ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನೀಡಿದ ಕೊಡುಗೆಗಳನ್ನು ಪ್ರತಿ ಬೂತ್ ಮಟ್ಟದಲ್ಲಿ ಸಂಘಟನೆಗೊಂಡು ಜನರಿಗೆ ತಿಳಿಸುವ ಕೆಲಸವನ್ನು ಫೆ.9ರಿಂದ ಮೂರು ದಿನಗಳ ಕಾಲ ಮಾಡಲಾಗುವುದು ಎಂದು ಮಾಜಿ ಸಚಿವ ಎನ್. ಮಹೇಶ್ ಹೇಳಿದರು.
ಮಂಗಳವಾರ ರಾತ್ರಿ ನಡೆದ ಬಿಜೆಪಿ ಸಭೆಯಲ್ಲಿ ಮಾತನಾಡಿ, ಫೆ 9, 10 ಮತ್ತು 11ರಂದು ದೇಶಾದ್ಯಂತ ನರೇಂದ್ರ ಮೋದಿಯವರ ಆದೇಶದ ಮೇರೆಗೆ ಗ್ರಾಮ ಚಲೋ ಅಭಿಯಾನ ನಡೆಯಲಿದ್ದು ಕೇಂದ್ರದ 10 ವರ್ಷಗಳ ಸಾಧನೆಯನ್ನು ಮತ್ತು ಕರ್ನಾಟಕ ರಾಜ್ಯಕ್ಕೆ ನೀಡಿದ ಕೊಡುಗೆಯನ್ನು ಜನರಿಗೆ ತಿಳಿಸುವ ಕೆಲಸವನ್ನು ಕರಪತ್ರ ಹಂಚುವ ಮೂಲಕ ಪ್ರತಿಯೊಬ್ಬರು ಮಾಡಬೇಕು, ಮೋದಿ ಸರ್ಕಾರ ಕರ್ನಾಟಕ ಅಭಿವೃದ್ಧಿಗೆ ಸ್ಪಂದಿಸಿದೆ ಎಂಬುದನ್ನ ತಿಳಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು. ಕಾಂಗ್ರೆಸ್ ಸರ್ಕಾರ ನಾಟಕೀಯ ಬೆಳವಣಿಗೆಯಲ್ಲಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದೆ. ಇದನ್ನ ಖಂಡಿಸಿ ನಾವು ಕೇಂದ್ರ ಕರ್ನಾಟಕಕ್ಕೆ ನೀಡಿದ ಕೊಡುಗೆಯನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತೇವೆ, ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕೇಂದ್ರದ ವಿರುದ್ದ ಪ್ರತಿಭಟನೆ ನಡೆಸುತ್ತಿದೆ ಎಂದರು. ಮಾಜಿ ಶಾಸಕ ಎಸ್. ಬಾಲರಾಜು ಮಾತನಾಡಿ, ನರೇಂದ್ರ ಮೋದಿಯವರ ಕೊಡುಗೆ ಪ್ರತಿ ಕುಟುಂಬಕ್ಕೂ ಆಧಾರ ಸ್ತಂಭವಾಗಿವೆ, ಕಾಂಗ್ರೆಸ್ ಆರೋಪದಲ್ಲಿ ಹುರುಳಿಲ್ಲ, ಕಾಂಗ್ರೆ ಸ್ ಸರ್ಕಾರ ಗ್ಯಾರಂಟಿ ಹೆಸರಲ್ಲಿ ರಾಜ್ಯವನ್ನು ಹಾಳು ಮಾಡಲು ಹೊರಟಿದೆ. ಗೃಹಲಕ್ಷ್ಮಿ ಯೋಜನೆ ಇನ್ನು ಶೇ 40ರಷ್ಚು ಮಹಿಳೆಯರಿಗೆ ತಲುಪಿಲ್ಲ ಎಂದು ಆರೋಪಿಸಿದರು. ಸಭೆಯಲ್ಲಿ ನಿರಂಜನ್ ರವಿ, ಪಮ್ಮಿ, ಸೋಮಣ್ಣ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸುಂದರ್, ಜಿಲ್ಲಾ ಉಪಾಧ್ಯಕ್ಷ ಸಿ.ಎಂ ಪರಮೇಶ್ವರಯ್ಯ, ಜಿಲ್ಲಾ ಕಾರ್ಯದರ್ಶಿ ರೇವಣ್ಣ, ನಗರಮಂಡಲ ಪ್ರಧಾನ ಕಾರ್ಯದರ್ಶಿ ಕವಿತಾ ಇದ್ದರು.