- ಪ್ರತಿ ರೈತರೂ ಬೆಳೆ ವಿಮೆ ಮಾಡಿಸಲು ಸೂಚನೆ । ಹಳ್ಳಿಗಳಲ್ಲಿ ಡಂಗುರ ಸಾರಿ ಜಾಗೃತಿ ಮೂಡಿಸಲು ಕರೆ
ರಾಜ್ಯದ ಎಲ್ಲ ಜಿಲ್ಲೆಗಳ ಮಳೆ ಹಾಗೂ ಬೆಳೆ ಹಾನಿ ವರದಿಗಳ ಪರಿಶೀಲಿಸಿದ ಬಳಿಕ ಆಗಸ್ಟ್ ಕೊನೆಯ ವಾರ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಬರ, ಪರಿಹಾರ ಘೋಷಣೆ ಕುರಿತು ಮುಖ್ಯಮಂತ್ರಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ತಿಳಿಸಿದರು.
ಜಿಲ್ಲೆಯ ಶಹಾಪುರ ತಾಲೂಕಿನ ಮುಡಬೂಳ ಗ್ರಾಮದ ಹೊಲಗಳಿಗೆ ಗುರುವಾರ ಬೆಳಗ್ಗೆ ಭೇಟಿ ನೀಡಿ ಬೆಳೆ ಪರಿಸ್ಥಿತಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮಳೆಯ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದು, ಪ್ರತಿಯೊಬ್ಬ ರೈತರೂ ಕೂಡಲೇ ಬೆಳೆ ವಿಮೆ ಮಾಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಬೆಳೆವಿಮೆ ನೋಂದಣಿಗೆ ಆ.10ರಂದು ಕೊನೆಯ ದಿನವಾಗಿದ್ದು, ಪ್ರತಿ ಗ್ರಾಮದಲ್ಲೂ ಡಂಗುರ ಸಾರಿ ರೈತರಿಗೆ ಮಾಹಿತಿ ನೀಡುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ಪಿಡಿಓಗಳಿಗೆ ಅವರು ಕಟ್ಟುನಿಟ್ಟು ಸೂಚನೆ ನೀಡಿದರು.
ರಸಗೊಬ್ಬರ ವಿತರಣೆಯಲ್ಲಿ ಅಕ್ರಮಗಳ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಟೋಕನ್ ವ್ಯವಸ್ಥೆಯ ಮೂಲಕವೇ ರಸಗೊಬ್ಬರ ವಿತರಣೆ ಆಗುವಂತೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು. ಡ್ಯಾಂಗಳು ಭರ್ತಿಯಾಗಿದ್ದು, ಕಾಲುವೆಗಳಿಗೆ ನೀರು ಹರಿಸಲಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಬಹಳ ಪ್ರಮಾಣದಲ್ಲಿ ಬೆಳೆಗಳಿಗೆ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
====ಬಾಕ್ಸ್====
ಶಹಾಪುರ ತಾಲೂಕಿನಲ್ಲಿ ಸಮರ್ಪಕ ಮಳೆಯಾಗದ ಪರಿಣಾಮ ಹತ್ತಿ, ತೊಗರಿ ಸಹಿತ ಮುಂಗಾರು ಬೆಳೆಗಳು ತೇವಾಂಶದ ಕೊರತೆಯಿಂದ ಬಾಡುತ್ತಿವೆ. ಹೀಗಾಗಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರಿಗೆ ಮುಡಬೂಳ ಗ್ರಾಮದ ರಾಜ್ಯ ಕೃಷಿ ಪ್ರಶಸ್ತಿ ಪುರಸ್ಕೃತ ರೈತ ಅಶೋಕ ಮಲ್ಲಾಬಾದಿ ಮನವಿ ಸಲ್ಲಿಸಿದರು. ರೈತರು ಎಕರೆಗೆ ಸುಮಾರು 25 ಸಾವಿರ ರು.ವೆಚ್ಚ ಮಾಡಿದ್ದರೂ ಬೆಳೆ ಹಾನಿಗೀಡಾಗಿದ್ದು, ಪ್ರತಿ ಎಕರೆಗೆ 50 ಸಾವಿರ ರು.ಪರಿಹಾರ ನೀಡಬೇಕು. ಜತೆಗೆ ರೈತರ ಕೃಷಿ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
6ವೈಡಿಆರ್2:
----
ಶಹಾಪುರ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರಿಗೆ ಮುಡಬೂಳ ಗ್ರಾಮದ ರೈತ ಅಶೋಕ ಮಲ್ಲಾಬಾದಿ ಮನವಿ ಸಲ್ಲಿಸಿದರು.