ಸಂಸ್ಕೃತಿ, ಧೈರ್ಯ, ಹಕ್ಕುಗಳಿದ್ದಲ್ಲಿ ಸಮುದಾಯ ಕಟ್ಟಲು ಸಾಧ್ಯ: ಗೊಲ್ಲಹಳ್ಳಿ ಶಿವಪ್ರಸಾದ್

KannadaprabhaNewsNetwork |  
Published : Dec 11, 2025, 01:15 AM IST
  ಸಿಕೆಬಿ-3 ನಗರದ ಕನ್ನಡಭವನದಲ್ಲಿ ನಡೆದ ಮಾನವ ಹಕ್ಕುಗಳ ದಿನಾಚರಣೆ ಮತ್ತು ಶ್ರೀ ದ್ವಾರಕನಾಥ್‌ರೆಡ್ಡಿ ರವರ 101ನೇ ವರ್ಷದ ಜನ್ಮವಾರ್ಷಿಕೋತ್ಸವ  ಆಚರಣೆ ಕಾರ್ಯಕ್ರಮಕ್ಕೆ ಗೊಲ್ಲಹಳ್ಳಿ ಶಿವಪ್ರಸಾದ್ ಚಾಲನೆ ನೀಡಿದರು  | Kannada Prabha

ಸಾರಾಂಶ

1000ಕ್ಕೂ ಹೆಚ್ಚು ಸಮುದಾಯ ಸದಸ್ಯರನ್ನು ಒಟ್ಟಿಗೆ ಸಂಘಟಿಸಿ, ಮಾನವೀಯ ಹಕ್ಕುಗಳ ಅರಿವನ್ನು ಅರ್ಥಪೂರ್ಣವಾಗಿ ಮಾನವಹಕ್ಕುಗಳ ದಿನಾಚರಣೆ ಮತ್ತು ಸಂಸ್ಥಾಪಕರ ದಿನಾಚರಣೆ ಮುಖೇನ ನೀಡಲಾಗಿದೆ. ಚೆಕ್‌ಗಳ ವಿತರಣೆ ಮೂಲಕ ಡಿಆರ್‌ಆರ್‌ಟಿ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ . ಹೋರಾಟದಿಂದ ಬದುಕು ಕಟ್ಟಿಕೊಂಡ ಸಮುದಾಯಗಳ ಸಾಧನೆಯನ್ನು ಮತ್ತು ಬಡಮಕ್ಕಳ, ಯುವಕರು ಹಾಗೂ ಮಕ್ಕಳ ಪ್ರಗತಿಯನ್ನು ಸ್ಮರಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸಂಸ್ಕೃತಿ, ಧೈರ್ಯ ಮತ್ತು ಹಕ್ಕುಗಳು ಇದ್ದಲ್ಲಿ ಉತ್ತಮ ಸಮುದಾಯ ಕಟ್ಟಲು ಸಾಧ್ಯ ಎಂದು ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಅಭಿಪ್ರಾಯಪಟ್ಟರು.

ನಗರದ ಕನ್ನಡಭವನದಲ್ಲಿ ದ್ವಾರಕನಾಥ್‌ ರೆಡ್ಡಿ ರಮಣಾರ್ಪಣಂ ಸಂಸ್ಥೆಯ(ಡಿಆರ್‌ಆರ್‌ಟಿ) ವತಿಯಿಂದ ನಡೆದ ಮಾನವ ಹಕ್ಕುಗಳ ದಿನಾಚರಣೆ ಮತ್ತು ಶ್ರೀ ದ್ವಾರಕನಾಥ್‌ರೆಡ್ಡಿ ರವರ 101ನೇ ಜನ್ಮವಾರ್ಷಿಕೋತ್ಸವ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗದಿರಲು ಹೆಚ್ಚಿನ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.

