ಮಂಗಳಮುಖಿಯರ ಸ್ವಾಭಿಮಾನದ ಬದುಕಿಗೆ ಬದ್ಧ: ತಹಸೀಲ್ದಾರ್ ಮಲ್ಲೇಶ್ ಬಿ.ಪೂಜಾರ್ ಭರವಸೆ

KannadaprabhaNewsNetwork |  
Published : Oct 01, 2024, 01:15 AM IST
ಲಿಂಗತ್ವ ಅಲ್ಪಸಂಖ್ಯಾತರನ್ನು [ಮಂಗಳಮುಖಿಯರ] ಉದ್ದೇಶಿಸಿ ತಹಸೀಲ್ದಾರ್ ಮಾತನಾಡಿದರು. | Kannada Prabha

ಸಾರಾಂಶ

ಶಿಕಾರಿಪುರ ತಾಲೂಕು ಕಚೇರಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳ ತಾಲೂಕು ಮಟ್ಟದ ಸಮನ್ವಯ ಸಭೆಯಲ್ಲಿ ಪಾಲ್ಗೊಂಡಿದ್ದ ಲಿಂಗತ್ವ ಅಲ್ಪಸಂಖ್ಯಾತರನ್ನು ಉದ್ದೇಶಿಸಿ ತಹಸೀಲ್ದಾರ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಮಂಗಳಮುಖಿಯರು ಸಮಾಜದಲ್ಲಿ ಎಲ್ಲರ ರೀತಿ ಗೌರವದಿಂದ ಬದುಕಲು ಅಗತ್ಯವಾದ ಮೂಲಭೂತ ಸೌಲಭ್ಯವನ್ನು ಕಲ್ಪಿಸಿಕೊಡಲು ತಾಲೂಕು ಆಡಳಿತ ಬದ್ಧವಾಗಿದೆ ಎಂದು ಇಲ್ಲಿನ ತಹಸೀಲ್ದಾರ್ ಮಲ್ಲೇಶ್ ಬಿ.ಪೂಜಾರ್ ಭರವಸೆ ನೀಡಿದರು.

ಸೋಮವಾರ ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳ ತಾಲೂಕು ಮಟ್ಟದ ಸಮನ್ವಯ ಸಭೆಯಲ್ಲಿ ಪಾಲ್ಗೊಂಡಿದ್ದ ಲಿಂಗತ್ವ ಅಲ್ಪಸಂಖ್ಯಾತರನ್ನು [ಮಂಗಳಮುಖಿಯರ] ಉದ್ದೇಶಿಸಿ ಅವರು ಮಾತನಾಡಿದರು.

ಮಂಗಳಮುಖಿಯರು ದಾಖಲೆ ಇಲ್ಲದೆ ಅನಾಥವಾಗಿ ಬೀದಿಬೀದಿಯಲ್ಲಿ ಅಲೆದಾಡುತ್ತಾ ಬದುಕುತ್ತಿದ್ದು, ಎಲ್ಲರ ರೀತಿಯಲ್ಲಿ ಸರ್ಕಾರದ ಸೌಲಭ್ಯವನ್ನು ಪಡೆದು ಕೊಂಡು ಸಹಜ ರೀತಿಯಲ್ಲಿ ಬದುಕು ಕಟ್ಟಿಕೊಳ್ಳಲು ಆಧಾರ್ ಕಾರ್ಡ್‌, ಪಡಿತರ ಚೀಟಿ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಅತ್ಯಗತ್ಯವಾಗಿದೆ. ಈ ಕಾರ್ಯ ಕಂದಾಯ ಇಲಾಖೆಯ ಜವಾಬ್ದಾರಿಯಾಗಿದ್ದು, ಕೂಡಲೇ ತಾಲೂಕಿನ ಎಲ್ಲ ಮಂಗಳಮುಖಿಯರ ಬಗ್ಗೆ ಮಾಹಿತಿ ಸಂಗ್ರಹಿಸಿ ಸೂಕ್ತ ದಾಖಲೆ ಮೂಲಕ ಸ್ವಾಭಿಮಾನ ದಿಂದ ಬದುಕಲು ಅಗತ್ಯವಾದ ಸೌಲಭ್ಯ ಕಲ್ಪಿಸಿಕೊಡಲು ಸಿದ್ಧವಿರುವುದಾಗಿ ಭರವಸೆ ನೀಡಿದರು.

ಮಂಗಳಮುಖಿಯರು ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕ 2 ಸಾವಿರ ರು. ಪಡೆಯಲು ಅರ್ಹರಾಗಿದ್ದು, ಈ ದಿಸೆಯಲ್ಲಿ ಅಗತ್ಯವಾದ ಪಡಿತರ ಚೀಟಿ ಪಡೆಯಲು ತಾಲೂಕು ಕಚೇರಿಯನ್ನು ಸಂಪರ್ಕಿಸಿದಲ್ಲಿ ಎಲ್ಲ ರೀತಿಯ ಮುಕ್ತ ಸಹಾಯವನ್ನು ಸಿಬ್ಬಂದಿ ನೀಡಲಿದ್ದಾರೆ ಎಂದ ಅವರು ಮಂಗಳಮುಖಿಯರು ಸಮಾಜದ ಮುಖ್ಯವಾಹಿನಿಯಲ್ಲಿ ಎಲ್ಲರ ರೀತಿ ಗುರುತಿಸಿಕೊಳ್ಳಲು ಸಾದ್ಯವಾದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಅವರು ಬರವಸೆ ನೀಡಿದರು.

