ಕನ್ನಡಪ್ರಭ ವಾರ್ತೆ ಸೊರಬ
ಶನಿವಾರ ತಾಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ ಶ್ರೀ ರೇಣುಕಾಂಬಾ ದೇವಸ್ಥಾನ ಆಡಳಿತ ಮಂಡಳಿ ಕಛೇರಿಯಲ್ಲಿ ರೇಣುಕಾಂಬೆ ದೇವಸ್ಥಾನ ಸರ್ವಾಂಗೀಣ ಅಭಿವೃದ್ಧಿ ಮತ್ತು ಗ್ರಾಮದ ಮೂಲಭೂತ ಸೌಕರ್ಯಗಳ ಕುರಿತು ಹಮ್ಮಿಕೊಂಡಿದ್ದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇವಿಯ ದರ್ಶನಕ್ಕೆ ರಾಜ್ಯ ಮತ್ತು ಹೊರ ರಾಜ್ಯಗಳಿಂದ ವಿಶೇಷ ದಿನಗಳಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಆದರೆ ಆಗಮಿಸುವ ಭಕ್ತರಿಗೆ ಗ್ರಾಮದಲ್ಲಿ ಮೂಲಭೂತ ಸಮಸ್ಯೆಗಳ ಕೊರತೆ ಅಧಿಕವಾಗಿದೆ. ಅಭಿವೃದ್ಧಿ ಪಡಿಸಲು ಸರ್ಕಾರದಿಂದ ಅನುದಾನದ ಕೊರತೆ ಇಲ್ಲ ಎಂದ ಅವರು, ದೇವಸ್ಥಾನ ಕೇಂದ್ರದ ಪ್ರಾಚ್ಯು ವಸ್ತು ಇಲಾಖೆಗೆ ಸಂಬಂಧಪಟ್ಟಿರುವುದರಿಂದ ಅಧಿಕಾರಿಗಳೊಂದಿಗೆ ಚರ್ಚಿಸಿ ದೇವಸ್ಥಾನದ ಸಾಂಸ್ಕೃತಿಕ ವೈಭವಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ಅಭಿವೃದ್ಧಿಪಡಿಸಲಾಗುವುದು ಮತ್ತು ಇಲಾಖೆಯ ನಿಯಮಗಳನ್ನು ಅನುಸರಿಸಲಾಗುವುದು ಎಂದು ತಿಳಿಸಿದರು.ಮಳೆಗಾಲದಲ್ಲಿ ದೇವಸ್ಥಾನದ ಮೆಟ್ಟಿಲುಗಳು ಹಾಗೂ ಗೋಪುರ ಸೋರುತ್ತಿದೆ. ವಿವಿಧ ಜಿಲ್ಲೆ ಹಾಗೂ ರಾಜ್ಯಗಳಿಂದ ಆಗಮಿಸುವ ಭಕ್ತರಿಗೆ ಮುಖ್ಯವಾಗಿ ಶೌಚಾಲಯ, ಕುಡಿಯುವ ನೀರು, ಸ್ನಾನದ ಗೃಹ ನಿರ್ಮಾಣ ಮಾಡುವುದು. ಅಲ್ಲದೇ ವಾಹನ ನಿಲುಗಡೆ, ಕೊಠಡಿ ವ್ಯವಸ್ಥೆ, ಯಾತ್ರಿ ನಿವಾಸ, ಯಾಗ ಶಾಲೆ, ತ್ರಿಶೂಲ ಭೈರಪ್ಪ ಮತ್ತು ಕಾಲಭೈರವ ದೇವಸ್ಥಾನಗಳ ದುರಸ್ತಿ, ಶ್ರೀ ರೇಣುಕಾಂಬೆ ದೇವಸ್ಥಾನದ ಆವರಣದಲ್ಲಿ ಭಕ್ತರಿಗೆ ಅನುಕೂಲವಾಗುವಂತೆ ನೆರಳಿನ ವ್ಯವಸ್ಥೆ, ದೇವಿಯ ಗುಡ್ಡದ ಕೆಳಗಿನ ಆಜುಬಾಜು ಜಾಗಗಳಲ್ಲಿ ವ್ಯಾಪಾರಿಗಳಿಗೆ ಮಳಿಗೆ ನಿರ್ಮಾಣ ಸೇರಿದಂತೆ ಮೂಲಭೂತ ಸಮಸ್ಯೆಗಳ ಬಗ್ಗೆ ಪಟ್ಟಿ ತಯಾರಿಸಲಾಗಿದ್ದು, ಈ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುವುದು. ಮುಂದಿನ ದಿನಗಳಲ್ಲಿ ಪುರಾತತ್ವ ಇಲಾಖೆ, ಪ್ರಾಚ್ಯು ವಸ್ತು ಇಲಾಖಾ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ದೇವಸ್ಥಾನ ಮತ್ತು ಚಂದ್ರಗುತ್ತಿ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು. ಇವೆಲ್ಲವನ್ನು ದೇವಸ್ಥಾನ ಮೂಲ ಸಾಂಸ್ಕೃತಿಕ ವೈಭವಕ್ಕೆ ಧಕ್ಕೆಯಾಗದಂತೆ ನಿರ್ವಹಿಸಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಚಂದ್ರಗುತ್ತಿ ಗ್ರಾಮದ ಬನಶಂಕರಿ ದೇವಸ್ಥಾನದಿಂದ ನವಗ್ರಾಮದವರೆಗೆ ರಸ್ತೆ ಅಗಲೀಕರಣ ಗೊಳಿಸಿ ಜೋಡಿ ರಸ್ತೆ ನಿರ್ಮಿಸುವುದರ ಜತೆಗೆ ಪ್ರಯಾಣಿಕರ ಅನುಕೂಲಕ್ಕಾಗಿ ಡಿವೈಡರ್‌ಗಳನ್ನು ಅಳವಡಿಸುವಂತೆ ಗ್ರಾಮಸ್ಥರು ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದರು.