ಕನ್ನಡಪ್ರಭ ವಾರ್ತೆ ನಾಗಮಂಗಲಕ್ಷುಲ್ಲಕ ಕಾರಣಕ್ಕೆ ಹಿಂದೂ ಯುವಕನ ಮೇಲೆ ಅನ್ಯಕೋಮಿನ ಯುವಕರ ಗುಂಪು ಸೋಮವಾರ ರಾತ್ರಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆಯಿಂದ ಕೋಮು ಸಂಘರ್ಷ ಉಂಟಾಗಿ ತಾಲೂಕಿನ ಬೆಳ್ಳೂರಿನಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.ತಾಲೂಕಿನ ಬೆಳ್ಳೂರು ಪಟ್ಟಣದ ಹಿಂದೂ ಸಂಘಟನೆ ಕಾರ್ಯಕರ್ತ ಅಭಿಲಾಷ್ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿದ್ದು ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಘಟನೆ ವಿವಿರ: ಬೆಳ್ಳೂರು ಪಟ್ಟಣದ ಗಂಗಾಮತಸ್ಥರ ಬೀದಿಯಲ್ಲಿ ಕಳೆದ ಶುಕ್ರವಾರ ರಾತ್ರಿ ಗಂಗಾಪರಮೇಶ್ವರಿ ಹಬ್ಬ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಅಭಿಲಾಷ್, ಸಹೋದರ ಹೇಮಂತ್ ಹಾಗೂ ಮಾವ ನಾಗೇಶ್ ಕಾರಿನಲ್ಲಿ ಮನೆಗೆ ಬರುತ್ತಿದ್ದರು.ಈ ವೇಳೆ ನಾಲ್ವರು ಯುವಕರಿದ್ದ ಕಾರು ಓವರ್ ಟೇಕ್ ಮಾಡಿದಕ್ಕಾಗಿ ಹಿಂಬಾಲಿಸಿಕೊಂಡು ಬಂದ ಅನ್ಯಕೋಮಿನ ಯುವಕರು ನಮ್ಮ ಕಾರನ್ನೇ ಓವರ್‌ಟೇಕ್ ಮಾಡ್ತಿಯಾ ಎಂದು ಅಭಿಲಾಷ್ ಮತ್ತು ಹೇಮಂತ್ ಜೊತೆ ಜಗಳವಾಡಿ ಆವಾಜ್ ಹಾಕಿ ಹೋಗಿದ್ದರು.ಸ್ಥಳದಿಂದ ತೆರಳಿದ್ದ ನಾಲ್ವರು ಯುವಕರು ತಡರಾತ್ರಿ 1.30ರ ವೇಳೆಗೆ ಪುನಃ 40 ಮಂದಿ ಗುಂಪಿನೊಂದಿಗೆ ಬಂದು ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿಲ್ಲದೇ, ಈ ದಿನ ಹಬ್ಬ ಮಾಡುತ್ತಿದ್ದೀರಿ. ಹಬ್ಬ ಮುಗಿಸಿದ ಮೇಲೆ ನಾವು ನಿಮಗೆ ಹಬ್ಬ ಮಾಡುತ್ತೇವೆಂದು ಬೆದರಿಕೆ ಹಾಕಿ ಹೋಗಿದ್ದಾರೆ.ಇದರಿಂದ ಆತಂಕಗೊಂಡ ಅಭಿಲಾಷ್ ಕುಟುಂಬಸ್ಥರು ಬೆಳ್ಳೂರು ಪೊಲೀಸ್ ಠಾಣೆಗೆ ತೆರಳಿ ಬೆದರಿಕೆ ಹಾಕಿದ್ದ ಯುವಕರ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ. ಆದರೆ, ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ. ಇದೇ ವೈಷಮ್ಯವನ್ನು ಮುಂದಿಟ್ಟುಕೊಂಡು ಸೋಮವಾರ ಸಂಜೆ ಅಭಿಲಾಷ್ ಮೇಲೆ ಅನ್ಯಕೋಮಿನ ಯುವಕರ ಗುಂಪು ಲಾಂಗ್ ಸೇರಿದಂತೆ ಮಾರಕಾಸ್ತ್ರಗಳಿಂದ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಇದನ್ನು ತಡೆಯಲು ಮುಂದಾದವರ ಮೇಲೂ ಹಲ್ಲೆಗೆ ಯತ್ನಿಸಿದ್ದಾರೆ.