ಚನ್ನರಾಯಪಟ್ಟಣ: ಬಾಗೂರು ರಸ್ತೆಯ ಶ್ರೀ ಶನಿದೇವರ ದೇವಸ್ಥಾನದ ವಾರ್ಡಿನಲ್ಲಿ ಸದಸ್ಯೆ ಕವಿತಾ ರಾಜು ಬೆಂಬಿಡದೆ ಜನರ ಕೆಲಸವನ್ನು ಮಾಡಿಸಿಕೊಂಡಿದ್ದಾರೆ ಎಂದು ಶಾಸಕ ಸಿ. ಎನ್. ಬಾಲಕೃಷ್ಣ ತಿಳಿಸಿದರು.
ಪುರಸಭಾ ಉಪಾಧ್ಯಕ್ಷೆ ಕವಿತಾ ರಾಜು ಅವರು ನಮ್ಮನ್ನು ಬೆಂಬಿಡದೆ ಅಭಿವೃದ್ಧಿ ಕಾರ್ಯ ಮಾಡಿಸಿಕೊಳ್ಳುತ್ತಿದ್ದು ಜನರ ಕಷ್ಟಗಳಿಗೆ ಸ್ಪಂದಿಸುವ ಒಬ್ಬ ಪ್ರಾಮಾಣಿಕ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದಾರೆ, ಈಗಾಗಲೇ ಅವರ ವಾರ್ಡಿನ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನಕ್ಕೆ ೨.೫೦ ಲಕ್ಷ ರು. ನೀಡಿದ್ದು ಮಾರ್ಚ್ ನಂತರ ೨.೫೦ ಲಕ್ಷ ರು. ಅನುದಾನ ನೀಡುತ್ತೇವೆ. ದಾಸರ ಬೀದಿಗೆ ಕಾಂಗ್ರೆಸ್ ರಸ್ತೆಗೆ ಟೆಂಡರ್ ಕರೆಯಾಗಿದ್ದು, ಶೀಘ್ರವೇ ಕಾಮಗಾರಿ ಪ್ರಾರಂಭಿಸಲಾಗುವುದು. ಈಗಾಗಲೇ ಜಾಮೀಯಾ ಮಸೀದಿ ಮುಂದೆ ಕಾಂಗ್ರೆಸ್ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದರು.
ಪಟ್ಟಣದ ಜನರಿಗೆ ನದಿ ನೀರಿನಿಂದ ಸಮರ್ಪಕವಾಗಿ ಕುಡಿಯುವ ನೀರಿನ ಯೋಜನೆಯನ್ನು ಪೂರ್ಣಗೊಳಿಸಿದ್ದು, ಕಸ ವಿಲೇವಾರಿ ಕೆಲಸದಲ್ಲಿ ಜಿಲ್ಲೆಯಲ್ಲೇ ಮೊದಲ ಸ್ಥಾನದಲ್ಲಿದ್ದು, ಸಂಸ್ಕರಣಾ ಘಟಕವು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ. ನಗರದ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದ್ದು, ಪಟ್ಟಣದ ವಳಗೇರಮ್ಮ ದೇವಸ್ಥಾನದ ಮುಂಭಾಗದ ಅಮಾನಿಕೆರೆ ಪಕ್ಕದಲ್ಲಿ ಜನರು ವಾಯುವಿಹಾರ ನಡೆಸಲು ಈಗಾಗಲೇ ೨ ಕೋಟಿ ರು. ವೆಚ್ಚದಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಲಾಗಿದ್ದು, ಸರ್ಕಾರಕ್ಕೆ ೫ ಕೋಟಿ ರು. ಹೆಚ್ಚುವರಿ ಹಣ ನೀಡುವಂತೆ ಪ್ರಸ್ತಾವನೆಯನ್ನು ಸಹ ಸಲ್ಲಿಸಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷ ಮೋಹನ್‌ಕೋಟೆ, ಉಪಾಧ್ಯಕ್ಷೆ ಕವಿತಾ ರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಗಣೇಶ್, ಮಾಜಿ ಅಧ್ಯಕ್ಷೆ ಬನಶಂಕರಿ ರಘು, ಟಿಎಪಿಸಿಎಂಎಸ್ ಅಧ್ಯಕ್ಷ ಅನಿಲ್‌ಕುಮಾರ್, ಉಪಾಧ್ಯಕ್ಷ ಜಗದೀಶ್, ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಉಪಾಧ್ಯಕ್ಷ ಬ್ರೆಡ್ ರಾಜಣ್ಣ, ಗಾಣಿಗ ಸಮಾಜದ ಮುಖಂಡರು ಹಾಜರಿದ್ದರು.