-2023ರ ಇಲೆಕ್ಷನ್‌ನಲ್ಲಿ ನಕಲಿ ಫಾರ್ಮ್ 7ಸಲ್ಲಿಸಿ ಮತದಾರರ ಹೆಸರು ಅಳಿಸುವ ಸಂಚು । ಆನ್‌ಲೈನ್ ಸಲ್ಲಿಕೆಯಾದ ಫಾರ್ಮ್ 7ರ 6, 018 ಅರ್ಜಿಗಳಲ್ಲಿ 5, 994 ನಕಲಿ
ಕನ್ನಡಪ್ರಭ ವಾರ್ತೆ ಕಲಬುರಗಿ
ಆನ್‌ಲೈನ್ ಮೂಲಕ ಫಾರ್ಮ ನಂಬರ್ 7ರಲ್ಲಿ ಅರ್ಜಿ ಸಲ್ಲಿಸಿ ಮತದಾರರ ಪಟ್ಟಿಯಿಂದ ಸಾವಿರಾರು ಜನರ ಹೆಸರು ತೆಗೆದು ಹಾಕಿರುವ ಆಳಂದ ಅಸೆಂಬ್ಲಿ ಕಣದ 2023ರ ಚುನಾವಣೆಯಲ್ಲಿ ನಡೆದಿದೆ ಎನ್ನಲಾಗಿರುವ ಮತ ಚೋರಿ ಕೇಸ್‌ನ ತನಿಖೆಗೆ ಮುಂದಾಗಿರುವ ಪೊಲೀಸ್ ಸಿಐಡಿ, ಸೈಬರ್ ಕ್ರೈಂ ನವರಿಗೆ ಅಗತ್ಯ ದಾಖಲೆ ಕೊಡದೆ ಚುನಾವಣಾ ಆಯೋಗ ತನಿಖೆಗೆ ಅಸಹಕಾರ ತೋರುತ್ತಿದೆ ಎಂದು ಶಾಸಕ ಬಿಆರ್ ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲರು, ಫಾರ್ಮ್ 7ರಲ್ಲಿ ಹೆಸರು ಕೈಬಿಡುವಂತೆ ಸಾಮೂಹಿಕವಾಗಿ ಆನ್‌ಲೈನ್‌ನಲ್ಲಿ ಸಲ್ಲಿಕೆಯಾಗಿದ್ದ 6, 018 ಅರ್ಜಿಗಳಲ್ಲಿ 5, 994 ಅರ್ಜಿಗಳು ನಕಲಿ ಎಂದು ಸಾಬೀತಾಗಿದೆ. ಆಗಿನ ಆಳಂದ ಕ್ಷೇತ್ರದ ಚುನಾವಣಾಧಿಕಾರಿ ಸ್ಥಳೀಯ ಪೊಲೀಸರಿಗೆ ದೂರು ಸಲ್ಲಿಸಿದಾಗ ಎಫ್‌ಐಆರ್ ದಾಖಲಾಗಿ ತನಿಖೆ ಸಾಗಿತ್ತು.
ರಾಹುಲ್ ಗಾಂಧಿ ಆರಂಭಿಸಿರುವ ಮತ ಚೋರಿ ಅಭಿಯಾನಕ್ಕೆ ಆಳಂದದ ಪ್ರಕರಣ ಪುಷ್ಟಿ ನೀಡಿದೆ. ಕಾಂಗ್ರೆಸ್ ಪಕ್ಷದ ಡೇಟಾ ವಿಶ್ಲೇಷಕರಿಂದ ಬುಲಾವ್ ಬಂದಿದ್ದು ಎಲ್ಲಾ ದಾಖಲೆ ಜೊತೆಗೇ ತಾವು ದೆಹಲಿಗೆ ಹೋಗುತ್ತಿರುವುದಾಗಿ ಪಾಟೀಲ್ ಹೇಳಿದ್ದಾರೆ.