ಬಳಿಕ ಅಭಿಲಾಷ್ ಮಾವ ನಾಗೇಶ್ ಮನೆಗೆ ತೆರಳಿದ ಅನ್ಯಕೋಮಿನ ಯುವಕರ ಗುಂಪು ದಾಂಧಲೆ ನಡೆಸಿದ್ದಾರೆ. ಮನೆಯಲ್ಲಿ ಒಬ್ಬರೇ ಇದ್ದ ನಾಗೇಶ್ ಪತ್ನಿ ರಶ್ಮಿ ಭಯಭೀತರಾಗಿ ಬಾಗಿಲು ಹಾಕಿಕೊಂಡರೂ ಬಾಗಿಲು ಬಡಿದು ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿ ಆತಂಕದ ವಾತಾವರಣ ಸೃಷ್ಟಿಸಿದರೆಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.ವಿಷಯ ತಿಳಿಯುತ್ತಿದ್ದಂತೆ ಸೋಮವಾರ ರಾತ್ರಿಯೇ ಸ್ಥಳಕ್ಕಾಗಮಿಸಿದ ಜಿಲ್ಲಾ ಎಸ್ಪಿ ಎನ್.ಯತೀಶ್ ಪರಿಶೀಲನೆ ನಡೆಸಿದ ಬಳಿಕ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿರುವ ಅಭಿಲಾಷ್ ಆರೋಗ್ಯ ವಿಚಾರಿಸಿ ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದುಕೊಂಡರು.ಹಿಂದೂ ಯುವಕನ ಮೇಲೆ ಅನ್ಯಕೋಮಿನ ಯುವಕರ ಗುಂಪು ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಖಂಡಿಸಿ ಅಭಿಲಾಷ್ ಪೋಷಕರ ಜೊತೆಗೂಡಿ ಹಿಂದೂ ಸಂಘಟನೆ ನೂರಾರು ಮಂದಿ ಕಾರ್ಯಕರ್ತರು ಮಂಗಳವಾರ ಬೆಳಗ್ಗೆ ಬೆಳ್ಳೂರು ಪೊಲೀಸ್ ಠಾಣೆ ಮುಂಭಾಗದಲ್ಲಿ ಸೇರಿ ಪ್ರತಿಭಟಿಸಿದರು.ರಾತ್ರಿನೇ ಅಭಿಲಾಷ್ ಕುಟುಂಬಸ್ಥರಿಂದ ದೂರು ಪಡೆದು ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ. ಪೊಲೀಸರ ನಿರ್ಲಕ್ಷ್ಯಕ್ಕೆ ಅಭಿಲಾಷ್ ಮೇಲೆ ಮಾರಣಾಂತಿಕ ಹಲ್ಲೆಯಾಗಿದೆ ಎಂದು ಆರೋಪಿಸಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು.ಈ ವೇಳೆ ಪೊಲೀಸ್ ಠಾಣೆ ಮುಂಭಾಗ ಸೇರಿದ್ದ ಜನರನ್ನು ಅನ್ಯ ಕೋಮಿನ ಯುವಕ ವೀಡಿಯೋ ಚಿತ್ರೀಕರಣ ಮಾಡಲು ಮುಂದಾದನು. ಇದನ್ನು ವಿರೋಧಿಸಿದ ಜನರ ಗುಂಪು ಆತನನ್ನು ಹಿಡಿಯಲು ಮುಂದಾಗುತ್ತಿದ್ದಂತೆ ಆ ಯುವಕ ತಕ್ಷಣ ಓಡಿ ಹೋದನು. ಈ ವೇಳೆ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು ವೀಡಿಯೋ ಚಿತ್ರೀಕರಣ ಮಾಡುತ್ತಿದ್ದ ಯುವಕನನ್ನು ಕರೆಸುವಂತೆ ಪಟ್ಟು ಹಿಡಿದರು.ಪ್ರತ್ಯೇಕ 3 ದೂರು ದಾಖಲು:ಹಿಂದೂ ಯುವಕನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಾಳು ಅಭಿಲಾಷ್ ತಂದೆ ರಾಮು ಮತ್ತು ಅತ್ತೆ ರಶ್ಮಿ ಹಿಂದೂ ಸಂಘಟನೆ ಮುಖಂಡರೊಂದಿಗೆ ಠಾಣೆಗೆ ತೆರಳಿ ದೂರು ದಾಖಲಿಸಿದರು. ಶುಕ್ರವಾರ ರಾತ್ರಿ ದೂರು ಸ್ವೀಕರಿಸದ ಪೊಲೀಸರ ವಿರುದ್ಧವೂ ದೂರು ದಾಖಲಾಗಿದೆ.