ಶಿಕ್ಷಣದ ಮೂಲಕವೇ ಸಮುದಾಯ ಪರಿವರ್ತನೆ ಸಾಧ್ಯ

KannadaprabhaNewsNetwork |  
Published : Oct 25, 2026, 01:30 AM IST
ಪೋಟೋ: 24ಟಿಟಿಎಚ್‌01ತೀರ್ಥಹಳ್ಳಿ ಪಟ್ಟಣದ ಸಂಸ್ಕೃತಿ ಮಂದಿರ ಆವರಣದಲ್ಲಿ ನಡೆದ 172ನೇ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಹಾಗೂ ಸಮಾಜ ಭಾಂದವರ ಬೃಹತ್‌ ಸಮಾವೇಶವನ್ನು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಉದ್ಘಾಟಿಸಿದರು. | Kannada Prabha

ಸಾರಾಂಶ

Community transformation is possible only through education.

-ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್‌ ಅಭಿಮತ । ಬ್ರಹ್ಮಶ್ರೀ ನಾರಾಯಣಗುರು ಜಯಂತಿ । ಸಮಾಜ ಬಾಂಧವರ ಬೃಹತ್‌ ಸಮಾವೇಶ

---

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಶ್ರೀಮಂತಿಕೆ ಇರುವ ವ್ಯಕ್ತಿಗಳು ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಮೇಲೆ ಔದಾರ್ಯ ತೋರಬೇಕು. ಶಿಕ್ಷಣದ ಮೂಲಕವೇ ಸಮುದಾಯ ಪರಿವರ್ತನೆ ಹೊಂದಲು ಸಾಧ್ಯ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಹೇಳಿದರು.

ಸಂಸ್ಕೃತಿ ಮಂದಿರ ಆವರಣದಲ್ಲಿ ನಡೆದ 172ನೇ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಹಾಗೂ ಸಮಾಜ ಬಾಂಧವರ ಬೃಹತ್‌ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿ, ದೇವರು, ಜಾತಿ, ಧರ್ಮದ ಹೆಸರಿನಲ್ಲಿ ಯಾವುದೇ ವ್ಯಕ್ತಿಗಳು ದ್ವೇಶ ಮಾರಬಾರದು. ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲತ್ತು ಪಡೆಯುವ ಹಕ್ಕಿದೆ. ಶಿಕ್ಷಣ ಸ್ವಂತಿಕೆ ಕಲಿಸುತ್ತದೆ ಎಂದು ನುಡಿದರು.

ಜೀವನಕ್ಕೋಸ್ಕರ ರಾಜಕಾರಣಕ್ಕೆ ಬರಬೇಡಿ, ಜೀವನವನ್ನು ಬದಲಾಯಿಸಲು ರಾಜಕಾರಣ ಆಯ್ಕೆ ಮಾಡಿಕೊಳ್ಳಿ. ನಿಮ್ಮ ಮಕ್ಕಳ ಭವಿಷ್ಯಕ್ಕೆ ಶಿಕ್ಷಣ, ಆರೋಗ್ಯ, ಅನ್ನ ಕೊಡುವವರನ್ನು ಬೆಂಬಲಿಸಿ. ಸಮಾಜದ ಕೊನೆಯ ವ್ಯಕ್ತಿಗೂ ಶೈಕ್ಷಣಿಕ ಲಾಭ ತಲುಪುವಂತೆ ಅನುಕೂಲ ಮಾಡಿಕೊಡಿ. ಸ್ವಾತಂತ್ರ್ಯ ಲಭಿಸಿ 75 ವರ್ಷ ಕಳೆದರು ಸಮುದಾಯಕ್ಕೆ ಶಿಕ್ಷಣ ಸಂಸ್ಥೆ ಆರಂಭಿಸಲು ಏಕೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದರು.

