ಗುಣಮಟ್ಟದ ವೈದ್ಯಕೀಯ ಸೇವೆ ಸರ್ಕಾರದ ಗುರಿ: ಡಿಕೆ

KannadaprabhaNewsNetwork |  
Published : Sep 21, 2026, 03:45 AM IST
MULTI SPECIIALITY HOSPITA 2 | Kannada Prabha

ಸಾರಾಂಶ

ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಸಿಗುವಂತೆ ಮಾಡುವುದು ಸರ್ಕಾರದ ಮುಖ್ಯಗುರಿ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

-ಹೆಬ್ಬಾಳದಲ್ಲಿ ₹150 ಕೋಟಿ ವೆಚ್ಚದಲ್ಲಿ 125 ಹಾಸಿಗೆ ಸಾಮರ್ಥ್ಯದ ಹೈಟೆಕ್‌ ಸೂಪರ್‌ ಸ್ಪೆಷಾಲಿಟಿ ಸರ್ಕಾರಿ ಆಸ್ಪತ್ರೆ ಶಂಕುಸ್ಥಾಪನೆ ನೆರವೇರಿಸಿದ ಸಿಎಂ

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಸಿಗುವಂತೆ ಮಾಡುವುದು ಸರ್ಕಾರದ ಮುಖ್ಯಗುರಿ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಭಾನುವಾರ ಹೆಬ್ಬಾಳದ ಭೂಪಸಂದ್ರದಲ್ಲಿರುವ ಪಶು ವೈದ್ಯಕೀಯ ಕಾಲೇಜು ಆವರಣದಲ್ಲಿ ಸೂಪರ್‌ಸ್ಪೆಷಾಲಿಟಿ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಸಾರಿಗೆ ಸಚಿವ ಹಾಗೂ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಶಾಸಕ ಬೈರತಿ ಸುರೇಶ್‌ ಅವರು ಒಂದು ಪವಿತ್ರವಾದ ಕೆಲಸ ಮಾಡುತ್ತಿದ್ದಾರೆ. ಮಹಾಭಾರತದ ಭೀಷ್ಮರು ಧರ್ಮರಾಯನಿಗೆ ಹೇಳಿದಂತೆ ಮನುಷ್ಯನು ದೇವ ಋಣ, ಗುರು ಋಣ, ಸಮಾಜದ ಋಣ ಹಾಗೂ ಧರ್ಮದ ಋಣವನ್ನು ತೀರಿಸಬೇಕು. ಬೈರತಿ ಸುರೇಶ್ ಅವರು ತಮ್ಮ ಕ್ಷೇತ್ರದ ಜನರಿಗೆ ಆರೋಗ್ಯ ಭಾಗ್ಯ ನೀಡುವ ಮೂಲಕ ಸಮಾಜದ ಋಣ ತೀರಿಸುವ ಪವಿತ್ರ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಪ್ರಸ್ತುತ ಅನುಮೋದನೆಗೊಂಡಿರುವ ₹150 ಕೋಟಿ ಯೋಜನೆಯ ಆಸ್ಪತ್ರೆಯನ್ನು ಕೇವಲ 3 ಮಹಡಿಗಳಿಗೆ ಸೀಮಿತಗೊಳಿಸದೆ, ಭವಿಷ್ಯದ ಅಗತ್ಯಕ್ಕೆ ತಕ್ಕಂತೆ ಎಂಟು ಮಹಡಿಗಳ ಬೃಹತ್ ಕಟ್ಟಡವನ್ನಾಗಿ ವಿನ್ಯಾಸಗೊಳಿಸಲು ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಿಂದೆ ದೊಡ್ಡ ದೊಡ್ಡ ಆಸ್ಪತ್ರೆಗಳು ನಿರ್ಮಾಣಗೊಂಡಿದ್ದವು. ಬೌರಿಂಗ್‌ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ ಎಲ್ಲಾ ಬ್ರಿಟಿಷರ ಕಾಲದಲ್ಲಿ, ಮಹಾರಾಜರ ಕಾಲದಲ್ಲಿ ಇತ್ತು. ಆ ನಂತರ ಇಂತಹ ಆಸ್ಪತ್ರೆಗಳು ಮತ್ತೆ ಪ್ರಾರಂಭವಾಗಿರುವುದು ನಮ್ಮ ಕಾಲದಲ್ಲಿ ಎಂದರು.

