ಜಮೀನನ್ನು ಪ್ರಾಯೋಗಿಕ ಕೃಷಿ ಕೇಂದ್ರವಾಗಿಸಲು ಪಣ

KannadaprabhaNewsNetwork |  
Published : Jul 27, 2025, 12:01 AM IST
ಚಿನ್ನಸ್ವಾಮಿ 1 | Kannada Prabha

ಸಾರಾಂಶ

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು ತೆರಕಣಾಂಬಿ ಹೋಬಳಿಯ ವಡ್ಡಗೆರೆಯಲ್ಲಿರುವ ತಮ್ಮ 20 ಎಕರೆ ಚಿತ್ರಕೂಟ ತೋಟವನ್ನು ಪ್ರಗತಿಪರ ಕೃಷಿಕ ಚಿನ್ನಸ್ವಾಮಿ ವಡ್ಡಗೆರೆ ಅವರು ಭವಿಷ್ಯದಲ್ಲಿ ಹೊಸತಲೆಮಾರಿನ ಯುವಕರಿಗೆ ಪ್ರಾಯೋಗಿಕ ಕೃಷಿ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಪಣ ತೊಟ್ಟಿದ್ದಾರೆ.

ಅಂಶಿ ಪ್ರಸನ್ನಕುಮಾರ್‌

ಕನ್ನಡಪ್ರಭ ವಾರ್ತೆ ಮೈಸೂರು

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು ತೆರಕಣಾಂಬಿ ಹೋಬಳಿಯ ವಡ್ಡಗೆರೆಯಲ್ಲಿರುವ ತಮ್ಮ 20 ಎಕರೆ ಚಿತ್ರಕೂಟ ತೋಟವನ್ನು ಪ್ರಗತಿಪರ ಕೃಷಿಕ ಚಿನ್ನಸ್ವಾಮಿ ವಡ್ಡಗೆರೆ ಅವರು ಭವಿಷ್ಯದಲ್ಲಿ ಹೊಸತಲೆಮಾರಿನ ಯುವಕರಿಗೆ ಪ್ರಾಯೋಗಿಕ ಕೃಷಿ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಪಣ ತೊಟ್ಟಿದ್ದಾರೆ.

ಅವರ ತಂದೆ ವಿ.ಕೆ. ಮಲ್ಲಪ್ಪ ಅವರಿಗೆ ತಾಯಿ ಭದ್ರಕಾಳಮ್ಮ ಕಾಳಪ್ಪ ಅವರಿಂದ ಬಂದಿರುವ ಪಿತ್ರಾರ್ಜಿತ ಆಸ್ತಿ ಇದಾಗಿದೆ. 2024ರ ಡಿ. 25 ರಂದು ಅವರೊಂದು ನಿರ್ಧಾರ ಮಾಡಿದರು. ಜೀವನ ಇರುವವರೆಗೂ ಸ್ಥಿರವಾಗಿ ಇಲ್ಲಿಯೇ ನಿಲ್ಲಬೇಕು. 20 ವರ್ಷಗಳಿಂದ ಹಾಳಾಗಿರುವ ಜಮೀನನ್ನು ಮುಂದಿನ ಐದು ವರ್ಷಗಳಲ್ಲಿ ಅಭಿವೃದ್ಧಿಪಡಿಸಬೇಕು . ಈವರೆಗೆ ಮಾಡಿರುವ ಎಲ್ಲಾ ಸಾಲವನ್ನು ತೀರಿಸಬೇಕು ಎಂದು ಸಂಕಲ್ಪ ಮಾಡಿದರು.

ಅದರಂತೆ ಮೂರು ಯೋಜನೆಗಳನ್ನು ರೂಪಿಸಿದರು. ಮೊದಲ ಹಂತದಲ್ಲಿ 6000 ಬಾಳೆಗಿಡಗಳನ್ನು ನೆಟ್ಟರು. ಇವುಗಳಲ್ಲಿ 5000- ಏಲಕ್ಕಿ, 1000- ನೇಂದ್ರ. ಆರ್ಗಾನಿಕ್‌ ಲಿಕ್ವಿಡ್‌ ಸೇರಿದಂತೆ ಸಾವಯವ ಗೊಬ್ಬರ ಬಳಕೆ ಮಾಡಿ ಬೆಳೆದಿದ್ದಾರೆ. ಗೌರಿ- ಗಣೇಶ ಹಬ್ಬದ ವೇಳೆಗೆ ಬಾಳೆಗೊನೆಗಳು ಮಾರಾಟಕ್ಕೆ ಬರಲಿವೆ.ಈವರೆಗೆ 5 ಲಕ್ಷ ರು. ವೆಚ್ಚವಾಗಿದ್ದು, ಈಗಿರುವ ಮಾರುಕಟ್ಟೆಯ ದರದಂತೆ ಸುಮಾರು 25 ಲಕ್ಷ ರು.ವರೆಗೂ ಆದಾಯ ಬರುವ ನಿರೀಕ್ಷೆ ಇದೆ.

ಎರಡನೇ ಹಂತದಲ್ಲಿ ಪಪ್ಪಾಯಿ ಗಿಡಗಳನ್ನು ನೆಡುವ ಉದ್ದೇಶ ಇತ್ತು. ಆದರೆ ಅದಕ್ಕಿಂತ ಮುಂಚಿತವಾಗಿ ತಲಾ ಎರಡು ಎಕರೆಯಲ್ಲಿ ಬೆಳ್ಳುಳ್ಳಿ ಹಾಗೂ ಕೋಸು ಬೆಳೆದಿದ್ದಾರೆ. ಮುಂದಿನ ತಿಂಗಳು ಫಸಲು ಬರಲಿದ್ದು ಈವರೆಗೆ 2.50 ಲಕ್ಷ ರು. ವೆಚ್ಚವಾಗಿದೆ. 8 ಲಕ್ಷ ರು. ಆದಾಯದ ನಿರೀಕ್ಷೆಯಲ್ಲಿದ್ದಾರೆ.

ಮೂರನೇ ಹಂತದಲ್ಲಿ 2000 ಅಡಿಕೆ ಮರಗಳನ್ನು ಬೆಳೆಸುತ್ತಿದ್ದಾರೆ. 500 ತೆಂಗಿನ ಮರಗಳಿದ್ದು, ಎಳನೀರು ಮಾರಾಟದಿಂದ 70 ಸಾವಿರ ರು. ಬಂದಿದೆ. ಡಿಜೆ ಸಂಪೂರ್ಣ-100 ತೆಂಗಿನ ಮರಗಳಿವೆ. ಇದರಿಂದ ಎಳನೀರು, ಕಾಯಿ, ಕೊಬ್ಬರಿ ಮಾಡಬಹುದು.

ಇಡೀ ಜಮೀನಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಿದ್ದಾರೆ. ಮೈಸೂರಿನ ರುಡ್‌ಸೆಟ್‌ನಲ್ಲಿ ಮಣ್ಣಿನ ಪರೀಕ್ಷೆ ಮಾಡಿಸಿದ್ದಾರೆ. ಕೃಷಿ ಇಲಾಖೆಯ ತೆರಕಣಾಂಬಿ ರೈತ ಸಂಪರ್ಕ ಕೇಂದ್ರದಿಂದ ಸಹಾಯಧನದಲ್ಲಿ ಟಿಲ್ಲರ್‌, ಮೇವು ಕತ್ತರಿಸುವ ಯಂತ್ರ ಪಡೆದಿದ್ದಾರೆ. ಎರೆಹುಳು ಗೊಬ್ಬರ ಘಟಕ ಇದೆ. ಜಮೀನಿನಲ್ಲಿ ತ್ಯಾಜ್ಯವನ್ನು ಅಲ್ಲಿಯೇ ಕರಗಿಸಿ, ಗೊಬ್ಬರ ಮಾಡುತ್ತಾರೆ. ಗೋಕುಪಾಮೃತ, ವೇಸ್ಟ್‌ಡೀಕಾಂಪೋಸ್ಟ್‌ ಬಳಸುತ್ತಾರೆ.

