ಭ್ರಷ್ಟಾಚಾರ ನಿರ್ಮೂಲನೆಗೆ ಬದ್ಧರಾಗಿ

KannadaprabhaNewsNetwork |  
Published : Nov 05, 2023, 01:15 AM IST
ಹೊಸಪೇಟೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌, ಎಸ್ಪಿ ಬಿ.ಎಲ್‌. ಶ್ರೀಹರಿಬಾಬು, ಲೋಕಾಯುಕ್ತ ಬಳ್ಳಾರಿ ಎಸ್ಪಿ ಎಂ.ಎನ್. ಶಶಿಧರ್‌ ಪೋಸ್ಟರ್‌ ಬಿಡುಗಡೆಗೊಳಿಸಿದರು. | Kannada Prabha

ಸಾರಾಂಶ

ದೇಶದ ಅಭಿವೃದ್ಧಿಗೆ ಭ್ರಷ್ಟಾಚಾರ ಮಾರಕವಾಗಿದ್ದು, ಇದರ ನಿರ್ಮೂಲನೆಗೆ ಅಧಿಕಾರಿಗಳು ಬದ್ಧರಾಗಬೇಕು ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌ ಹೇಳಿದರು. ವಿಜಯನಗರ ಜಿಲ್ಲಾಡಳಿತ ಹಾಗೂ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಸಹಯೋಗದಲ್ಲಿ ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹೊಸಪೇಟೆ: ದೇಶದ ಅಭಿವೃದ್ಧಿಗೆ ಭ್ರಷ್ಟಾಚಾರ ಮಾರಕವಾಗಿದ್ದು, ಇದರ ನಿರ್ಮೂಲನೆಗೆ ಅಧಿಕಾರಿಗಳು ಬದ್ಧರಾಗಬೇಕು ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌ ಹೇಳಿದರು.

ವಿಜಯನಗರ ಜಿಲ್ಲಾಡಳಿತ ಹಾಗೂ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಸಹಯೋಗದಲ್ಲಿ ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಭ್ರಷ್ಟಾಚಾರ ನಿರ್ಮೂಲನೆಗಾಗಿ ಎಲ್ಲ ಇಲಾಖೆಗಳಲ್ಲಿ ವಿಜಿಲೆನ್ಸ್ ರಚಿಸಲು ಚಿಂತನೆ ಮಾಡಲಾಗುತ್ತಿದೆ. ಈ ದಿಶೆಯಲ್ಲಿ ಭ್ರಷ್ಟಾಚಾರ ತಡೆಗೆ ನಮ್ಮ ರಾಜ್ಯದ ಬಲಿಷ್ಠ ಲೋಕಾಯುಕ್ತವು ದೇಶದ ಇತರ ರಾಜ್ಯಗಳಿಗೆ ಮಾದರಿಯಾಗಿದೆ. ಅದೇ ರೀತಿ ಪೊಲೀಸ್ ಇಲಾಖೆಯೂ ಮಾದರಿಯಾಗಿದ್ದು, ನಮ್ಮ ರಾಜ್ಯದ ಯುನಿಫಾರ್ಮ್ ಕೋಡ್ ಅನ್ನು ದೇಶದಲ್ಲಿ ಒಂದೇ ರೀತಿ ಮಾಡುವ ಪ್ರಯತ್ನವಾಗುತ್ತಿದೆ. ಲೋಕಾಯುಕ್ತವು ದೇಶದಲ್ಲಿ ಒಳ್ಳೆಯ ಹೆಸರನ್ನು ಪಡೆದಿದೆ. ಭ್ರಷ್ಟಾಚಾರದಿಂದ ದೇಶದ ಆರ್ಥಿಕತೆ, ಅಭಿವೃದ್ಧಿಗೆ ಹಿನ್ನೆಡೆ ಯಾಗುತ್ತದೆ. ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರದ ನಿರ್ಮೂಲನೆ ಅತ್ಯವಶ್ಯಕವಾಗಿದ್ದು, ಪ್ರತಿಯೊಬ್ಬ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿ, ದೇಶ, ರಾಜ್ಯ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಲ್‌. ಶ್ರೀಹರಿಬಾಬು ಮಾತನಾಡಿ, ಭ್ರಷ್ಟಾಚಾರ ವಿರುದ್ಧ ಜಾಗೃತಿ ಕಾರ್ಯಕ್ರಮಗಳು ಆಗಿಂದಾಗ್ಗೆ ನಡೆಯಬೇಕು. ಇದರಿಂದ ಹೆಚ್ಚಿನ ಅರಿವು ಮೂಡಿಸಿದಂತಾಗುತ್ತದೆ. ಸಾಮಾನ್ಯವಾಗಿ ಲೋಕಾಯುಕ್ತ ಟ್ರಾಪ್ ಬಗ್ಗೆ ಅಷ್ಟೇ ತಿಳಿದಿರುತ್ತದೆ. ಅನಾವಶ್ಯಕವಾಗಿ ಅಧಿಕಾರಿಗಳಿಗೆ ಬ್ಲಾಕ್ ಮೇಲ್ ಮಾಡುವುದು ಅಥವಾ ತೊಂದರೆ ಕೊಡುವ ಪ್ರಕರಣಕ್ಕೆ ರಿವರ್ಸ್ ಟ್ರಾಪ್ ಮಾಡಬಹುದು. ಈ ಬಗ್ಗೆ ಇಂತಹ ಕಾರ್ಯಕ್ರಮಗಳ ಮೂಲಕ ಮಾಹಿತಿ ಪಡೆಯಬಹುದು ಎಂದರು.

