‘ರಾಜ್ಯದ ರೈತರು, ಜನರ ರಕ್ಷಣೆ ನನಗೆ ಮುಖ್ಯ. ಅದಕ್ಕೆ ಬದ್ಧನಾಗಿದ್ದೇನೆ. ದೊರೆತಿರುವ ಈ ಅವಕಾಶ ಬಳಸಿಕೊಂಡು ಪಶ್ಚಿಮಘಟ್ಟ ವ್ಯಾಪ್ತಿಯ ಜನ ಸೇರಿ ಎಲ್ಲರನ್ನೂ ರಕ್ಷಣೆ ಮಾಡಬೇಕು. ಸಮಸ್ಯೆಗಳನ್ನು ಇಟ್ಟುಕೊಂಡು ರಾಜಕಾರಣ ಮಾಡುವ ಉದ್ದೇಶ ನನಗಿಲ್ಲ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.
ಕನ್ನಡಪ್ರಭ ವಾರ್ತೆ ವಿಧಾನಸಭೆ
‘ರಾಜ್ಯದ ರೈತರು, ಜನರ ರಕ್ಷಣೆ ನನಗೆ ಮುಖ್ಯ. ಅದಕ್ಕೆ ಬದ್ಧನಾಗಿದ್ದೇನೆ. ದೊರೆತಿರುವ ಈ ಅವಕಾಶ ಬಳಸಿಕೊಂಡು ಪಶ್ಚಿಮಘಟ್ಟ ವ್ಯಾಪ್ತಿಯ ಜನ ಸೇರಿ ಎಲ್ಲರನ್ನೂ ರಕ್ಷಣೆ ಮಾಡಬೇಕು. ಸಮಸ್ಯೆಗಳನ್ನು ಇಟ್ಟುಕೊಂಡು ರಾಜಕಾರಣ ಮಾಡುವ ಉದ್ದೇಶ ನನಗಿಲ್ಲ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.
ವಿಧಾನಸಭೆಯಲ್ಲಿ ಕಸ್ತೂರಿ ರಂಗನ್ ವರದಿ ಕುರಿತು ವಿಶೇಷ ಚರ್ಚೆ ಕುರಿತು ಪ್ರಸ್ತಾವಿಕವಾಗಿ ಮಾತನಾಡಿ, ‘ನಾವೆಲ್ಲ ರಾಜಕಾರಣ ಬದಿಗಿಟ್ಟು ರಾಜ್ಯದ ಹಿತ ಕಾಪಾಡುವ ಕೆಲಸ ಮಾಡಬೇಕಿದೆ. ನಾನು ಇಲ್ಲಿಗೆ ಸುಮ್ಮನೆ ಬಂದಿಲ್ಲ. ರಾಜ್ಯದ ವಿವಿಧೆಡೆ ತೆರಳಿ ಬರ ಸಮಸ್ಯೆ ಕೇಳಿದ್ದೇನೆ. ಘಟ್ಟ ಪ್ರದೇಶದ ಜನರನ್ನು ಭೇಟಿಯಾಗಿ ಕಸ್ತೂರಿರಂಗನ್ ವರದಿ ಬಗ್ಗೆಯೂ ಅಹವಾಲು ಆಲಿಸಿದ್ದೇನೆ. ಹೀಗಾಗಿಯೇ ಎರಡಕ್ಕೂ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಎಲ್ಲರೊಂದಿಗೂ ಚರ್ಚಿಸಲು ಅಧಿವೇಶನ ಕರೆದಿದ್ದೇನೆ’ ಎಂದು ಹೇಳಿದರು.
‘ಕೇಂದ್ರ ಜಾರಿ ಮಾಡಲು ಹೊರಟಿರುವ ಕಸ್ತೂರಿ ರಂಗನ್ ವರದಿ ರಾಜ್ಯದ 10 ಜಿಲ್ಲೆಗಳ ಜನರ ಬದುಕಿಗೆ ಮಾರಕವಾಗಿದೆ. ರೈತರಲ್ಲಿ ಭಯದ ವಾತಾವರಣ ನಿರ್ಮಿಸಿದೆ. ಈ ವರದಿಯ ಉಲ್ಲೇಖದಂತೆ, ರಾಜ್ಯದ ಪಶ್ಚಿಮಘಟ್ಟದ 19,252 ಚ.ಕಿ.ಮೀ ಸೂಕ್ಷ್ಮಪ್ರದೇಶವಾಗಿದೆ. 961ಕಿ.ಮೀ ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಲಾಗಿದೆ. 3,138 ಎಕರೆ ಖಾಸಗಿ ರೈತರ ಜಮೀನು ಸೇರಿದೆ. ಬೇರೆ ಬೇರೆ ರಾಜ್ಯಗಳು ಮುಖ್ಯವಾಗಿ ಕೇರಳದವರು ಈ ವಿಚಾರವಾಗಿ ತಮ್ಮದೇ ಆದ ಲೆಕ್ಕಾಚಾರ ಮಾಡಿದ್ದಾರೆ’ ಎಂದರು.