ಇದೆಲ್ಲವೂ ಸಾಮೂಹಿಕ ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವ ಸಂಚಿನ ಭಾಗ. ಈ ಬಗ್ಗೆ ಕೇಸ್ ದಾಖಲಾದರೂ ಆಯೋಗದವರು ತನಿಖೆಗೆ ಸಹಕರಿಸುತ್ತಿಲ್ಲ. ಹೀಗಾಗಿ ಆಯೋಗದ ಈ ಧೋರಣೆಯನ್ನೇ ಗುಮಾನಿಯಿಂದ ನೋಡುವಂತಾಗಿದೆ. ಆಯೋಗದವರ ಈ ವರ್ತನೆ ಮತ ಚೋರಿಯನ್ನು ಪುಷ್ಟೀಕರಿಸುವಂತಿದೆ. ಬಿಜೆಪಿಗೆ ನೆರವು ನೀಡುವ ಉದ್ದೇಶದಿಂದ ಜಿದ್ದಾಜಿದ್ದಿ ಕಣಗಳನ್ನು ಆಯ್ಕೆ ಮಾಡಿ ಈ ರೀತಿ ಸಾಮೂಹಿಕ ಮತಗಳನ್ನೇ ತೆಗೆದು ಹಾಕುವ ಸಂಚು ರೂಪಿಸಲಾಗುತ್ತಿದೆ, ಅದರಲ್ಲಿ ಆಳಂದ ಕೂಡಾ ಸೇರಿದೆ ಎಂದು ಪಾಟೀಲ್ ದೂರಿದ್ದಾರೆ.
ಸಂಚು ರೂಪಿಸಿದವರನ್ನು ಪತ್ತೆ ಹಚ್ಚೋದೆ ತನಿಖೆಯ ಉದ್ದೇಶ. ತಮ್ಮ ಎದುರಾಳಿ ಬಿಜೆಪಿ ಅಭ್ಯರ್ಥಿಗೆ ನೆರವು ನೀಡಲೆಂದೇ ಚುನಾವಣಾ ಆಯೋಗ ಕೇಳಿದ ತಾಂತ್ರಿಕ ಮಾಹಿತಿ ನೀಡದೆ ಅಸಹಕಾರ ತೋರುತ್ತಿದೆ ಎಂದು ಪಾಟೀಲರು ದೂರಿದರು.
ಚುನಾವಣಾ ಆಯೋಗ ತನಿಖೆಗೆ ಅಸಹಕಾರ ನೋಡಿದರೆ ತಮ್ಮ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಹಾಗೂ ಚುನಾವಣಾ ಆಯೋಗ ಸೇರಿಕೊಂಡು ಸಂಚು ರೂಪಿಸಿದೆ ಎಂಬ ಅನುಮಾನ ಕಾಡುತ್ತಿದೆ. ನ್ಯಾಯಸಮ್ಮತ ಚುನಾವಣೆಗಳೇ ನಡೆಯದೆ ಹೋದಲ್ಲಿ ಇಂತಹ ಸಂಚು ರೂಪಿಸುವವರಿದ್ದರೆ ಮುಂದೆ ಏನು ಗತಿ? ಎಂದು ಬಿಆರ್ ಪಾಟೀಲ್ ಆತಂಕ ಹೊರಹಾಕಿದರು.
- ಒಬ್ಬನಿಂದಲೇ 40 ಫಾರ್ಮ್- 7ಅರ್ಜಿ, ಹಸ್ತಾಕ್ಷರ, ಬೆರಳಚ್ಚು ಯಾವುದೂ ಇಲ್ಲದ ಅರ್ಜಿಗಳು
- 40 ಕೇಸ್‌ನಲ್ಲಿ ವೋಟರ್ ಲಿಸ್ಟ್ ಮೊದಲ ಹೆಸರೇ ಮಾಯ, ತನಿಖೆಗೆ ಚುನಾವಣೆ ಆಯೋಗ ಅಸಹಕಾರ
-ಮೂಲ ಐಪಿ ಲಾಗ್ ಒದಗಿಸಿದ್ದ ಆಯೋಗದಿಂದ ಡೆಸ್ಟಿನೇಷನ್ ಐಪಿ, ಪೋರ್ಟ್ ನೀಡಲು ನಿರಾಕರಣೆ-ಆಯೋಗದ ಅಸಹಕಾರ, ತನಿಖೆ ವಿಳಂಬ, ಮತ ಚೋರಿ ಕೇಸ್ ಈಗ ಸೈಬರ್ ಕ್ರೈಂಗೆ ಹಸ್ತಾಂತರ
--------ಫೋಟೋ- ಪಾಟೀಲ್ ಆಳಂದ 1 ಮತ್ತು 2