ಪ್ರತಿಯೊಬ್ಬರೂ ತಮ್ಮ ಹಕ್ಕುಗಳು, ಕರ್ತವ್ಯದ ಬಗ್ಗೆ ತಿಳಿದುಕೊಳ್ಳಬೇಕು. ಆಗ ಮಾನವ ಹಕ್ಕುಗಳ ಉಲ್ಲಂಘನೆಯಾಗುವುದನ್ನು ತಡೆಯಲು ಸುಲಭವಾಗುತ್ತದೆ. ಈ ನಿಟ್ಟಿನಲ್ಲಿ ಮಾನವ ಹಕ್ಕುಗಳ ಕುರಿತು ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವ ಕೆಲಸ ಹೆಚ್ಚು ನಡೆಯಬೇಕು. ಇದಕ್ಕಾಗಿ ಅನೇಕ ಸ್ವಯಂ ಸೇವಾ ಸಂಸ್ಥೆಗಳು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂವಿಧಾನವು ಪ್ರಜೆಗಳಿಗೆ ಸರಿಸಮಾನವಾಗಿ ಹಕ್ಕುಗಳನ್ನು ಕೊಟ್ಟು ಹಾಗೆಯೇ ನಿರ್ವಹಿಸಬೇಕಾದ ಜವಾಬ್ದಾರಿಯ ಬಗ್ಗೆ ತಿಳಿಸಿದೆ. ಇದನ್ನು ಚಾಚೂ ತಪ್ಪದೇ ಪಾಲಿಸಿದಾಗ ಮಾನವ ಹಕ್ಕುಗಳ ಸಂರಕ್ಷಣೆಯಾಗುತ್ತದೆ ಎಂದರು.

ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಪದ್ಮಶ್ರೀ ಪುರಸ್ಕೃತ ಅನಿತಾ ರೆಡ್ಡಿ ಮಾತನಾಡಿ, ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ತಡೆಯುವ ವಿಶ್ವಸಂಸ್ಥೆಯ ಒಡಂಬಡಿಕೆಗೆ ನಮ್ಮ ದೇಶವು ಸಹ ಸಹಿ ಹಾಕಿದೆ. ಅದರಂತೆ ಮಾನವ ಹಕ್ಕುಗಳ ಸಂರಕ್ಷಣೆಗೆ ತನ್ನದೇ ಆದ ರೀತಿಯಲ್ಲಿ ಯುಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ. ಯಾವುದೇ ಸಂದರ್ಭದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಹಾಗೂ ಅವುಗಳನ್ನು ಹೇಗೆ ಸಂರಕ್ಷಿಸಿಕೊಳ್ಳಬೇಕು ಎನ್ನುವ ದಿಸೆಯಲ್ಲಿ ನಾವೆಲ್ಲರೂ ಜವಾಬ್ದಾರಿಯನ್ನು ಅರಿತು ನಡೆದುಕೊಳ್ಳಬೇಕು ಎಂದರು.

1000ಕ್ಕೂ ಹೆಚ್ಚು ಸಮುದಾಯ ಸದಸ್ಯರನ್ನು ಒಟ್ಟಿಗೆ ಸಂಘಟಿಸಿ, ಮಾನವೀಯ ಹಕ್ಕುಗಳ ಅರಿವನ್ನು ಅರ್ಥಪೂರ್ಣವಾಗಿ ಮಾನವಹಕ್ಕುಗಳ ದಿನಾಚರಣೆ ಮತ್ತು ಸಂಸ್ಥಾಪಕರ ದಿನಾಚರಣೆ ಮುಖೇನ ನೀಡಲಾಗಿದೆ. ಚೆಕ್‌ಗಳ ವಿತರಣೆ ಮೂಲಕ ಡಿಆರ್‌ಆರ್‌ಟಿ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ . ಹೋರಾಟದಿಂದ ಬದುಕು ಕಟ್ಟಿಕೊಂಡ ಸಮುದಾಯಗಳ ಸಾಧನೆಯನ್ನು ಮತ್ತು ಬಡಮಕ್ಕಳ, ಯುವಕರು ಹಾಗೂ ಮಕ್ಕಳ ಪ್ರಗತಿಯನ್ನು ಸ್ಮರಿಸಿದರು.

ವಿಜ್ಞಾನಿ ಡಾ. ವಿಜಯಚಂದ್ರ ಮಾತನಾಡಿ, ಚಿಕ್ಕಬಳ್ಳಾಪುರ ಗ್ರಾಮೀಣ ಭಾಗದ ಜನರಿಗೆ ಹೊಸ ಆರೋಗ್ಯದ ಕಾರ್ಯಕ್ರಮಗಳನ್ನು ನೀಡುವುದಾಗಿ ಭರವಸೆಯನ್ನು ನೀಡಿದರು.