ತಾಲೂಕು ವೈದ್ಯಾಧಿಕಾರಿ ಡಾ.ನವೀದ್ ಖಾನ್ ಮಾತನಾಡಿ, ಮಂಗಳಮುಖಿಯರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಬೀದಿ ಬೀದಿ ಅಲೆಯುತ್ತಾ ಆರೋಗ್ಯದ ಬಗ್ಗೆ ಗಮನಹರಿಸದೆ ನಿರ್ಲಕ್ಷಿಸುತ್ತಿದ್ದು, ಇದರೊಂದಿಗೆ ಕೆಲವರು ಸೆಕ್ಸ್ ವರ್ಕರ್ ಆಗಿರುವುದರಿಂದ ಎಚ್ಐವಿ ಸೋಂಕು ತಗಲಿರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಈ ದಿಸೆಯಲ್ಲಿ ಸೂಕ್ತ ತಪಾಸಣೆ ಮೂಲಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡುವಂತೆ ತಿಳಿಸಿದರು.

ಪುರಸಭೆಯ ಸಿಎಒ ಸುರೇಶ್ ಮಾತನಾಡಿ, ಪಟ್ಟಣ ವ್ಯಾಪ್ತಿಯಲ್ಲಿ ವಾಸವಾಗಿರುವ ಮುಂಗಳಮುಖಿಯರು ನಿವೇಶನ ಹೊಂದಿದಲ್ಲಿ ಪ್ರದಾನಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಾಣಕ್ಕೆ ಸಹಾಯಧನ ಕೂಡಲೇ ನೀಡಲಾಗುವುದು ಎಂದು ತಿಳಿಸಿದರಲ್ಲದೆ, ನಿವೇಶನ ರಹಿತರಿಗೆ ಸರ್ಕಾರ ನಿವೇಶನ ವಿತರಿಸುವಾಗ ಆದ್ಯತೆ ನೀಡಲಾಗುವುದು ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ಪಿಎಂ ಸ್ವನಿಧಿ ಯೋಜನೆಯಡಿ ಬಡ್ಡಿರಹಿತ ₹10 ಸಾವಿರದಿಂದ ₹50 ಸಾವಿರದವರೆಗೆ ಸಾಲ ನೀಡಲಾಗುವುದು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.

ರಕ್ಷಣಾ ಇಲಾಖೆಯ ವಿನೋದ್ ಮಾತನಾಡಿ, ಮಂಗಳಮುಖಿಯರಿಗೆ ಸಾರ್ವಜನಿಕರಿಂದ ಅನಗತ್ಯ ಕಿರುಕುಳ ತಪ್ಪಿಸಿ ರಕ್ಷಣೆ ನೀಡುವುದಾಗಿ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ದಿ ಯೋಜನಾಧಿಕಾರಿ ರತ್ನಮ್ಮ ಮಾತನಾಡಿ, ದೇವದಾಸಿ, ಮಂಗಳಮುಖಿಯರ ಸಂಘ ರಚಿಸಿ ಪ್ರತಿಯೊಬ್ಬರಿಗೂ ಆರ್ಥಿಕ ಶಿಸ್ತು ಮೂಡಿಸಲು ತರಬೇತಿ ನೀಡಲಾಗುವುದು ಸ್ವ ಉದ್ಯೋಗದ ಬಗ್ಗೆ ಪ್ರೇರಣೆ ನೀಡಿ ರೂ.2 ಲಕ್ಷ ಕಿರುಸಾಲ ನೀಡಲಾಗುವುದು ಎಂದ ಅವರು, ಆಯುಷ್ಮಾನ್ ಕಾರ್ಡ್‌ ಯೋಜನೆಯಡಿ ರೂ.5 ಲಕ್ಷ ವೆಚ್ಚದ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರೇಡ್ 2 ತಹಸೀಲ್ದಾರ್ ರಂಜಿತ್, ಸಮಾಜ ಕಲ್ಯಾಣಾಧಿಕಾರಿ ಮಧುಸೂದನ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶಪ್ಪ, ಕಾರ್ಮಿಕ ಇಲಾಖೆ ಅಧಿಕಾರಿ ಶಿಲ್ಪ, ಬಾಪೂಜಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಪಾಪಯ್ಯ, ಸಾಂತ್ವನ ಕೇಂದ್ರದ ಸಿಂಧು, ಸಂಗೀತ, ಜಿಲ್ಲಾ ರಕ್ಷಾ ಸಮುದಾಯ ಸಂಘ [ರಿ]ದ ಅಧ್ಯಕ್ಷ ಮಹಮ್ಮದ್ ಸೈಫುಲ್ಲಾ, ತೃತೀಯ ಲಿಂಗಿಗಳ ಸಮುದಾಯದ ತಾಲೂಕು ಅಧ್ಯಕ್ಷೆ ನಿಶಾ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