ಲೋಕಾಯುಕ್ತ ಬಳ್ಳಾರಿ ಎಸ್ಪಿ ಎಂ.ಎನ್. ಶಶಿಧರ್‌ ಮಾತನಾಡಿ, ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಮಾತ್ರ ದೇಶ ಅಭಿವೃದ್ಧಿ ಸಾಧ್ಯ. ಸರ್ಕಾರದ ಹಲವಾರು ಯೋಜನೆಗಳು ಅರ್ಹ ಫಲಾನುಭವಿಗಳಿಗೆ ದೊರೆಯದೇ ಮಧ್ಯವರ್ತಿಗಳ ಪಾಲಾಗುತ್ತಿದೆ. ಸಾರ್ವಜನಿಕರಿಗೆ ತ್ವರಿತವಾಗಿ ಸೇವೆಗಳು ಸಿಗಬೇಕು. ಈ ದಿಶೆಯಲ್ಲಿ ಅಧಿಕಾರಿ ವರ್ಗದವರು ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು. ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲು ''''ಭ್ರಷ್ಟಾಚಾರ ವಿರೋಧಿಸಿ; ರಾಷ್ಟ್ರಕ್ಕೆ ಬದ್ಧರಾಗಿ'''' ಎಂಬ ಘೋಷ ವಾಕ್ಯದೊಂದಿಗೆ ಜಾಗೃತಿ ಅರಿವು ಸಪ್ತಾಹ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಪ್ರತಿಜ್ಞಾವಿಧಿ: ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸುವ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು. ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸುವ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ವಿಜಯನಗರ (ಹೊಸಪೇಟೆ) ಲೋಕಾಯುಕ್ತ ಪೊಲೀಸ್ ನಿರೀಕ್ಷಕ ರಾಜೇಶ್‌ ಎಸ್‌.ಎಲ್. ಹಾಗೂ ಸುರೇಶಬಾಬು ಆರ್.ಬಿ. ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೆಡಿಯು ನಾಯಕ ನಿತೀಶ್‌ ರಾಜ್ಯಸಭೆಗೆ - ಸಿಎಂ ಸ್ಥಾನಕ್ಕೆ ರಾಜೀನಾಮೆ
ಈ ಸಾಲಲ್ಲಿ ಅಬಕಾರಿ ರಾಜಸ್ವ ಟಾರ್ಗೆಟ್‌ ಕಷ್ಟ? 11 ತಿಂಗಳಲ್ಲಿ ಮದ್ಯ ಮಾರಾಟ ಗಣನೀಯ ಕುಸಿತ