ಮಾಜಿ ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ಅವರ ಪುತ್ರ ಪ್ರತಾಪ್‌ರೆಡ್ಡಿರವರು, ವಿಧುರಾಶ್ವಥ ಹೋರಾಟದ ಇತಿಹಾಸವನ್ನು ನೆನಪಿಸಿ ಪ್ರೇಕ್ಷಕರಿಗೆ ಪ್ರೇರಣೆಯನ್ನು ನೀಡಿದರು.

ಈ ವೇಳೆ ನವಶಕ್ತಿ ನಾಟಕ ಪ್ರದರ್ಶಿಸಲಾಯಿತು. ಗಂಗರಾಜ್ ರಚನೆಯ ಈ ನಾಟಕವನ್ನು ದೇವರಾಜ ನಿರ್ದೇಶನದಲ್ಲಿ ಮತ್ತು ನಾಗೇಶ್‌ರವರ ಸಂಗೀತ ಸಂಯೋಜನೆಯಲ್ಲಿ ದ್ರಿಕ್ ಜೀವನೋತ್ಸವ ಮಕ್ಕಳು, ಅರಣ್ಯಚುಕ್ಕಿ ಶಾಲೆಯ ಮಕ್ಕಳು ಮತ್ತು ಅರಣ್ಯಚುಕ್ಕಿ ಶಾಲೆಯ ಶಿಕ್ಷಕ ವರ್ಗದವರು ಅಭಿನಯಿಸಿದ್ದಾರೆ. ನಾಟಕವು ನಮ್ಮ ಸಮುದಾಯ ಮತ್ತು ಸಮಾಜದಲ್ಲಿನ ನ್ಯೂನ್ಯತೆಗಳಾದ ಭ್ರಷ್ಟಾಚಾರ, ಲಿಂಗ ಅಸಮಾನತೆ ಮತ್ತು ದುರಾಸೆಯನ್ನು ಹೋಗಲಾಡಿಸುವ ಸಂದೇಶದ ಜೊತೆಗೆ ಗಾಂಧೀಜಿಯ ಆದರ್ಶಗಳ ಮುಖೇನ ಮಹಿಳಾ ಶಕ್ತಿಯನ್ನು ಉತ್ತಮವಾದ ರೀತಿಯಲ್ಲಿ ಪ್ರಸ್ತುತ ಪಡಿಸಿದರು. ಜೊತೆಗೆ ಬೆಂಗಳೂರಿನ ಎಂ ಆರ್ ಎಸ್ ಪಾಳ್ಯ ಸಮುದಾಯದ ಜೀವನೋತ್ಸವ ಮಕ್ಕಳಿಂದ ಭರತನಾಟ್ಯ ಮತ್ತು ಗಾಯನಗಳು ಸಂಜೆಯ ಕಾರ್ಯಕ್ರಮವನ್ನು ಮೆರಗುಗೊಳಿಸಿತು. ಉತ್ಸಾಹಭರಿತ ಡೊಳ್ಳುಕುಣಿತ, ಪಟ್ಟಕುಣಿತ ಮತ್ತು ಜಂಬೆ ಪ್ರದರ್ಶನಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಚೈತನ್ಯವನ್ನು ನೀಡಿದವು.

ಕಾರ್ಯಕ್ರಮದಲ್ಲಿ ನ್ಯಾಷನಲ್ ಸೆಂಟ್ರಲ್ ಫಾರ್ ಲೇಬರ್ ನ ಪ್ರಧಾನ ಕಾರ್ಯದರ್ಶಿ ಎನ್.ಪಿ.ಸಾಮಿ, ಡಿಆರ್‌ಆರ್‌ಟಿಗೆ ಬೆಂಬಲ ನೀಡುತ್ತಿರುವ ಎನ್.ಆರ್. ಚಂದ್ರಶೇಖರ್‌, ರಾಮಕೃಷ್ಣನ್‌, ಡಿಆರ್‌ಆರ್‌ಟಿಯ ಸುವರ್ಣ, ರಾಗಿಣಿ, ಮಂಜಪ್ಪ, ವೆಂಕಟೇಶ್, ಅರ್ಜುನ್, ಏಳುಮಲೈ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲ್ಕೆರೆ ಪಿಎಸಿಎಸ್‌ ಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ
ಶೃಂಗೇರಿ ಕ್ಷೇತ್ರಕ್ಕೆ ಅರಣ್ಯ ಸಚಿವರ ಆಗಮನಕ್ಕೆ ತಿಂಗಳ ಗಡುವು