ಗಾಳಿಯಂತ್ರ ಸಾಗಾಟಕ್ಕಾಗಿ ರಸ್ತೆ ಕಿತ್ತುಹಾಕಿದ ಕಂಪನಿ!

KannadaprabhaNewsNetwork |  
Published : Jan 03, 2026, 02:15 AM IST
ಕಂಪನಿಯಿಂದ ಹಾನಿಗೊಳಗಾದ ರಸ್ತೆಯಲ್ಲಿ ಕಬ್ಬಿಣ ಗ್ರಿಲ್ ಇಟ್ಟಿರುವುದು.  | Kannada Prabha

ಸಾರಾಂಶ

ರಸ್ತೆ ವಿಭಜಕ, ರಸ್ತೆಯ ಪಕ್ಕದಲ್ಲಿ ಜಾನುವಾರುಗಳು ಅಡ್ಡ ಬರದಂತೆ ಅಳವಡಿಸಿರುವ ಬೆಲೆಬಾಳುವ ಕಬ್ಬಿಣದ ಗ್ರಿಲ್, ಅದರ ಪಕ್ಕಕ್ಕೆ ಪಾದಚಾರಿಗಳಿಗಾಗಿ ನಿರ್ಮಿಸಿದ್ದ ಫುಟ್‌ಪಾತ್ ಎಲ್ಲವನ್ನೂ ಬೇಕಾಬಿಟ್ಟಿಯಾಗಿ ಕಿತ್ತು ಹಾಕಲಾಗಿದೆ.

ಶಿವಕುಮಾರ ಕುಷ್ಟಗಿ

ಗದಗ: ಜಿಲ್ಲೆಯಲ್ಲಿ ಗಾಳಿ ವಿದ್ಯುತ್ ಉತ್ಪಾದನಾ ಕಂಪನಿಗಳ ದಬ್ಬಾಳಿಕೆ, ಗೂಂಡಾ ವರ್ತನೆಗೆ ಗ್ರಾಮೀಣ ಭಾಗದ ರೈತಾಪಿ ವರ್ಗ ತತ್ತರಿಸಿದ್ದು, ರಸ್ತೆಗಳೆಲ್ಲ ಹಾಳಾಗಿ ಹೊಲಗಳಿಗೆ ತೆರಳಲು ಸಾಧ್ಯವಾಗದಂತಾಗಿದೆ.

ಇದೀಗ ಗದಗ ನಗರದಲ್ಲಿಯೂ ಕಂಪನಿಗಳು ಅಟ್ಟಹಾಸ ಮುಂದುವರಿದ್ದು, ಯಾವುದೇ ಅನುಮತಿ ಪಡೆಯದೇ ಸರ್ಕಾರಿ ರಸ್ತೆಯನ್ನೇ ಬೇಕಾಬಿಟ್ಟಿಯಾಗಿ ಕಿತ್ತು ಹಾಕಿರುವುದು ಬೆಳಕಿಗೆ ಬಂದಿದೆ. ಗದಗ ನಗರದಿಂದ ಲಕ್ಷ್ಮೇಶ್ವರ ಮಾರ್ಗವಾಗಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಫ್ಲೈಒವರ್‌ದಿಂದ ಕೂಗಳತೆಯ ದೂರದಲ್ಲಿಯೇ ಗಾಳಿಯಿಂದ ವಿದ್ಯುತ್ ಉತ್ಪಾದನೆ ಮಾಡುವ ಟರ್ಬೈನ್‌ನ ಬೃಹತ್ ರೆಕ್ಕೆಗಳನ್ನು ಸಾಗಾಟ ಮಾಡುವುದಕ್ಕಾಗಿ ರಸ್ತೆ ವಿಭಜಕ, ರಸ್ತೆಯ ಪಕ್ಕದಲ್ಲಿ ಜಾನುವಾರುಗಳು ಅಡ್ಡ ಬರದಂತೆ ಅಳವಡಿಸಿರುವ ಬೆಲೆಬಾಳುವ ಕಬ್ಬಿಣದ ಗ್ರಿಲ್, ಅದರ ಪಕ್ಕಕ್ಕೆ ಪಾದಚಾರಿಗಳಿಗಾಗಿ ನಿರ್ಮಿಸಿದ್ದ ಫುಟ್‌ಪಾತ್ ಎಲ್ಲವನ್ನೂ ಬೇಕಾಬಿಟ್ಟಿಯಾಗಿ ಕಿತ್ತು ಹಾಕಲಾಗಿದೆ.

