ಹೊಸಪೇಟೆ: ತಂಬಾಕು ಸೇವನೆಯು ಕೇವಲ ಒಬ್ಬ ವ್ಯಕ್ತಿಯ ಆರೋಗ್ಯ ಹಾಳುಗೆಡವುದಲ್ಲದೆ, ಇಡೀ ಕುಟುಂಬದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಂಕಷ್ಟಕ್ಕೆ ಸಿಲುಕಿ ಬೀದಿಪಾಲು ಮಾಡುತ್ತದೆ. ಜಿಲ್ಲೆಯನ್ನು ಸಂಪೂರ್ಣ ತಂಬಾಕು ಮುಕ್ತ ಜಿಲ್ಲೆಯನ್ನಾಗಿ ಮಾಡಲು ಪ್ರತಿಯೊಬ್ಬರು ಪಣ ತೊಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಲ್.ಆರ್.ಶಂಕರ್ ನಾಯ್ಕ ಕರೆ ನೀಡಿದರು.
ದೇಶದಲ್ಲಿ ಪ್ರಸ್ತುತ ಸುಮಾರು 80 ಲಕ್ಷ ಕ್ಯಾನ್ಸರ್ ಪ್ರಕರಣಗಳಿವೆ. ಅದರಲ್ಲಿ 70 ಲಕ್ಷ ಪುರುಷರು ಹಾಗೂ 10 ಲಕ್ಷ ಮಹಿಳೆಯರು ಈ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅದರಂತೆ ಜಿಲ್ಲೆಯಲ್ಲಿ ಪ್ರತಿ ವರ್ಷ ಸುಮಾರು 200 ರಿಂದ 250 ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತಿವೆ ಎಂದರು.
ಬೃಹತ್ ಜಾಥಾ:ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬೃಹತ್ ಜನ ಜಾಗೃತಿ ಜಾಥಾ ಕಾರ್ಯಕ್ರಮ ನಡೆಸಲಾಯಿತು. ಜಾಥಾವು ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಮುಂಭಾಗದಿಂದ ಆರಂಭವಾಗಿ ಪುಣ್ಯ ಮೂರ್ತಿ ವೃತ್ತ, ಶಾನಭಾಗ ವೃತ್ತ, ಬಸ್ ನಿಲ್ದಾಣ, ಡಾ.ಪುನೀತ್ ರಾಜಕುಮಾರ್ ವೃತ್ತ, ಅಂಬೇಡ್ಕರ್ ವೃತ್ತ ಹೀಗೆ ನಗರದ ಪ್ರಮುಖ ಬೀದಿಗಳಲ್ಲಿ ತಂಬಾಕು ಲೈಂಗಿಕ ಸಮಸ್ಯೆಗೆ ಹಾನಿ, ಮಗುವಿನ ಬೆಳವಣಿಗೆಗೆ ಮಾರಕ ಹೀಗೆ ಹಲವು ಘೋಷಣೆಗಳ ಕೂಗುವ ಮೂಲಕ ಪುನಃ ಆರೋಗ್ಯಾಧಿಕಾರಿಗಳ ಕಚೇರಿ ತಲುಪಿ ಮುಕ್ತಾಯಗೊಂಡಿತು.
ಈ ವೇಳೆ ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಜಂಬಯ್ಯ, ತಂಬಾಕು ನಿಯಂತ್ರಣ ಕೋಶ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಷಣ್ಮುಖ ನಾಯ್ಕ, ಕುಟುಂಬ ಕಲ್ಯಾಣಾಧಿಕಾರಿ ಡಾ.ವಿನಯ್, ತಾಲೂಕು ಆರೋಗ್ಯಾಧಿಕಾರಿ ಡಾ.ವಿನೋದ್, ಕುಷ್ಟರೋಗ ರೋಗ ನಿಯಂತ್ರಣಾಧಿಕಾರಿ ಡಾ.ರಾಧಿಕಾ, ವಕೀಲರ ಸಂಘದ ಕಾರ್ಯದರ್ಶಿ ಕೃಷ್ಣದೇವರಾಯುಲು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ, ಶ್ರೀಪತಿ ನರ್ಸಿಂಗ್ ಕಾಲೇಜು ಮತ್ತು ಟಿಎಂಇಎ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.