ಅಸ್ಪೃಶ್ಯತೆ, ಜಾತಿ ವ್ಯವಸ್ಥೆಯಲ್ಲಿ ತುಳಿತಕ್ಕೆ ಒಳಗಾಗಿದ್ದ ಸಮುದಾಯಕ್ಕೆ ಶೈಕ್ಷಣಿಕ, ಸಾಮಾಜಿಕ ಬದಲಾವಣೆ ತಂದುಕೊಂಡ ಕೀರ್ತಿ ನಾರಾಯಣಗುರುಗಳದ್ದು. ದೇವಸ್ಥಾನದ ಒಳಗೆ ಪ್ರವೇಶ ಇಲ್ಲದ ಕಾಲದಲ್ಲಿ ಶೂದ್ರ ಶಿವನನ್ನು ಸ್ಥಾಪಿಸಿದರು. ಅವರ ಸಂದೇಶಗಳು ಸರ್ವಕಾಲಿಕ. ಅನಕ್ಷರಸ್ತರ ನಾಡೆಂದು ಕರೆಯುತ್ತಿದ್ದ ಕೇರಳವನ್ನು ಶೇ.100 ರಷ್ಟು ಸಾಕ್ಷರತೆ ದಾರಿ ತೋರಿದ್ದರೆ ಅದರ ಕೀರ್ತಿ ನಾರಾಯಣಗುರುಗಳಿಗೆ ಸಲ್ಲುತ್ತದೆ ಎಂದರು.

ರಾಜ್ಯದ 8 ಜಿಲ್ಲೆಗಳಲ್ಲಿ ಬಹುಸಂಖ್ಯಾತರಾದ ಸಮುದಾಯ ಇಂದಿಗೂ ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿದೆ. ದೊಡ್ಡ ಸಮುದಾಯಗಳು ಶಿಕ್ಷಣ ಸಂಸ್ಥೆ ಆರಂಭಿಸಿ ಶತಮಾನೋತ್ಸವ ಕಳೆಯುತ್ತಿದ್ದರು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲು ಸಾಧ್ಯವಾಗಿಲ್ಲ. ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪನೆಯಾಗಿದ್ದು ನಿಗಮಕ್ಕೆ ಅನುದಾನ ಇಂದಿಗೂ ಸಿಗಲಿಲ್ಲ. ಸಂಘಟಿತರಾಗಿ ಸಮುದಾಯ ಬೆಳೆಸುವ ಕೆಲಸ ಮಾಡಬೇಕು ಎಂದು ಕಾರ್ಕಳ ಶಾಸಕ ವಿ.ಸುನೀಲ್‌ ಕುಮಾರ್‌ ಹೇಳಿದರು.

ಸಮಾಜದಲ್ಲಿ ನೊಂದವರ ಧ್ವನಿಯಾಗಿ ಕೆಲಸ ಮಾಡಬೇಕು. ಬೆಳವಣಿಗೆ ಆರಂಭದಲ್ಲಿ ಸಮಾಜ ವ್ಯಕ್ತಿಯನ್ನು ಅನುಮಾನಿಸುತ್ತದೆ. ಬೆಳೆದು ನಿಂತ ನಂತರ ಅಪಮಾನಿಸುತ್ತದೆ. ಅನುಮಾನ, ಅಪಮಾನ ಸಹಿಸಿಕೊಂಡು ಯಶಸ್ವಿಯಾದರೆ ಅದೇ ಸಮಾಜ ಸನ್ಮಾನಿಸುತ್ತದೆ. ಟೀಕೆಗಳಿಗೆ ಉತ್ತರಗಳನ್ನು ಕೆಲಸದ ಮೂಲಕ ಕೊಡಬೇಕು. ಸಮರ್ಪಣ ಭಾವದಿಂದ ಸಂಘ ಕಟ್ಟಿದವರನ್ನು ಅಪಮಾನ ಮಾಡುವ ಕೆಲಸ ಮಾಡಬಾರದು. ಗೊಂದಲ ಮಾಡದೆ ಅವರೊಂದಿಗೆ ಕೈಜೋಡಿಸಬೇಕು ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ್‌ ಪೂಜಾರಿ ಹೇಳಿದರು.