ಎರಡು ಬದಿಗಳಲ್ಲಿ ಹಾನಿ: ಬೃಹತ್ ಗಾತ್ರದ ಯಂತ್ರಗಳನ್ನು ಸಾಗಾಟ ಮಾಡುವುದಕ್ಕಾಗಿ ಲಕ್ಷ್ಮೇಶ್ವರದಿಂದ ಗದಗ ನಗರಕ್ಕೆ ಬರುವ ರಸ್ತೆಯ ಎಡಬದಿಯಲ್ಲಿ 100 ಮೀಟರ್ ಅಲ್ಲಿಂದ ಮುಂದೆ ಹೋಗಿ, ಲಕ್ಷ್ಮೇಶ್ವರ ಕಡೆಯಿಂದ ಬರುವ ವಾಹನಗಳ ಎಡಕ್ಕೆ ತಿರುಗಿ ರಾಷ್ಟ್ರೀಯ ಹೆದ್ದಾರಿ ಪ್ರವೇಶಿಸಲು ಕಲ್ಪಿಸುವ ಸರ್ವೀಸ್ ರಸ್ತೆಯಲ್ಲಿ 100 ಮೀಟರ್‌ನಷ್ಟು ರಾಜ್ಯ ಹೆದ್ದಾರಿಯನ್ನೇ ಸಂಪೂರ್ಣ ಕಿತ್ತು ಹಾಕಿದ್ದಾರೆ. ಅದು ಸಾಲದೆಂಬಂತೆ ಪಕ್ಕದಲ್ಲಿಯೇ ಪೆಟ್ರೋಲ್ ಬಂಕ್ ಹಿಂದಿನ ಜಮೀನಿಗೂ ವ್ಯಾಪಕ ಪ್ರಮಾಣದಲ್ಲಿ ಹಾನಿಯುಂಟು ಮಾಡಿದ್ದಾರೆ. ಮಾಹಿತಿ ನೀಡಿಲ್ಲ: ಪ್ರಸ್ತುತ ರಾಜ್ಯದಲ್ಲಿ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚದೇ ಇರುವುದರಿಂದಾಗಿ ಸಾಕಷ್ಟು ಸಮಸ್ಯೆಯಾಗುತ್ತಿದೆ. ಇದಕ್ಕೆ ಸರ್ಕಾರ ಅನುದಾನವನ್ನು ನೀಡುತ್ತಿಲ್ಲ ಎನ್ನುವ ಗಂಭೀರ ಆರೋಪಗಳ ಮಧ್ಯೆ ನಿರ್ಮಾಣವಾಗಿ ಕೇವಲ ಒಂದು ವರ್ಷ ಕಳೆಯುವುದರ ಒಳಗಾಗಿಯೇ ಉತ್ತಮ ರಸ್ತೆಯನ್ನು ಕಂಪನಿ ಒಡೆದು ಹಾಕಿದೆ. ಈ ಬಗ್ಗೆ ಯಾರಿಗೂ ಸೂಕ್ತ ಮಾಹಿತಿಯನ್ನೂ ನೀಡಿಲ್ಲ. ಇದಕ್ಕಾಗಿ ಯಾವುದೇ ಪೂರ್ವಾನುಮತಿಯನ್ನು ಪಡೆದಿಲ್ಲ ಎನ್ನುವುದನ್ನು ಸಂಬಂಧಿಸಿದ ಎಲ್ಲ ಅಧಿಕಾರಿಗಳು ಒಪ್ಪಿಕೊಳ್ಳುತ್ತಾರೆ. ನವೀಕರಿಸಬಹುದಾದ ಇಂಧನ ಇಲಾಖೆಯ ಅಡಿಯಲ್ಲಿ ಸ್ಥಾಪನೆಯಾಗುವ ಈ ಗಾಳಿ ವಿದ್ಯುತ್ ಕಂಪನಿಗಳ ಮಾಲೀಕರು ಎಷ್ಟೊಂದು ಪ್ರಭಾವಿಗಳು ಎಂದರೆ, ಅವರು ಎಲ್ಲವನ್ನು ಬೆಂಗಳೂರಿನಲ್ಲಿಯೇ ಕುಳಿತು ನಿರ್ವಹಿಸುತ್ತಾರೆ. ಇದರಲ್ಲಿ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಹೊರತಾಗಿಲ್ಲ. ಈಗಾಗಲೇ ಜಿಲ್ಲೆಯಲ್ಲಿ 280ಕ್ಕೂ ಅಧಿಕ ಗಾಳಿ ಯಂತ್ರಗಳು ಸ್ಥಾಪನೆಯಾಗಿದ್ದು, ಇನ್ನು ನೂರಕ್ಕೂ ಅಧಿಕ ಗಾಳಿಯಂತ್ರಗಳು ಸ್ಥಾಪನೆಯಾಗುವ ಹಂತದಲ್ಲಿವೆ. ಗ್ರಾಮೀಣ ಭಾಗದಲ್ಲಿ ಈಗಾಗಲೇ ಶೇ.75ಕ್ಕೂ ಅಧಿಕ ರಸ್ತೆಗಳು ಈ ಬೃಹತ್ ವಾಹನಗಳ ಓಡಾಟದಿಂದ ಹಾನಿಯಾಗಿದ್ದು, ಅವುಗಳನ್ನು ಕೂಡಲೇ ಹಾನಿ ಮಾಡಿದ ಕಂಪನಿಗಳಿಂದಲೇ ರಿಪೇರಿ ಮಾಡಿಸಬೇಕು ಎಂದು ಜಿಲ್ಲೆಯ ಗುತ್ತಿಗೆದಾರರು ಸರ್ಕಾರಕ್ಕೆ ಮನವಿ ಕೂಡಾ ಮಾಡಿದ್ದಾರೆ.

