ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ಬಾಂಡ್ರಾವಿ-ಹನುಮಾಪುರ ಬೈಪಾಸ್ ರಸ್ತೆ ಕಾಮಗಾರಿಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಸರಕಾರದ ಮಾರ್ಗಸೂಚಿಯಂತೆ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.ತಾಲೂಕನ ರಾಂಪುರ ಗ್ರಾಪಂ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಬೈಪಾಸ್ ನಿರ್ಮಾಣಕ್ಕಾಗಿ ಭೂಮಿ ಸ್ವಾದಿನಕ್ಕಾಗಿ ನಡೆದ ರೈತರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರದ ಪ್ರಸ್ತುತ ಆದೇಶದಂತೆ ಹೆದ್ದಾರಿ ಬೈಪಾಸ್ ನಿರ್ಮಾಣಕ್ಕೆ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಕಾರ್ಯ ನಡೆಯುತ್ತಿದೆ. ಈ ಭಾಗದ ಜಮೀನಿನ ಮೌಲ್ಯದ ನಾಲ್ಕು ಪಟ್ಟು ಹಣವನ್ನು ಪರಿಹಾರವಾಗಿ ನೀಡಲಾಗುವುದು. ಈ ನೂತನ ರಸ್ತೆ ನಿರ್ಮಾಣದಿಂದ 16.2 ಎಕರೆ ಜಮೀನು ಸ್ವಧೀನವಾಗಲಿದೆ. ಅಂದಾಜು 2 ಕೋಟಿ ರು. ಪರಿಹಾರದ ಅವಶ್ಯಕತೆ ಇದೆ. ಈ ಹಣವು ಜಿಲ್ಲಾ ಉಪ ವಿಭಾಗಾಧಿಕಾರಿ ಖಾತೆಯಲ್ಲಿದ್ದು. ರೈತರು ಸಮ್ಮತಿ ಸೂಚಿಸಿದರೆ ಅವರ ಖಾತೆಗೆ ಜಮೆ ಮಾಡಿ ಆನಂತರ ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಹೇಳಿದರು.ಸಭೆಯಲ್ಲಿ ಕೆಲವು ರೈತರು ಪರಿಹಾರದ ಹಣದ ಪ್ರಮಾಣವು ಕಡಿಮೆ ದೊರೆಯಲಿದ್ದು ಈ ಸಂಬಂಧ ನ್ಯಾಯಾಲಯದ ಮೊರೆ ಹೋಗುವ ಇಂಗಿತ ವಕ್ತಪಡಿಸಿದರು. ಇದಕ್ಕುತ್ತರಿ ಡಿಸಿ ವೆಂಕಟೇಶ್ ಮಾತನಾಡಿ, ನೀವು ನ್ಯಾಯಾಲಯದ ಮೊರೆ ಹೋದಲ್ಲಿ ಈ ಕುರಿತು ಪುನರ್ ಪರಿಶೀಲಿಸುವಂತೆ ಸೂಚನೆ ಬರಲಿದೆ. ಆಗ ಪರಿಹಾರ ಹೆಚ್ಚಿಗೆ ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸುವ ಭರವಸೆ ನೀಡಿದರು.
ಶಾಸಕ ಎನ್.ವೈ.ಗೋಪಾಲಕೃಷ್ಣ ಮಾತನಾಡಿ, ತಾಲೂಕಿಗೆ ಗಣಿಬಾಧಿತ ಪ್ರದೇಶಾಭಿವೃದ್ಧಿಯ ಅನುದಾನವು ಈ ಬಾರಿಯೇ ಮೊದಲು ಹೆಚ್ಚಾಗಿ ಮುಂಜೂರಾಗಿದೆ. ಈ ಭಾಗದಲ್ಲಿನ ಸಂಚಾರ ವ್ಯವಸ್ಥೆಗೆ ಈ ಅನುದಾನವು ಸಹಕಾರಿಯಾಗಲಿದೆ. ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲು ಶೀಘ್ರವೇ ಅನುಮತಿ ನೀಡಬೇಕು ಎಂದು ಹೇಳಿದರು.ಸಭೆಯಲ್ಲಿ ಉಪ ವಿಭಾಗಾಧಿಕಾರಿ ಮಹಮದ್ ಜಿಲಾನಿ, ತಹಸೀಲ್ದಾರ್ ಟಿ.ಜಗದೀಶ್, ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳಾದ ಮೋನಪ್ಪ, ಲಕ್ಷ್ಮಿನಾರಾಯಣ, ಇಲಾಖೆಗಳ ಅಧಿಕಾರಿಗಳು ಹಾಗೂ ರೈತರು ಇದ್ದರು.