ಜನಸಂಖ್ಯೆ ನಿಯಂತ್ರಣಕ್ಕೆ ಸಮುದಾಯದ ಸಹಭಾಗಿತ್ವ ಅಗತ್ಯ: ಮೇಯರ್ ನಂದೀಶ್

KannadaprabhaNewsNetwork | Published : Jul 15, 2024 1:48 AM

ಸಾರಾಂಶ

ಪ್ರಸ್ತುತ ದೇಶದ ಜನಸಂಖ್ಯೆ 144 ಕೋಟಿ ದಾಟಿದ್ದು, ಜಗತ್ತಿನ ಶೇ.17 ಜನಸಂಖ್ಯೆ ಭಾರತದಲ್ಲಿದೆ.

ಬಳ್ಳಾರಿ: ಜನಸಂಖ್ಯಾ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯ ಯೋಜನೆಗಳ ಜೊತೆಗೆ ಜನ ಸಮುದಾಯವು ಸಕ್ರಿಯವಾಗಿ ಭಾಗವಹಿಸಿದ್ದಲ್ಲಿ ಮಾತ್ರ ಜನಸಂಖ್ಯೆಯನ್ನು ನಿಯಂತ್ರಣ ಮಾಡಲು ಸಾಧ್ಯ ಎಂದು ಬಳ್ಳಾರಿ ಮಹನಾಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್ ಹೇಳಿದರು.

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಟಾನ ವಿಭಾಗ, ಜಿಲ್ಲಾಸ್ಪತ್ರೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಜಿಲ್ಲಾ ಆಸ್ಪತ್ರೆಯ ಡಿಎನ್‍ಬಿ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆಯ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ದೇಶದ ಜನಸಂಖ್ಯೆ 144 ಕೋಟಿ ದಾಟಿದ್ದು, ಜಗತ್ತಿನ ಶೇ.17 ಜನಸಂಖ್ಯೆ ಭಾರತದಲ್ಲಿದೆ. 6.82 ಕೋಟಿ ಜನಸಂಖ್ಯೆ ಕರ್ನಾಟಕ ರಾಜ್ಯದಲ್ಲಿದೆ. ಜನಸಂಖ್ಯೆ ನಿಯಂತ್ರಣ ಕೈಗೊಳ್ಳುವ ಕಾರ್ಯವನ್ನು ಸಮುದಾಯದ ಸಹಭಾಗಿತ್ವದೊಂದಿಗೆ ಯಶಸ್ವಿಗೊಳಿಸೋಣ ಎಂದು ವಿನಂತಿಸಿದರು.

ಲಿಡ್ಕರ್ ನಿಗಮ ಅಧ್ಯಕ್ಷ ಮುಂಡರಗಿ ನಾಗರಾಜ್ ಅವರು ಮಾತನಾಡಿ, ಹೆಚ್ಚುತ್ತಿರುವ ಜನಸಂಖ್ಯೆಯು ದೇಶದ ಸಾಮಾಜಿಕ, ಆರ್ಥಿಕ ಅಭಿವೃದ್ದಿಯಲ್ಲಿ ಅನೇಕ ತೊಂದರೆಗಳನ್ನು ಉಂಟುಮಾಡುತ್ತದೆ. ನಮ್ಮ ಮುಂದೆ ಜನಸಂಖ್ಯಾ ಸ್ಥಿರತೆಯನ್ನು ಕಾಯ್ದುಕೊಳ್ಳುವ ಬಹುದೊಡ್ಡ ಜವಾಬ್ದಾರಿಯಿದೆ ಎಂದು ಹೇಳಿದರು.

ಜನಸಂಖ್ಯೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಬೇಕಾದರೆ, ಜನ್ಮ ನೀಡುವ ತಾಯಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯದಲ್ಲಿ ಬದ್ದತೆಯನ್ನು ಕಾಪಾಡುವುದಾಗಿದೆ. ಅದಕ್ಕಾಗಿ ಸರ್ಕಾರ ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ಸಾರ್ವಜನಿಕರಿಗೆ ಅದರಲ್ಲೂ ಮಹಿಳೆಯರಿಗೆ ಸಾಕಷ್ಟು ಆರೋಗ್ಯ ಸೇವಾ ಸೌಲಭ್ಯಗಳನ್ನು ನೀಡುತ್ತಿದೆ ಎಂದು ತಿಳಿಸಿದರು.

ಮದುವೆ ನಂತರ ಕನಿಷ್ಟ ಮೂರು ವರ್ಷಗಳವರೆಗೆ ಮಕ್ಕಳಾಗುವುದನ್ನು ತಡೆಗಟ್ಟುವುದು, ಎರಡು ಮಕ್ಕಳಿಗೆ ಸಂತಾನ ನಿಯಂತ್ರಿಸುವುದು, ಒಂದು ಮಗುವಿನ ನಂತರ ಕನಿಷ್ಟ ಮೂರು ವರ್ಷ ಅಂತರವಿಡುವುದು. ಕುಟುಂಬ ಕಲ್ಯಾಣ ಪದ್ಧತಿ ಅಳವಡಿಸುವಂತೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಮೇಲಿನ ಎಲ್ಲಾ ರೀತಿಯಿಂದ ಜನಸಂಖ್ಯೆ ನಿಯಂತ್ರಿಸಿ ಜನಸಂಖ್ಯೆ ಸ್ಥಿರತೆಯನ್ನು ಕಾಪಾಡಿ ದೇಶದ ಸಮಗ್ರ ಅಭಿವೃದ್ದಿಯಲ್ಲಿ ಪಾಲುದಾರರಾಗೋಣ ಎಂದು ತಿಳಿಸಿದರು.

ಡಿಎಚ್‌ಒ ಡಾ.ವೈ.ರಮೇಶ್‍ಬಾಬು ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಸಾಧಕ ವೈದ್ಯರು ಮತ್ತು ಸಿಬ್ಬಂದಿಯವರಿಗೆ ಸನ್ಮಾನಿಸಲಾಯಿತು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಜಾಗೃತಿ ಜಾಥ ನಡೆಯಿತು. ಉಪಮೇಯರ್ ಡಿ.ಸುಕುಂ, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಪೂರ್ಣಿಮ ಕಟ್ಟಿಮನಿ, ಆರೋಗ್ಯ ಶಿಕ್ಷಣ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಪದ್ಮರೋಜ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ, ವಿವೇಕ್, ಫಯಾಜ್, ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ.ಆರ್., ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ., ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರ ಕುಮಾರ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಹನುಮಂತಪ್ಪ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್.ದಾಸಪ್ಪನವರ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾಕಾರ್ಯಕರ್ತೆಯರು ಉಪಸ್ಥಿತರಿದ್ದರು.

Share this article