ಕೆಡಿಪಿ ಸಭೆಯಲ್ಲೂ ಚರ್ಚೆಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರ ನೇತೃತ್ವದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿಯೂ ಈ ಕುರಿತು ಗಂಭೀರ ಚರ್ಚೆಯಾಗಿದ್ದು, ಕಂಪನಿಗಳ ವರ್ತನೆಯ ವಿರುದ್ಧ ಎಲ್ಲ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಗ್ರಾಮೀಣ ರಸ್ತೆಗಳನ್ನು ಹಾಳು ಮಾಡಿದ ಕಂಪನಿಗಳಿಂದಲೇ ದುರಸ್ತಿ ಮಾಡಿಸಬೇಕು ಎಂದು ಠರಾವು ಮಾಡಿ ಸರ್ಕಾರಕ್ಕೆ ಸಲ್ಲಿಸಿ 6 ತಿಂಗಳು ಕಳೆದಿದ್ದರೂ ಯಾವುದೇ ಪ್ರಗತಿಯಾಗಿಲ್ಲ. ಬದಲಾಗಿ ಗದಗ ನಗರದಲ್ಲಿನ ಪ್ರಮುಖ ರಸ್ತೆಯೊಂದು ಹಾಳಾಗಿವೆ. ಅದು ಯಾವ ಕಂಪನಿ ಹಾಳು ಮಾಡಿದೆ ಎನ್ನುವುದು ಕೂಡಾ ಗೊತ್ತಾಗದಂತೆ ನಡೆದುಕೊಂಡಿದ್ದಾರೆ.

ಈ ಸಮಸ್ಯೆ ಗಮನಕ್ಕೆ ಬಂದಿದೆ. ಕಂಪನಿಯುವರು ಮಾಡಿದ ಅಕ್ರಮದ ಬಗ್ಗೆ ಈಗಾಗಲೇ ವಿವರವಾದ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದೇನೆ. ಈ ರಸ್ತೆಯನ್ನು ಕೆಶಿಫ್‌ನವರು ನಿರ್ಮಿಸಿದ್ದು, 7 ವರ್ಷಗಳ ನಿರ್ವಹಣೆ ಇದೆ. ನಮ್ಮ ಇಲಾಖೆಗೆ ಇನ್ನೂ ಹಸ್ತಾಂತರವಾಗಿಲ್ಲ ಎಂದು ಲೋಕೋಪಯೋಗಿ ಇಲಾಖೆಯ ಇಇ ಉಮೇಶ ನಾಯಕ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