ಹಲವರು ಹಲವು ಸಲಹೆ ನೀಡಿದ್ದಾರೆ:
‘ನಾನು ಪಶ್ಚಿಘಟ್ಟದ ಪ್ರದೇಶಗಳಲ್ಲಿ ವಾಸಿಸುವ ಜನರನ್ನು, ರೈತರನ್ನು, ಜನ ಪ್ರತಿನಿಧಿಗಳನ್ನು ಭೇಟಿಯಾದ ಸಂದರ್ಭದಲ್ಲಿ ಹಲವರು ಹಲವು ರೀತಿ ಸಲಹೆಗಳನ್ನು ನೀಡಿದ್ದಾರೆ. ಕೋಟ ಶ್ರೀನಿವಾಸ ಪೂಜಾರಿ ಅವರು ತಾಂತ್ರಿಕ ಸಮಿತಿ ರಚಿಸಿ ಎಂದರೆ, ಬಿಜೆಪಿಯ ಆರಗ ಜ್ಞಾನೇಂದ್ರ ಅವರು ಒಕ್ಕೂಟ ವ್ಯವಸ್ಥೆಯಲ್ಲಿ ಅರಣ್ಯಗಳ ಕುರಿತ ಕಾಯ್ದೆಗಳು ಕೇಂದ್ರದ ಸುಪರ್ದಿಯಲ್ಲಿವೆ. ಅವುಗಳನ್ನು ರಾಜ್ಯದ ವ್ಯಾಪ್ತಿಗೆ ಬಿಟ್ಟುಕೊಡುವಂತೆ ಹೋರಾಟ ಮಾಡಬೇಕು ಎಂದು ಸಲಹೆ ನೀಡಿದ್ದಾರೆ’ ಎಂದರು.
‘ಎಷ್ಟೋ ಜನ ಬಫರ್ ಜೋನ್ ಅನ್ನು ಕಾಡಿಗೆ ಸೀಮಿತ ಮಾಡಿ, ನಮ್ಮ ಜಮೀನಿಗೆ ಗಡಿ ಏಕೆ ನಿಗದಿ ಮಾಡುತ್ತೀರಿ ಎನ್ನುತ್ತಾರೆ. ಹಾಗಂತ ನಾವು ಪರಿಸರ ವಿರೋಧಿಗಳಲ್ಲ. ನಮ್ಮ ಆಸ್ತಿ, ನಮ್ಮ ಬದುಕಿಗೆ ತೊಂದರೆ ಕೊಡಬೇಡಿ’ ಎಂಬ ಜನರ ಬೇಡಿಕೆಗಳನ್ನು ಸದನದ ಮುಂದೆ ವಿವರಿಸಿದರು.
‘ಸರ್ವ ಪಕ್ಷಗಳ ನಿಯೋಗ ಕರೆದುಕೊಂಡು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ ಉಭಯ ಸದನಗಳಲ್ಲಿ ನಿರ್ಣಯಗಳನ್ನು ಕೈಗೊಳ್ಳಬೇಕು. ಸಂವಿಧಾನದ 371ನೇ ವಿಧಿಯಡಿ ಸೇರಿಸಿ ವಿಶೇಷ ಸ್ಥಾನಮಾನ ನೀಡಬೇಕು ಎಂಬ ಸಲಹೆಯೂ ಬಂದಿದೆ’ ಎಂದು ಡಿ.ಕೆ. ಶಿವಕುಮಾರ್ ಅವರು ಸದನಕ್ಕೆ ಮಾಹಿತಿ ನೀಡಿದರು.
-ಬಾಕ್ಸ್-
ತಪ್ಪಿಲ್ಲದಿದ್ದರೂ ನಾಗೇಂದ್ರ
ರಾಜೀನಾಮೆ ಪಡೆದೆ: ಸಿಎಂ
‘ಸಮಯ ಹಾಗೂ ತಿಳಿವಳಿಕೆ ಎರಡೂ ಒಂದೇ ಬಾರಿಗೆ ಸಿಗುವುದು ಅಪರೂಪ. ಏಕೆಂದರೆ, ಸಮಯ ಇದ್ದಾಗ ತಿಳಿವಳಿಕೆ ಇರುವುದಿಲ್ಲ. ಕಳೆದ ಅಧಿವೇಶನದಲ್ಲಿ 10 ದಿನ ಸಮಯ ಇತ್ತು. ವಿರೋಧ ಪಕ್ಷಗಳು ಅದನ್ನು ಸರಿಯಾಗಿ ಬಳಸಿಕೊಳ್ಳದೆ ವ್ಯರ್ಥ ಮಾಡಿದವು. ಯಾವುದೇ ತಪ್ಪಿಲ್ಲದಿದ್ದರೂ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿದವು. ಅದರ ಬಗ್ಗೆ ಚರ್ಚೆಗೆ ಅವಕಾಶ ನೀಡುತ್ತೇವೆ ಎಂದರೂ ಕೇಳಲಿಲ್ಲ. ಮತ್ತೆ ಪಾದಯಾತ್ರೆ ಎಂದು ಹೊರಟರು. ಜನರಿಗೆ ತೊಂದರೆ ಆಗಬಾರದು ಎಂದು ಅವರ ತಪ್ಪಿಲ್ಲದಿದ್ದರೂ ರಾಜೀನಾಮೆ ಪಡೆದೆ. ಅದರ ಬಗ್ಗೆ ಎಲ್ಲವನ್ನೂ ಮಾತನಾಡುತ್ತೇನೆ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.