ಹೆಚ್ಚು ಜನಸಂಖ್ಯೆ ಹೊಂದಿರುವವರು ಶೋಷಿತ ಸಮುದಾಯವನ್ನು ತುಳಿಯುವ ಪ್ರಯತ್ನ ಮಾಡಬಾರದು. ಎಲ್ಲರನ್ನು ಒಂದೇ ರೀತಿಯಲ್ಲಿ ನಡೆಸಿಕೊಳ್ಳುವ ಪ್ರಯತ್ನ ಆಗಬೇಕು. ಸಮುದಾಯಕ್ಕೆ ಅನ್ಯಾಯ ನಡೆದರೆ ಅದನ್ನು ಖಂಡಿಸುವ ತಾಕತ್ತು, ಶಕ್ತಿ ಸಮಾಜ ಬಾಂಧವರಲ್ಲಿ ಬೆಳೆಯಬೇಕು. ಅಭಿವೃದ್ಧಿ ನಿಗಮಕ್ಕೆ ₹100 ಕೋಟಿ ಇಟ್ಟೆ ಇಡುತ್ತೇವೆ. ಶಿಕ್ಷಣ ಕೊಟ್ಟು ಭವಿಷ್ಯದ ಮಕ್ಕಳನ್ನು ಯುಪಿಎಸ್ಸಿ, ಡಾಕ್ಟರ್ ಹುದ್ದೆಗೇರಿಸಲು ಮುಂದಾಗಬೇಕು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ಅಶೋಕಮೂರ್ತಿ ಅಧ್ಯಕ್ಷತೆ ವಹಿಸಿದ್ದರು.

ಎಸ್‌ಎನ್‌ಜಿವಿ ರಾಜ್ಯ ಉಪಾಧ್ಯಕ್ಷ ಮುಡುಬ ರಾಘವೇಂದ್ರ ಮಾತನಾಡಿದರು.

ನಿಟ್ಟೂರು ಬ್ರಹ್ಮಶ್ರೀ ನಾರಾಯಣಗುರು ಮಹಾಸಂಸ್ಥಾನ ಮಠದ ರೇಣುಕಾನಂದ ಸ್ವಾಮೀಜಿ, ಸಾರಗನಜಡ್ಡು ಶ್ರೀ ಕಾರ್ತಿಕೇಯ ಪೀಠದ ಯೋಗೇಂದ್ರ ಅವಧೂತರು, ಕುದ್ರೊಳ್ಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್‌, ಎಸ್‌ಜಿವಿ ರಾಜ್ಯಾಧ್ಯಕ್ಷ ಸತ್ಯಜಿತ್‌ ಸುರತ್ಕಲ್‌ ಇದ್ದರು.

....ಬಾಕ್ಸ್ ...

ಶರಾವತಿ ಸಂತ್ರಸ್ತರಿಗೆ ಹಕ್ಕುಪತ್ರ ವಿತರಣೆ:ಸಚಿವ

ಶರಾವತಿ ಭೂ ಸಂತ್ರಸ್ತರ ಭೂ ಹಕ್ಕು ಸಂಬಂಧ ಇನ್ನೆರಡು ವಾರದಲ್ಲಿ ಕ್ಯಾಬಿನೆಟ್‌ ಸಭೆ ನಡೆಯಲಿದೆ. ಸಭೆಯಲ್ಲಿ ಸಂತ್ರಸ್ತರ ಹಕ್ಕುಗಳನ್ನು ಮಂಡಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ. ರಾಜ್ಯ ಸರ್ಕಾರದ ವರದಿ ಆಧರಿಸಿ ಕೇಂದ್ರ ಸರ್ಕಾರ ಅಂತಿಮ ಮಂಜೂರಾತಿಗೆ ಸಹಿ ಹಾಕಲಿದೆ. ಒಂದೂವರೆ ವರ್ಷದಲ್ಲಿ ಶರಾವತಿ ಭೂ ಸಂತ್ರಸ್ತರಿಗೆ ಹಕ್ಕುಪತ್ರ ನೀಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.ಪೋಟೋ: 24ಟಿಟಿಎಚ್‌01

ತೀರ್ಥಹಳ್ಳಿ ಸಂಸ್ಕೃತಿ ಮಂದಿರ ಆವರಣದಲ್ಲಿ ನಡೆದ 172ನೇ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಹಾಗೂ ಸಮಾಜ ಬಾಂಧವರ ಬೃಹತ್‌ ಸಮಾವೇಶವನ್ನು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆಯ ಸಿಂಚನ ನಡುವೆಯೂ ಧಮ್ಮ ನಡಿಗೆ
ಪರೀಕ್ಷೆ ನಕಲು: ನಿರ್ದೇಶಕರ ಅಮಾನತಿಗೆ ಒತ್ತಾಯ