ತುಂಗಭದ್ರಾ ಡ್ಯಾಂನ ಕ್ರಸ್ಟ್‌ ಗೇಟ್‌ ಕೊಚ್ಚಿಹೋದ ಘಟನೆ : ರಾಜ್ಯದ ಎಲ್ಲ ಜಲಾಶಯಗಳ ಸುರಕ್ಷತೆ ಪರಿಶೀಲನೆಗೆ ಸಮಿತಿ

KannadaprabhaNewsNetwork | Updated : Aug 13 2024, 10:17 AM IST

ಸಾರಾಂಶ

ರಾಜ್ಯದ 2ನೇ ಅತಿದೊಡ್ಡ ಜಲಾಶಯವಾಗಿರುವ ತುಂಗಭದ್ರಾ ಡ್ಯಾಂನ ಕ್ರಸ್ಟ್‌ ಗೇಟ್‌ ಕೊಚ್ಚಿಹೋದ ಘಟನೆ ನಂತರ ರಾಜ್ಯದ ಎಲ್ಲ ಅಣೆಕಟ್ಟುಗಳ ಸ್ಥಿತಿಗತಿ ಅರಿಯಲು ನಿರ್ಧರಿಸಲಾಗಿದೆ.

  ಬೆಂಗಳೂರು :  ರಾಜ್ಯದ 2ನೇ ಅತಿದೊಡ್ಡ ಜಲಾಶಯವಾಗಿರುವ ತುಂಗಭದ್ರಾ ಡ್ಯಾಂನ ಕ್ರಸ್ಟ್‌ ಗೇಟ್‌ ಕೊಚ್ಚಿಹೋದ ಘಟನೆ ನಂತರ ರಾಜ್ಯದ ಎಲ್ಲ ಅಣೆಕಟ್ಟುಗಳ ಸ್ಥಿತಿಗತಿ ಅರಿಯಲು ನಿರ್ಧರಿಸಲಾಗಿದೆ. ಅದಕ್ಕಾಗಿ ಅಣೆಕಟ್ಟುಗಳ ಸುರಕ್ಷತೆಗೆ ಸಮಿತಿ ರಚಿಸಲಾಗಿದ್ದು, ರಾಜ್ಯದ ಎಲ್ಲ ಅಣೆಕಟ್ಟುಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಕುರಿತು ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಈ ಕುರಿತು ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿ, ತುಂಗಭದ್ರಾ ಅಣೆಕಟ್ಟೆಯ ಗೇಟ್‌ ದುರಸ್ತಿ ಕಾರ್ಯ ಆರಂಭಿಸಲಾಗಿದೆ. ಆದರೆ, ನೀರಿನ ಪ್ರಮಾಣ ಕಡಿಮೆ ಮಾಡದ ಹೊರತಾಗಿ ದುರಸ್ತಿ ಕಾರ್ಯ ಸಮರ್ಪಕವಾಗಿ ಮಾಡಲು ಸಾಧ್ಯವಿಲ್ಲ. ನಾನು ಅಣೆಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಜಿಂದಾಲ್‌ ಸಂಸ್ಥೆ ಹಾಗೂ ಇತರರ ಜತೆ ಮಾತನಾಡಿದ್ದು, ಕಬ್ಬಿಣ ಪೂರೈಕೆಗೆ ಕೇಳಿದ್ದೇನೆ. ಅದರಂತೆ ದುರಸ್ತಿ ಕಾರ್ಯ ಆರಂಭಿಸಲಾಗಿದೆ ಎಂದರು.ತುಂಗಭದ್ರಾ ಅಣೆಕಟ್ಟೆಯಂತೆಯೇ ಇತರ ಅಣೆಕಟ್ಟುಗಳಲ್ಲಿನ ಸ್ಥಿತಿಗತಿಗಳ ಕುರಿತಂತೆ ಪರಿಶೀಲನೆ ನಡೆಸಲಾಗುವುದು. ಅದಕ್ಕಾಗಿ ಅಧಿಕಾರಿಗಳು, ತಜ್ಞರನ್ನೊಳಗೊಂಡ ಅಣೆಕಟ್ಟು ಸುರಕ್ಷತಾ ಸಮಿತಿ ರಚಿಸಲಾಗಿದ್ದು, ಅಣೆಕಟ್ಟುಗಳಿಗೆ ಭೇಟಿ ನೀಡಿ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಘಟನೆಗೆ ಸಂಬಂಧಿಸಿಂತೆ ಯಾರನ್ನಾದರೂ ಹೊಣೆ ಮಾಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಧಿಕಾರಿಗಳನ್ನು ಹೊಣೆ ಮಾಡುವುದಕ್ಕಿಂತ ಅಣೆಕಟ್ಟನ್ನು ಉಳಿಸಿ, ರೈತರನ್ನು ರಕ್ಷಿಸುವುದು ನಮ್ಮ ಮೊದಲ ಕೆಲಸ. ಅಣೆಕಟ್ಟಿನಲ್ಲಿ ನೀರು ಕಡಿಮೆಯಾಗದ ಹೊರತು ದುರಸ್ತಿ ಕಾರ್ಯ ಮಾಡಲು ಸಾಧ್ಯವಿಲ್ಲ. ಹೀಗಾಗಿ ನೀರು ಹರಿಸಲಾಗುತ್ತಿದೆ. ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ಹಗಲು-ರಾತ್ರಿ ಎನ್ನದೇ ಗೇಟ್‌ ಸಿದ್ಧಪಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

Share this article