ಒಂದು ಮಲೆನಾಡು ಗಿಡ್ಡ, ಒಂದು ಡೆನ್ಮಾರ್ಕ್‌ ತಳಿ ಹಸು ಹಾಗೂ ಮೂರು ಕರುಗಳಿವೆ. ಮುಂಚೆ ಡೇರಿಗೆ ಹಾಲು ಪೂರೈಸುತ್ತಿದ್ದರು. ಈಗ ತೆನೆ ಆಗಿರುವುದರಿಂದ ಇಲ್ಲ. ಮುಂದೆ ಜೇನುಕೃಷಿ ಮಾಡುವ ಉದ್ದೇಶವಿದೆ.

ಅರ್ಧ ಎಕರೆಯಲ್ಲಿ ಕಾಡು:

ವಡ್ಡಗೆರೆ ಗ್ರಾಮ ಬಂಡೀಪುರ ಅಭಯಾರಣ್ಯದ ಪಕ್ಕವೇ ಬರುತ್ತದೆ. ತೇಗ-50, ಮಾವು-60, ಬೇವು, ಹೆಬ್ಬೇವು, ಶ್ರೀಗಂಧ, ಹುಣಸೆ ಮರಗಳಿವೆ. ಇದರ ಜೊತೆಗೆ ಅರ್ದ ಎಕರೆಯಲ್ಲಿ ಪುಟ್ಟಕಾಡು ಬೆಳೆಸುತ್ತಿದ್ದಾರೆ. ಹಲವಾರು ಜಾತಿಯ ಹೂವಿನ ಗಿಡಗಳು ಕೂಡ ಇವೆ. ಮರ, ಹಣ್ಣು, ಹೂವು ಇದ್ದರೆ ಹಕ್ಕಿಪಕ್ಷಿಗಳು ಬರುತ್ತವೆ. ಅವು ಹುಳು- ಹುಪ್ಪಟೆ ತಿನ್ನುವುದರಿಂದ ರೋಗ ತಡೆಯಬಹುದು.

ಸಂಪರ್ಕ ವಿಳಾಸಃ

ಚಿನ್ನಸ್ವಾಮಿ ವಡ್ಡಗೆರೆ ಬಿನ್‌ವಿ.ಕೆ. ಮಲ್ಲಪ್ಪ

ವಡ್ಡಗೆರೆ

ತೆರಕಣಾಂಬಿ ಹೋಬಳಿ

ಗುಂಡ್ಲುಪೇಟೆ ತಾಲೂಕು

ಚಾಮರಾಜನಗರ ಜಿಲ್ಲೆ

ಮೊ.93804 77210ಊರು ಬಿಟ್ಟವರನ್ನು ಮರಳಿ ಕರೆತಂದ ಕೆರೆ ತುಂಬಿಸುವ ಯೋಜನೆ:

