ಡೀಮ್ಡ್ ಅರಣ್ಯ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಬದ್ಧ: ಖಂಡ್ರೆ

KannadaprabhaNewsNetwork |  
Published : May 27, 2026, 03:15 AM IST
ಖಂಡ್ರೆ | Kannada Prabha

ಸಾರಾಂಶ

ಪಶ್ಚಿಮ ಘಟ್ಟದ ಒಟ್ಟು ಭೌಗೋಳಿಕ ವ್ಯಾಪ್ತಿಯ ಪೈಕಿ ಶೇ. 83ರಷ್ಟು ಅರಣ್ಯ ಪ್ರದೇಶವು ಮೀಸಲು ಅರಣ್ಯ, ವನ್ಯಜೀವಿ ಧಾಮಗಳು, ರಾಷ್ಟ್ರೀಯ ಉದ್ಯಾನಗಳು ಮತ್ತು ನದಿ ಮೂಲಗಳ ಮೂಲಕ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ರಾಜ್ಯ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಸ್ಪಷ್ಟಪಡಿಸಿದ್ದಾರೆ.

ಕಾರ್ಕಳ: ಪಶ್ಚಿಮ ಘಟ್ಟದ ಒಟ್ಟು ಭೌಗೋಳಿಕ ವ್ಯಾಪ್ತಿಯ ಪೈಕಿ ಶೇ. 83ರಷ್ಟು ಅರಣ್ಯ ಪ್ರದೇಶವು ಮೀಸಲು ಅರಣ್ಯ, ವನ್ಯಜೀವಿ ಧಾಮಗಳು, ರಾಷ್ಟ್ರೀಯ ಉದ್ಯಾನಗಳು ಮತ್ತು ನದಿ ಮೂಲಗಳ ಮೂಲಕ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ರಾಜ್ಯ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಸ್ಪಷ್ಟಪಡಿಸಿದ್ದಾರೆ.ಸೋಮವಾರ ಕಾರ್ಕಳದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ (ಕುದುರೆಮುಖ ವನ್ಯಜೀವಿ ಉಪವಿಭಾಗ) ಹಾಗೂ ವಲಯ ಅರಣ್ಯಾಧಿಕಾರಿಗಳ ಕಚೇರಿ (ಪ್ರಾದೇಶಿಕ ವಲಯ) ನೂತನ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಪರಿಸರ ಮತ್ತು ಅರಣ್ಯ ಸಂರಕ್ಷಣೆಯ ಜವಾಬ್ದಾರಿಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ ಎಂದರು.

ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪರಿಭಾವಿತ (ಡೀಮ್ಡ್) ಅರಣ್ಯ ಪ್ರದೇಶವನ್ನು ಗುರುತಿಸುವಾಗ ನಡೆದ ಅವೈಜ್ಞಾನಿಕ ಸಮೀಕ್ಷೆಯಿಂದಾಗಿ ಸಾರ್ವಜನಿಕರಿಗೆ ದೊಡ್ಡ ಮಟ್ಟದ ಸಮಸ್ಯೆ ಉಂಟಾಗಿದೆ ಎಂದು ಸಚಿವರು ಟೀಕಿಸಿದರು. 2022ರಲ್ಲಿ ಯಾವುದೇ ಸಮರ್ಪಕ ಪರಿಶೀಲನೆ ನಡೆಸದೆ ಕಂದಾಯ ಮತ್ತು ಅರಣ್ಯ ಇಲಾಖೆ ಆತುರದಲ್ಲಿ 3 ಲಕ್ಷದ 30 ಸಾವಿರ ಹೆಕ್ಟೇರ್ ಜಮೀನನ್ನು ಡೀಮ್ಡ್ ಅರಣ್ಯ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದವು. ಈ ತಪ್ಪಿನಿಂದಾಗಿ ಶಾಲೆಗಳು, ಆಸ್ಪತ್ರೆಗಳು, ಅಂಗನವಾಡಿಗಳು, ಸರ್ಕಾರಿ ವಸತಿ ನಿಲಯಗಳು ಮತ್ತು ಮಧ್ಯಮ ವರ್ಗದ ಜನರ ಪಟ್ಟಾ ಭೂಮಿ ಅರಣ್ಯ ವ್ಯಾಪ್ತಿಗೆ ಸೇರ್ಪಡೆಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದರು.ಈ ಲೋಪ ಸರಿಪಡಿಸಲು ಪ್ರಸ್ತುತ ಸರ್ಕಾರ ಬದ್ಧವಾಗಿದ್ದು, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು, ಪ್ರಾದೇಶಿಕ ಮಟ್ಟದಲ್ಲಿ ಪ್ರಾದೇಶಿಕ ಆಯುಕ್ತರು ಮತ್ತು ರಾಜ್ಯ ಮಟ್ಟದಲ್ಲಿ ಅರಣ್ಯ ಇಲಾಖೆಯ ಅಪರ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಈಗಾಗಲೇ ಅರಣ್ಯ ಮತ್ತು ಕಂದಾಯ ಇಲಾಖೆಯ ಜಂಟಿ ಸಮೀಕ್ಷೆ ಕಾರ್ಯ ಶೇ. 65ರಷ್ಟು ಪೂರ್ಣಗೊಂಡಿದೆ. ಸಮೀಕ್ಷೆ ಸಂಪೂರ್ಣವಾದ ನಂತರ ಸುಪ್ರೀಂ ಕೋರ್ಟ್‌ಗೆ ಮರು ಮನವಿ ಸಲ್ಲಿಸುವ ಮೂಲಕ ಡೀಮ್ಡ್ ಅರಣ್ಯದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಗಣಿಗಾರಿಕೆ ವಿಚಾರವಾಗಿ ಸ್ಪಷ್ಟನೆ ನೀಡಿದ ಸಚಿವರು, ಕುದುರೆಮುಖ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ನಡೆಯುತ್ತಿಲ್ಲ ಮತ್ತು ಭವಿಷ್ಯದಲ್ಲೂ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಪುನರುಚ್ಚರಿಸಿದರು. ಕೆಐಒಸಿಎಲ್ ಅರಣ್ಯ ಇಲಾಖೆಗೆ ಪಾವತಿಸಬೇಕಾದ ದಂಡದ ವಿಚಾರವಾಗಿ ಹೈಕೋರ್ಟ್ ನಿರ್ದೇಶನ ನೀಡಿದ್ದು, ನ್ಯಾಯಾಲಯದ ಆದೇಶದಂತೆ ಸರ್ಕಾರ ದಂಡ ವಸೂಲಿ ಮಾಡಲಿದೆ. ದಂಡ ಪಾವತಿಸಲು ನ್ಯಾಯಾಲಯವು ಕಾಲಮಿತಿಯನ್ನು ವಿಧಿಸಿದ್ದು, ಆ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದರು.

ಅರಣ್ಯ ರಕ್ಷಣೆಯಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸುವ ಸಿಬ್ಬಂದಿಯ ಸುರಕ್ಷತೆ ಸರ್ಕಾರಕ್ಕೆ ಮುಖ್ಯವಾಗಿದೆ. ಇದಕ್ಕಾಗಿ ಸಿಬ್ಬಂದಿಗೆ ಸುಧಾರಿತ ವಿದ್ಯುತ್ ಪ್ರವಹಿಸುವ ಕೈಗೋಲು (ಸ್ಟಿಕ್), ಮಳೆಯಿಂದ ರಕ್ಷಿಸಿಕೊಳ್ಳಲು ಅಗತ್ಯವಿರುವ ಜಾಕೆಟ್ ಮತ್ತು ಶೂಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ, ಆನೆ ಕಾರ್ಯಪಡೆ, ಕಳ್ಳಬೇಟೆ ನಿಗ್ರಹ ದಳ ಮತ್ತು ಮುಂಚೂಣಿ ಸಿಬ್ಬಂದಿಗೆ ವಸತಿ ಗೃಹಗಳ ಲಭ್ಯತೆ ಮತ್ತು ಅವರಿಗೆ ಅಪಾಯ ಭತ್ಯೆ (ರಿಸ್ಕ್ ಅಲೊಯನ್ಸ್) ಸರಿಯಾಗಿ ತಲುಪುತ್ತಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವಂತೆ ನಿರ್ದೇಶನ ನೀಡಿದರು.

