು ಶಾಸಕ ಪುಟ್ಟಸ್ವಾಮಿಗೌಡ, ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಅವರು ಮಾತನಾಡಿದರು.ಕಾರ್ಯಕ್ರಮದಲ್ಲಿ ಸಮುದಾಯದ ಅಭಿವೃದ್ದಿಗೆ ಶ್ರಮಿಸಿದ 10 ಜನರಿಗೆ ಮಂಡಿ ಹರಿಯಣ್ಣ ಹಾಗು ಎಂ.ಎಸ್.ಮಲ್ಲಯ್ಯ ಪ್ರಶಸ್ತಿ, ಪ್ರತಿಭಾನ್ವಿತ ಮಕ್ಕಳಿಗೆ ಲಕ್ಷಿö್ಮನರಸಿಂಹಯ್ಯ ಸ್ಮರಣಾರ್ಥ ವಿದ್ಯಾರ್ಥಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಅಲ್ಲದೆ ಪ್ರತಿಭಾನ್ವಿತ ಮಕ್ಕಳನ್ನು ಪುರಸ್ಕರಿಸಲಾಯಿತು.

ವೇದಿಕೆಯಲ್ಲಿ ಮುಖಂಡರಾದ ಮಾಜಿ ಸಂಸದ ಜಿ.ಎಸ್.ಬಸವರಾಜು, ಕರ್ನಾಟಕ ಸರಕಾರ ಎನ್.ಆರ್.ಐ.ಪೋರಂನ ಉಪಾಧ್ಯಕ್ಷರಾದ ಎಸ್.ಐ.ಪ್ರಕಾಶ್, ಸೊಗಡು ಶಿವಣ್ಣ,ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಹಿಂದೂ ಸಾದರ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ರವಿಕುಮಾರ್.ತಾಲೂಕು ಅಧ್ಯಕ್ಷ ಡಿ.ಶಿವಕುಮಾರ್,ತುಮಕೂರು ಎ.ಡಿ.ಬಲರಾಮಯ್ಯ, ಎಸ್.ಟಿ.ಡಿ ನಾಗರಾಜು, ಡೆಲ್ಟ ರವಿ, ಸ್ವಾಮಿ ವಿವೇಕಾನಂದ ಪತ್ತಿನ ಸಹಕಾರ ಸಂಘದ ಪಿ.ಮೂರ್ತಿ,ಎ.ಡಿ.ಬಲರಾಮಯ್ಯ, ರವಿಶಂಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.