ನಾಗಮಂಗಲ: ಗಣೇಶ ಮೆರವಣಿಗೆ ವೇಳೆ ಪಟ್ಟಣದಲ್ಲಿ ಉಂಟಾದ ಕೊಮುಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದ ಭೀತಿಯಿಂದ ಗ್ರಾಮ ತೊರೆದಿದ್ದ ಯುವಕ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಶನಿವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ.
ಪಟ್ಟಣದಲ್ಲಿ ಸೆ.11ರ ರಾತ್ರಿ ನಡೆದ ಕೋಮು ಗಲಭೆ ಬಳಿಕ ಬಂಧನದ ಭೀತಿಯಿಂದ ತಲೆಮರೆಸಿಕೊಂಡಿದ್ದ ಕಿರಣ್ ಬೆಂಗಳೂರಿನಲ್ಲಿ ನೆಲೆಸಿದ್ದರು. ತಂದೆ ಜೈಲಿನಲ್ಲಿರುವುದರಿಂದ ಮನೆಯಲ್ಲಿ ತಾಯಿ, ಪತ್ನಿ ಮತ್ತು ಚಿಕ್ಕ ಮಗುವನ್ನು ಯಾರು ನೋಡಿಕೊಳ್ಳುತ್ತಾರೆಂದು ಕೊರಗುತ್ತಿದ್ದರು.
ಒಂದೆಡೆ ಬಂಧನದ ಭೀತಿಯ ಗಾಬರಿ, ಮತ್ತೊಂದೆಡೆ ಕುಟುಂಬಕ್ಕಾಗಿರುವ ಪರಿಸ್ಥಿತಿಯ ಕೊರಗಿನಲ್ಲಿದ್ದ ಕಿರಣ್‌ಗೆ ಕಳೆದ ಎರಡು ದಿನಗಳ ಹಿಂದೆ ಪಾರ್ಶ್ವವಾಯುಗೆ ತುತ್ತಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆಯನ್ನೂ ಕೂಡ ಮಾಡಿಸಲಾಗಿತ್ತು ಎನ್ನಲಾಗಿದೆ. ಆದರೆ, ಲೋ ಬಿಪಿಯಾಗಿ ಚಿಕಿತ್ಸೆ ಫಲಿಸದೆ ಶನಿವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.ಮೃತ ಕಿರಣ್‌ಗೆ ಗಲಭೆ ಪ್ರಕರಣದಲ್ಲಿ ಜೈಲು ಸೇರಿರುವ ತಂದೆ ಕುಮಾರ್, ತಾಯಿ ಶಶಿ, ಪತ್ನಿ ಸೌಮ್ಯ ಹಾಗೂ ಎರಡು ವರ್ಷದ ಗಂಡುಮಗು ಇದ್ದು, ಕುಟುಂಬಕ್ಕೆ ಆಧಾರಸ್ಥಂಭವಾಗಿದ್ದ ಕಿರಣ್ ಸಾವಿನಿಂದ ದಿಕ್ಕು ತೋಚದಂತಾಗಿರುವ ಕುಟುಂಬಸ್ಥರ ರೋಧನ ಮನಕಲಕುವಂತಿತ್ತು.
ಗ್ರಾಮದಲ್ಲಿ ಸ್ಮಶಾನ ಮೌನ: ಗಲಭೆ ಪ್ರಕರಣದಿಂದಾಗಿ ಗ್ರಾಮದ ಹಲವರು ಜೈಲು ಸೇರಿದ್ದರೆ, ಬಂಧನದ ಭೀತಿಯಿಂದಾಗಿ ಬಹುತೇಕ ಯುವಕರು ಊರು ತೊರೆದಿದ್ದಾರೆ. ಇದರ ನಡುವೆ ಕಿರಣ್ ಸಾವಿನಿಂದಾಗಿ ಬದರಿಕೊಪ್ಪಲಿನಲ್ಲಿ ಸ್ಮಶಾನ ಮೌನ ಆವರಿಸಿತ್ತು. ಪಟ್ಟಣ ಸೇರಿದಂತೆ ಹಲವು ಭಾಗಗಳಿಂದ ಸಹಸ್ರಾರು ಮಂದಿ ಆಗಮಿಸಿ ಮೃತ ಕಿರಣ್ ಅಂತಿಮ ದರ್ಶನ ಪಡೆದರು.
ಮಗನ ಅಂತ್ಯಕ್ರಿಯೆಗೆ ಕೋರ್ಟ್ ಅನುಮತಿ: ಗಲಭೆ ಪ್ರಕರಣದ 17ನೇ ಆರೋಪಿ ಬದರಿಕೊಪ್ಪಲಿನ ಕುಮಾರ್ ಪುತ್ರ ಕಿರಣ್ ಮೃತಪಟ್ಟಿರುವ ಹಿನ್ನೆಲೆಯಲ್ಲಿ ನಾವು ಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದು, ಮಗನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ತಂದೆಗೆ ಅವಕಾಶ ನೀಡಬೇಕೆಂದು ಕಿರಣ್ ಕುಟುಂಬಸ್ಥರು ನ್ಯಾಯಾಲಯದ ಮೊರೆ ಹೋಗಿದ್ದರು.