ರಾಜ್ಯದಲ್ಲಿ ಪರಿಸರ ಸಮತೋಲನ ಕಾಪಾಡುವ ದಿಸೆಯಲ್ಲಿ ‘ಮರಗಂತಿ ಕಪ್ಪೆ’ಯನ್ನು ರಾಜ್ಯದ ಅಧಿಕೃತ ಉಭಯ ಜೀವಿ ಮತ್ತು ‘ತುಡುವೆ ಜೇನು’ವನ್ನು ರಾಜ್ಯದ ಕೀಟವನ್ನಾಗಿ ಘೋಷಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ನದಿ ಮಾಲಿನ್ಯ ಮತ್ತು ಇತರ ಪರಿಸರ ಸಂಬಂಧಿತ ದೂರುಗಳು ತಮ್ಮ ಗಮನಕ್ಕೆ ಬಂದರೆ, ತಜ್ಞರ ವರದಿ ಆಧರಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ನ್ಯೂಕ್ಲಿಯರ್ ಪವರ್ ಪ್ಲಾಂಟ್ ಸ್ಥಾಪನೆಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಸರ್ಕಾರದ ಮುಂದೆ ಅಂತಹ ಯಾವುದೇ ಪ್ರಸ್ತಾವನೆ ಇಲ್ಲ, ಬಂದಾಗ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ತಲಾ 20 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾದ ನೂತನ ಕಟ್ಟಡಗಳನ್ನು ಲೋಕಾರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕರಿಕಳನ್, ಕಮಲಾ ಕರಿಕಳನ್, ತಹಸೀಲ್ದಾರ್ ಪ್ರದೀಪ್ ಆರ್., ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಜಿತ್‌ ಹೆಗ್ಡೆ ಮಾಳ,‌ ಮೂಡುಬಿದಿರೆ ಉಪ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ‌ ಪಿ. ಶ್ರೀಧರ್, ಕುದುರೆಮುಖ ವನ್ಯಜೀವಿ ವಿಭಾಗದ ಶಿವರಾಂ ಬಾಬು ಕುದುರೆಮುಖ ವನ್ಯಜೀವಿ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ‌ ಹಾಗೂ ತಾಂತ್ರಿಕ ಸಹಾಯಕ ಸತೀಶ್‌ ಎನ್.‌, ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶುಭದ ರಾವ್‌, ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗೋಪಿನಾಥ್‌ ಭಟ್‌, ಕಾರ್ಕಳ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಅರುಣ್‌ ಸಿ., ವನ್ಯಜೀವಿ ವಲಯ ಅರಣ್ಯ ಅಧಿಕಾರಿ ಸುಬ್ರಹ್ಮಣ್ಯ ಆಚಾರ್ಯ, ಪ್ರಬಾಕರ ಕುಲಾಲ್, ವಿ. ಶರ್ಮಿಷ್ಠ, ವಿವಿಧ ಇಲಾಖೆ ಅಧಿಕಾರಿಗಳು, ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.ಇದೇ ವೇಳೆ ಅವರು ಅರಣ್ಯ ಹುತಾತ್ಮರಿಗೆ ಪುಷ್ಪನಮನ ಮೂಲಕ ಗೌರವ ಸಲ್ಲಿಸಿದರು. ಇದಕ್ಕೂ ಮುನ್ನ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವರು, ರಾಜ್ಯದಲ್ಲಿ ಮಳೆ, ಬೆಳೆ ಸಮೃದ್ಧಿಯಾಗಲಿ ಎಂದು ಪ್ರಾರ್ಥಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಸೇಲ್ ಕೊರತೆ: ಬಂಕ್‌ಗಳಲ್ಲಿ ವಾಹನಗಳ ದಟ್ಟಣೆ
ಸಮುದಾಯ ಆಸ್ಪತ್ರೆ ಅವ್ಯವಹಾರ ಆರೋಪ