ಕೊಡಗಿಗೆ 4 ದಿನದಿಂದ ವಾಣಿಜ್ಯ ಬಳಕೆ ಸಿಲಿಂಡರ್ ಬಂದ್‌

KannadaprabhaNewsNetwork |  
Published : Mar 12, 2026, 01:30 AM IST
ಆತಂಕ  | Kannada Prabha

ಸಾರಾಂಶ

ಕೊಡಗು ಜಿಲ್ಲೆಯ ಕೆಲವು ಕಡೆಗಳಲ್ಲಿ ಕಳೆದ ನಾಲ್ಕು ದಿನಗಳಿಂದ ವಾಣಿಜ್ಯ ಬಳಕೆಯ ಸಿಲಿಂಡರ್ ಬಾರದ ಹಿನ್ನೆಲೆಯಲ್ಲಿ ಜಿಲ್ಲೆಯ ಹೊಟೇಲ್ ಮತ್ತು ರೆಸಾರ್ಟ್ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.

ಮಡಿಕೇರಿ: ಕೊಡಗು ಜಿಲ್ಲೆಯ ಕೆಲವು ಕಡೆಗಳಲ್ಲಿ ಕಳೆದ ನಾಲ್ಕು ದಿನಗಳಿಂದ ವಾಣಿಜ್ಯ ಬಳಕೆಯ ಸಿಲಿಂಡರ್ ಬಾರದ ಹಿನ್ನೆಲೆಯಲ್ಲಿ ಜಿಲ್ಲೆಯ ಹೊಟೇಲ್ ಮತ್ತು ರೆಸಾರ್ಟ್ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನೊಂದೇ ದಿನ ಸಿಲಿಂಡರ್ ಪೂರೈಸದಿದ್ದರೂ ಹೊಟೇಲ್ ಬಂದ್ ಆಗುವ ಸಾಧ್ಯತೆ ಎದುರಾಗಿದೆ.

ಸದ್ಯ ಸಂಗ್ರಹವಿರುವ ಅನಿಲ ಬಳಸಿ ಹೊಟೇಲ್ ನಡೆಸಲಾಗುತ್ತಿದೆ.ಮೈಸೂರಿನಲ್ಲೇ ವಾಣಿಜ್ಯ ಸಿಲಿಂಡರ್ ತುಂಬುತ್ತಿಲ್ಲ. ಇಂಡೆಂಟ್‌ ಹಾಕಿದರೂ ವಾಣಿಜ್ಯ ಸಿಲಿಂಡರ್ ಭರ್ತಿ ಮಾಡುತ್ತಿಲ್ಲ. ವಾಣಿಜ್ಯ ಸಿಲಿಂಡರ್ ತುಂಬಿದರೆ ಗೃಹ ಬಳಕೆಗೆ ಕೊರತೆಯಾಗುವ ಸಾಧ್ಯತೆ ಕಂಡುಬಂದಿದೆ, ಇದರಿಂದ ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡಿದೆ. ಕಳೆದ ಗುರುವಾರ ರಾತ್ರಿಯಿಂದಲೇ ವಾಣಿಜ್ಯ ಸಿಲಿಂಡರ್ ಪೂರೈಕೆ ಸ್ಥಗಿತವಾಗಿದೆ. ಎಚ್‌ಪಿ, ಭಾರತ್ ಹಾಗೂ ಇಂಡೇನ್ ಗ್ಯಾಸ್ ಕಂಪನಿಗಳ ವಾಣಿಜ್ಯ ಸಿಲಿಂಡರ್ ಸ್ಥಗಿತವಾಗಿದೆ. ಮೈಸೂರಿನ ಹೆಬ್ಬಾಳದ ಮುಖ್ಯ ಘಟಕದಿಂದ ಅನಿಲ ಪೂರೈಕೆಯಾಗುತ್ತಿತ್ತು. ಸದ್ಯ ಇರುವ ಅನಿಲವನ್ನು ಗೃಹ ಬಳಕೆಗೆ ಪೂರೈಕೆ ಮಾಡಲು ಸೂಚನೆ ಇದೆ. ವಾಣಿಜ್ಯ ಬಳಕೆಯ ಸಿಲಿಂಡರ್ ಭರ್ತಿ ಮಾಡದಂತೆ ಸೂಚನೆ ಇದೆ. ಹೀಗಾಗಿ ವಾಣಿಜ್ಯ ಬಳಕೆಯ ಸಿಲಿಂಡರ್ ಪೂರೈಸುತ್ತಿಲ್ಲ ಎಂದು ಸಿಲಿಂಡರ್ ಸರಬರಾಜು ಮಾಡುವ ಚಾಲಕರು ಹೇಳಿದ್ದಾರೆ. ಮಡಿಕೇರಿಯ ಗ್ಯಾಸ್ ಏಜೆನ್ಸಿ ಮಾಲೀಕ ರಮೇಶ್ ಪ್ರತಿಕ್ರಿಯೆ ನೀಡಿದ್ದು, ನಮ್ಮ ಏಜೆನ್ಸಿಯಿಂದಲೇ ನಿತ್ಯ 50 ವಾಣಿಜ್ಯ ಬಳಕೆ ಸಿಲಿಂಡರ್ ಬೇಡಿಕೆ ಇತ್ತು. ಆದರೆ ನಾಲ್ಕು ದಿನಗಳಿಂದ ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಸಿಲ್ಲ. ಹೊಟೇಲ್ ನವರ ಪ್ರಶ್ನೆಗೆ ನಾವು ಉತ್ತರ ಕೊಡಲಾಗುತ್ತಿಲ್ಲ. ನಾವು ಎಷ್ಟೇ ಇಂಡೆಂಟ್‌ ಹಾಕಿದರೂ ವಾಣಿಜ್ಯ ಸಿಲಿಂಡರ್ ಪೂರೈಸುತ್ತಿಲ್ಲ ಎಂದು ಹೇಳಿದ್ದಾರೆ.