ಇಡೀ ದೇಶದಲ್ಲೇ ಅತ್ಯುತ್ತಮ ಆರೋಗ್ಯ ಮೂಲಸೌಕರ್ಯ ಹೊಂದಿರುವ ರಾಜ್ಯ ಕರ್ನಾಟಕ. ರಾಜ್ಯದಲ್ಲಿ 61 ವೈದ್ಯಕೀಯ ಕಾಲೇಜುಗಳಿದ್ದು, ವರ್ಷಕ್ಕೆ 13,940ಕ್ಕೂ ಹೆಚ್ಚು ವೈದ್ಯರು ಉತ್ತೀರ್ಣರಾಗುತ್ತಿದ್ದಾರೆ. ಜೊತೆಗೆ 37 ಡೆಂಟಲ್, 150 ಆಯುಷ್, 681 ನರ್ಸಿಂಗ್ ಹಾಗೂ 150 ಫಾರ್ಮಸಿ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಫಿಸಿಯೋಥೆರಪಿಯಲ್ಲಿ 169 ಕಾಲೇಜ್‌, ಅಲೈಡ್‌ ಹೆಲ್ತ್‌ ಸೈನ್ಸಸ್‌ನಲ್ಲಿ ಸುಮಾರು 216 ಕಾಲೇಜ್‌ಗಳು ಇವೆ. ಇಡೀ ದೇಶದಲ್ಲಿ ಯಾವ ರಾಜ್ಯದಲ್ಲೂ ನಮ್ಮಲ್ಲಿ ಇರುವಂತಹ ಆರೋಗ್ಯ ವ್ಯವಸ್ಥೆ ಇಲ್ಲ ಎಂದು ಹೇಳಿದರು.

ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಫ್ಲೈಓವರ್, ಅಂಡರ್‌ಪಾಸ್ ಹಾಗೂ ಟನಲ್ ಯೋಜನೆಗಳಿಗಾಗಿ ಮುಂದಿನ 4-5 ವರ್ಷಗಳಲ್ಲಿ ಸುಮಾರು 1.5 ಲಕ್ಷ ಕೋಟಿ ರು.ಗಳ ಬೃಹತ್ ಯೋಜನೆಗಳನ್ನು ಹಂತ-ಹಂತವಾಗಿ ಅನುಷ್ಠಾನಗೊಳಿಸಲಾಗುವುದು. ಬೆಂಗಳೂರಿಗೆ ಸುಮಾರು 49 ಲಕ್ಷ ಜನರು ಹೊರಗಡೆಯಿಂದ ಬಂದು ಉದ್ಯೋಗಕ್ಕೋಸ್ಕರ ಇಲ್ಲಿ ನೆಲೆಸಿಸಿದ್ದಾರೆ. ಒಂದು ಕಾಲದಲ್ಲಿ ಕೇವಲ 20 ಲಕ್ಷ ಜನಸಂಖ್ಯೆ ಬೆಂಗಳೂರಿನಲ್ಲಿತ್ತು. ಇವತ್ತು 1.41 ಕೋಟಿ ಜನಸಂಖ್ಯೆಯಿದೆ. ಹಾಗಾಗಿ ಆರೋಗ್ಯ ಮತ್ತು ಶಿಕ್ಷಣಕ್ಕೆ ನಾವು ಹೆಚ್ಚಿನ ಆದ್ಯತೆ ನೀಡಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಸಚಿವರಾದ ಯು.ಟಿ. ಖಾದರ್, ಮುನಿಯಪ್ಪ, ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಶಾಸಕ ಬೈರತಿ ಸುರೇಶ್ ಸೇರಿದಂತೆ ಇತರರು ಇದ್ದರು.

ಫೋಟೋ ))))

ಹೆಬ್ಬಾಳದ ಭೂಪಸಂದ್ರದಲ್ಲಿರುವ ಪಶು ವೈದ್ಯಕೀಯ ಕಾಲೇಜು ಆವರಣದಲ್ಲಿ ಸೂಪರ್‌ಸ್ಪೆಷಾಲಿಟಿ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೇರವೇರಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಬೆಳ್ಳಿ ಗದೆ ನೀಡಿ ಸಚಿವ ಬೈರತಿ ಸುರೇಶ್‌ ಸನ್ಮಾನಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೋದಿ ಜನ್ಮದಿನಕ್ಕೆ ಅಶೋಕ್‌ ನೇತೃತ್ವ ಪದ್ಮನಾಭನಗರ ಕೆರೆಯಲ್ಲಿ ಗಂಗಾರತಿ
ಜೈವಿಕ ಇಂಧನದ ಕುರಿತು ಜಪಾನ್‌ ಅಧಿಕಾರಿಗಳ ಜತೆ ಸುಧೀಂದ್ರ ಚರ್ಚೆ