ಮೊದಲೆಲ್ಲಾ ಗುಂಡ್ಲುಪೇಟೆ ಎಂದರೇ ಯಾವುದೇ ನದಿಮೂಲಗಳಿಲ್ಲದ ತಾಲೂಕು. ಮಳೆ ಬಿದ್ದರೆ ಬೆಳೆ, ಇಲ್ಲದಿದ್ದರೆ ಇಲ್ಲ ಎಂಬ ಪರಿಸ್ಥಿತಿ. ಹೀಗಾಗಿ ಬಹುತೇಕರು, ಕೂಲಿ, ಉದ್ಯೋಗ ಅರಸಿ, ಬೇರೆ ಬೇರೆ ಕಡೆಗೆ ವಲಸೆ ಹೋಗಿದ್ದರು. ಆದರೆ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಇದ್ದಾಗ ಕೆರೆ ತುಂಬಿಸುವ ಯೋಜನೆ ರೂಪಿಸಿದರು ಈ ಯೋಜನೆ ರೂಪಿತಕ್ಕೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು ಯಡಿಯೂರಪ್ಪ ಅವರಿಗೆ ಮಾಡಿದ ಸಲಹೆ ಕಾರಣ. ಇದರಿಂದಾಗಿ ಅಂತರ್ಜಲ ವೃದ್ಧಿಯಾಯಿತು. ಇದರಿಂದಾಗಿ ಕೃಷಿ ಮಾಡಿ ಬದುಕಬಹುದು ಎಂಬ ಭರವಸೆ ಬಂದು ಊರ ಬಿಟ್ಟವರು ಮರಳಿದ್ದಾರೆ. ಜೊತೆಗೆ ಸಾಕಷ್ಟು ಮಂದಿ ಸಾಫ್ಟ್‌ವೇರ್‌ ಉದ್ಯೋಗಿಗಳು ತಾಲೂಕಿನಲ್ಲಿ ಜಮೀನು ಖರೀದಿಸಿ, ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ರೀತಿ ಮಣ್ಣನ್ನು ನಂಬಿ ಮರಳಿ ಬಂದವರಲ್ಲಿ 53 ವರ್ಷದ ಚಿನ್ನಸ್ವಾಮಿ ವಡ್ಡಗೆರೆ ಒಬ್ಬರು. ಎಸ್ಎಸ್ಎಲ್‌ಸಿ ನಂತರ ಊರು ಬಿಟ್ಟಿದ್ದ ಅವರು ನಂತರ ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದು, ಚಾಮರಾಜನಗರದ ಜೆಎಸ್ಎಸ್‌ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ನಂತರ ಪತ್ರಕರ್ತರರಾಗಿ ಚಿತ್ರದುರ್ಗ, ಮೈಸೂರಿನಲ್ಲಿ ಕೆಲಸ ಮಾಡಿದರು. ಆಂದೋಲನ, ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಸುದೀರ್ಘ ಸೇವೆಯ ನಂತರ ರಾಜಕಾರಣ ಪ್ರವೇಶಿದ್ದರು. ಕೃಷಿ ಬಗ್ಗೆ ''''ಬಂಗಾರದ ಮನುಷ್ಯ'''', ''''ಕೃಷಿ ಸಂಸ್ಕೃತಿ ಕಥನ'''' ಮೊದಲಾದ ಕೃತಿಗಳನ್ನು ಕೂಡ ಬರೆದಿದ್ದಾರೆ.

ಹಳ್ಳಿಯ ಜನರಿಗೆ ಸರಿಯಾಗಿ ಹಣ ನಿರ್ವಹಣೆ ಮಾಡಲು ಬರುವುದಿಲ್ಲ. ಮಾಡುವ ಕೆಲಸವನ್ನು ಸಕಾಲಕ್ಕೆ ಮಾಡಲ್ಲ. ಇದರಿಂದಾಗಿ ಕೃಷಿಯಲ್ಲಿ ನಷ್ಟ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಸರಿಪಡಿಸಿಕೊಂಡರೆ ಕೃಷಿ ನಂಬಿ ಬದುಕಬಹುದು. ಕೃಷಿಯಲ್ಲಿ ಪ್ರತಿವರ್ಷ ಲಾಭ- ನಷ್ಟ ಲೆಕ್ಕ ಹಾಕುವ ಬದಲು ಐದು ವರ್ಷ ತಡೆದುಕೊಳ್ಳಬೇಕು. ಕೃಷಿಯಿಂದ ಸಿಗುವ ಖುಷಿ, ದೊರೆಯುವ ನೆಮ್ಮದಿ, ಆರೋಗ್ಯಕ್ಕೆ ಬೆಲೆ ಕಟ್ಟಲಾಗದು. -ಚಿನ್ನಸ್ವಾಮಿ, ವಡ್ಡಗೆರೆ

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