ಇರುವ ಸಿಲಿಂಡರ್ ಬಳಕೆಯಾದರೆ ಹೊಟೇಲ್ ಬಂದ್ ಮಾಡಬೇಕಷ್ಟೇ. ಸೋಮವಾರ ಪಡೆದುಕೊಂಡಿರುವ ಸಿಲಿಂಡರ್ ಗಳಲ್ಲಿ ಮಂಗಳವಾರ ಹೊಟೇಲ್ ನಡೆಯುತ್ತಿದೆ. ಇರುವ ಸಿಲಿಂಡರ್ ಖಾಲಿಯಾದರೆ ನಾಳೆಯಿಂದ ಹೊಟೇಲ್ ತೆರೆಯುವುದು ಹೇಗೆ ಎನ್ನುವ ಆತಂಕ ಎದುರಾಗಿದೆ.ಇದರಿಂದ ಗ್ರಾಹಕರಿಗೆ ತೀವ್ರ ತೊಂದರೆ ಆಗಲಿದೆ.

ಹೊರ ಜಿಲ್ಲೆಗಳಿಂದ ಮಡಿಕೇರಿಗೆ ದೊಡ್ಡ ಸಂಖ್ಯೆಯಲ್ಲಿ ಸರ್ಕಾರಿ ಉದ್ಯೋಗಿಗಳು ಬರುತ್ತಾರೆ.

ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಬರುತ್ತಾರೆ. ಅವರೆಲ್ಲರಿಗೂ ತೀವ್ರ ತೊಂದರೆಯಾಗಲಿದೆ ಎನ್ನುತ್ತಿರುವ ಹೊಟೇಲ್ ಮಾಲೀಕರು, ಈಗ ಯಾರೂ ಹೊಟೇಲ್ ಗಳಲ್ಲಿ ಸೌದೆ ಹೊಲೆ ಇರಿಸಿಕೊಂಡಿಲ್ಲ.

ಹೊಟೇಲ್ ಬಂದ್ ಆದರೆ ನಮ್ಮಲ್ಲಿರುವ ಕೆಲಸಗಾರರು ಏನು ಮಾಡಬೇಕು? ಸಣ್ಣ ಹೊಟೇಲ್ ಗಳಲ್ಲೇ ಹತ್ತು ಹನ್ನೆರಡು ಸಿಬ್ಬಂದಿ ಇದ್ದಾರೆ. ಅವರ ಕುಟುಂಬಗಳು ಏನು ಮಾಡಬೇಕು ಎಂದು ಹೊಟೇಲ್ ಮಾಲೀಕ ರುದ್ರಶೆಟ್ಟಿ ಆತಂಕ ವ್ಯಕ್ತಪಡಿಸುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲ್ಕೂರರ ಮನೆಯಲ್ಲಿ ಮತ್ತೆ ಒಲೆಯೂಟಕ್ಕೆ ಸಿದ್ಧತೆ..
ವಿಜೃಂಭಣೆಯ ಕನಕಾಚಲಪತಿ ರಥೋತ್ಸವ