ನಾಗೇಶ್ ಮನೆ ಮೇಲೆ ದಾಂದಲೆ ನಡೆಸಿರುವ ಬಗ್ಗೆಯೂ ಪ್ರತ್ಯೇಕ ದೂರು ದಾಖಲಿಸಲಾಗಿದೆ. ಮಹಮ್ಮದ್ ಹುಜೈಫ್, ಇಮ್ರಾನ್, ಸೂಫಿಯಾನ್ ಸೇರಿದಂತೆ ಹಲವರ ವಿರುದ್ಧ ದೂರು ನೀಡಿ ನಿರ್ಲಕ್ಷ್ಯ ಮಾಡದೆ ಸಂಜೆಯೊಳಗೆ ಆರೋಪಿಗಳನ್ನು ಬಂಧಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ಹಿಂದೂ ಸಂಘಟನೆ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಬೆಳ್ಳೂರಿನಲ್ಲಿ ಪದೇ ಪದೆ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಆರೋಪಿಸಿದರು.ಪ್ರಕರಣದ ಮಾಹಿತಿ ಪಡೆದ ಡಿಐಜಿಪಿ:ಹಿಂದೂ ಯುವಕನ ಮೇಲೆ ಹಲ್ಲೆ ಪ್ರಕರಣದ ಸಂಬಂಧ ತಾಲೂಕಿನ ಬೆಳ್ಳೂರು ಪೊಲೀಸ್ ಠಾಣೆಗೆ ಮಂಗಳವಾರ ಭೇಟಿ ಕೊಟ್ಟ ದಕ್ಷಿಣ ವಲಯದ ಡಿಐಜಿಪಿ ಅಮಿತ್‌ಸಿಂಗ್, ಜಿಲ್ಲಾ ಎಸ್ಪಿ ಎನ್.ಯತೀಶ್ ಅವರಿಂದ ಮಾಹಿತಿ ಪಡೆದುಕೊಂಡರು. ಮುನ್ನೆಚ್ಚರಿಕೆಯಾಗಿ ಬೆಳ್ಳೂರು ಪೊಲೀಸ್ ಠಾಣೆ ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.ಗಾಯಾಳು ಅಭಿಲಾಷ್ ತಂದೆ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಶೀಘ್ರ ಕಾನೂನು ಕ್ರಮದ ಜೊತೆಗೆ ದೂರು ಪಡೆಯಲು ನಿರಾಕರಿಸಿದ ಪೊಲೀಸರನ್ನೂ ವಿಚಾರಣೆ ನಡೆಸಲಾಗುವುದು. ತಪ್ಪಿತಸ್ಥರೆಂದು ಸಾಬೀತಾದಲ್ಲಿ ಅವರ ವಿರುದ್ಧವೂ ಕ್ರಮ ಜರುಗಿಸಲಾಗುವುದು. ಬೆಳ್ಳೂರು ಪಟ್ಟಣ ಶಾಂತ ರೀತಿಯ ವಾತಾವರಣದಲ್ಲಿದೆ. ಯಾರಾದರೂ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾದರೆ ಅಂತವರ ವಿರುದ್ಧ ಕಠಿಣ ಕ್ರಮ ಅನಿವಾರ್ಯ. ಘಟನೆ ಸಂಬಂಧ ಪ್ರತಿ ದೂರು ಕೂಡ ಕೊಟ್ಟಿದ್ದಾರೆ. ಅದನ್ನೂ ಪರಿಶೀಲಿಸಲಾಗುವುದು.-ಎನ್.ಯತೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮಂಡ್ಯ ಸೇರಿದಂತೆ ರಾಜ್ಯದೆಲ್ಲೆಡೆ ಕೋಮು ವಿಷಬೀಜ ಬಿತ್ತಲಾಗುತ್ತಿದೆ. ಬೆಳ್ಳೂರಿನಲ್ಲಿ ಗಂಗಾಮತಸ್ಥ ಸಮುದಾಯದವರು ಹಬ್ಬ ಮಾಡುವ ವೇಳೆ ಅನ್ಯಕೋಮಿನ 40 ಮಂದಿ ಗುಂಪು ದಾಳಿ ಮಾಡುತ್ತಾರೆಂದರೆ ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರೇ ಉತ್ತರ ಕೊಡಬೇಕು. ಹಿಂದೂಗಳ ಮೇಲಿನ ಹಲ್ಲೆಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಕಾನೂನು ವ್ಯವಸ್ಥೆ ಮತ್ತು ಪೊಲೀಸರ ಮೇಲೆ ಭಯವಿಲ್ಲವೆಂದರೆ ನಾವು ಜೀವನ ಮಾಡುವುದಾದರೂ ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ. ಈ ಘಟನೆ ಖಂಡಿಸಿ ಜಿಲ್ಲಾದ್ಯಂತ ಹೋರಾಟ ಹಮ್ಮಿಕೊಳ್ಳಲು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೊಂದಿಗೆ ಚರ್ಚಿಸಿ ಸಂಜೆಯೊಳಗೆ ಒಂದು ತೀರ್ಮಾನ ತೆಗೆದುಕೊಳ್ಳಲಾಗುವುದು.-ಡಾ.ಇಂದ್ರೇಶ್, ಬಿಜೆಪಿ ಜಿಲ್ಲಾಧ್ಯಕ್ಷಪೂರ್ವ ನಿಯೋಜಿತ ಕೃತ್ಯ: ಮಾಜಿ ಶಾಸಕ ಸುರೇಶ್ ಗೌಡ ಆರೋಪ
ನಾಗಮಂಗಲ:ಒಬ್ಬ ಯುವಕನ್ನು ನೂರಕ್ಕೂ ಹೆಚ್ಚು ಮಂದಿ ಕಿಡಿಗೇಡಿಗಳು ಅಟಾಕ್ ಮಾಡಿ ಹಲ್ಲೆ ನಡೆಸಿರುವುದು ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂದು ಮಾಜಿ ಶಾಸಕ ಸುರೇಶ್ ಗೌಡ ದೂರಿದರು.
ಬೆಳ್ಳೂರಿನಲ್ಲಿ ಹಿಂದೂ ಯುವಕನ ಮೇಲೆ ಹಲ್ಲೆ ಪ್ರಕರಣದ ವಿಷಯ ತಿಳಿದು ಸ್ಥಳಕ್ಕೆ ಭೇಟಿ ಕೊಟ್ಟು ಅಭಿಲಾಷ್ ಕುಟುಂಬಸ್ಥರಿಗೆ ಧೈರ್ಯ ತುಂಬಿದ ಬಳಿಕ ಘಟನೆ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು.ಹಿಂದೂ ಯುವಕನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರನ್ನು ಬಂಧಿಸಿರುವ ಪೊಲೀಸರು ಯಾವುದೋ ದೂರವಾಣಿ ಕರೆ ಬಂದ ತಕ್ಷಣ ಬಿಟ್ಟು ಕಳಿಸಿದ್ದಾರೆ. ಯಾರನ್ನು ಬಂಧಿಸಿ ಯಾರನ್ನು ಬಿಟ್ಟಿದ್ದಾರೆ ಎಂಬುದು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುತ್ತದೆ. ಸಿಸಿ ಟಿವಿ ಪುಟೇಜ್‌ಗಳನ್ನು ಯಾರಿಗೂ ಕೊಡಬಾರದೆಂದು ಬೆದರಿಕೆ ಹಾಕಿದ್ದಾರೆಂಬ ಮಾಹಿತಿ ನನಗೆ ಸಿಕ್ಕಿದೆ ಎಂದು ಆರೋಪಿಸಿದರು.
ಒಬ್ಬ ಯುವಕನ್ನು ನೂರಕ್ಕೂ ಹೆಚ್ಚು ಮಂದಿ ಕಿಡಿಗೇಡಿಗಳು ಅಟಾಕ್ ಮಾಡಿ ಹಲ್ಲೆ ನಡೆಸಿರುವ ಘಟನೆಯಿಂದ ಬೆಳ್ಳೂರು ಪಟ್ಟಣ ನಡುಗಿ ಹೋಗಿದೆ. ಯಾರೂ ಸಹ ಕಾನೂನು ಕೈಗೆತ್ತಿಕೊಳ್ಳಬಾರದು. ಎಲ್ಲಾ ಸಮಾಜದವರು ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದರು.ಘಟನೆಯಲ್ಲಿ ಭಾಗಿಯಾಗಿರುವವರನ್ನು ನಾಳೆಯೊಳಗೆ ಪೊಲೀಸರು ಸುಪರ್ದಿಗೆ ತೆಗೆದುಕೊಂಡು ಸರಿಯಾದ ರೀತಿಯಲ್ಲಿ ಸೆಕ್ಷನ್ ಹಾಕಿಲ್ಲವೆಂದರೆ ಬೆಳ್ಳೂರು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರ ಜೊತೆಗೂಡಿ ಹೋರಾಟದ ರೂಪುರೇಷೆ ಸಿದ್ದಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.