ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರಿನಲ್ಲಿ ಉಂಟಾಗುವ ಸಂಚಾರ ದಟ್ಟಣೆ ನಿಯಂತ್ರಿಸಲು ತುಮಕೂರು ರಸ್ತೆಯಿಂದ ಹೊಸೂರು ರಸ್ತವರೆಗೆ ನಗರದ ಹೊರವಲಯದಲ್ಲಿ ವರ್ತುಲ ರಸ್ತೆ ನಿರ್ಮಾಣ ಯೋಜನೆ ರೂಪಿಸಲಾಗಿದೆ. ಯೋಜನೆಗೆ ಸಂಬಂಧಿಸಿದಂತೆ ಮೂರ್ನಾಲ್ಕು ಬಾರಿ ಟೆಂಡರ್ ಪ್ರಕ್ರಿಯೆ ನಡೆಸಲಾಗಿದ್ದರೂ ಯಾವುದೇ ಗುತ್ತಿಗೆದಾರರು ಬಿಡ್ ಸಲ್ಲಿಕೆ ಮಾಡಿರಲಿಲ್ಲ. ಇದೆಲ್ಲದರ ನಡುವೆ ಇದೀಗ ಯೋಜನೆಗೆ ಅಗತ್ಯವಿರುವ 948.14 ಎಕರೆ ಭೂಮಿಯನ್ನು ವಶಕ್ಕೆ ಪಡೆಯಲು ಸರ್ಕಾರ ಮುಂದಾಗಿದೆ. ಅದಕ್ಕಾಗಿ ಕಳೆದ ಅ.17ರಂದು ಬಿಡಿಎ ಹೊರಡಿಸಿದ್ದ ಆದೇಶದಂತೆ ಭೂ ಮಾಲೀಕರಿಗೆ ಪರಿಹಾರ ನೀಡುವ ಕುರಿತು ಶುಕ್ರವಾರ ನಡೆಯುವ ಸಚಿವ ಸಂಪುಟದಲ್ಲಿ ಸಭೆಯಲ್ಲಿ ಅನುಮೋದನೆ ನೀಡುವ ಸಾಧ್ಯತೆಗಳಿವೆ.
ಉಪನಗರ ಸಾರಿಗೆ ವೆಚ್ಚ ಹೆಚ್ಚಳ:ಬೆಂಗಳೂರು ಉಪನಗರ ಸಾರಿಗೆ ಯೋಜನೆಯ ಅಂದಾಜು ವೆಚ್ಚ ಹೆಚ್ಚಳಕ್ಕೂ ಸಚಿವ ಸಂಪುಟ ಒಪ್ಪಿಗೆ ನೀಡುವ ಸಾಧ್ಯತೆಗಳಿವೆ. ಬೆಂಗಳೂರು ಉಪನಗರ ಸಾರಿಗೆ ಯೋಜನೆಯ 2 ಮತ್ತು 4ನೇ ಕಾರಿಡಾರ್‌ಗೆ ಈ ಹಿಂದೆ ಅಂದಾಜು 15 ಸಾವಿರ ಕೋಟಿ ರು. ವೆಚ್ಚ ನಿಗದಿ ಮಾಡಲಾಗಿತ್ತು. ಇದೀಗ ಅಂದಾಜು ವೆಚ್ಚವನ್ನು 16,879 ಕೋಟಿ ರು.ಗೆ ಹೆಚ್ಚಿಸಲಾಗುತ್ತಿದೆ.
ಕಾಂಗ್ರೆಸ್ ಭವನಕ್ಕೆ ನಿವೇಶನ:ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಪ್ರಾಧಿಕಾರ ಅನುಮೋದನೆ ನೀಡಿರುವ ದೇವನಹಳ್ಳಿ ತಾಲೂಕಿನ ಗುಟ್ಟಹಳ್ಳಿ ಮತ್ತು ದೇವನಹಳ್ಳಿ ಗ್ರಾಮದಲ್ಲಿನ ವಸತಿ ಬಡಾವಣೆಯಲ್ಲಿ 3,300.16 ಚದರ ಮೀ. ವಿಸ್ತೀರ್ಣದ ಸಿಎ ನಿವೇಶನವನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ 30 ವರ್ಷ ಗುತ್ತಿಗೆ ಆಧಾರದಲ್ಲಿ ನೀಡುವ ವಿಚಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬರುತ್ತಿದೆ. ಅದರ ಜತೆಗೆ ರಾಜ್ಯ ಇನ್ನಿತರ 6 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸಿಎ ನಿವೇಶನಗಳನ್ನು ಬ್ಲಾಕ್ ಕಾಂಗ್ರೆಸ್ ಕಚೇರಿ ಕಟ್ಟಡ ನಿರ್ಮಾಣಕ್ಕಾಗಿ ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಗುತ್ತಿಗೆ ಆಧಾರದಲ್ಲಿ ನೀಡಲು ಅನುಮೋದನೆ ನೀಡುವ ನಿರೀಕ್ಷೆಯಿದೆ.
ಬಸವಣ್ಣ ಜೀವ ವೈವಿಧ್ಯಉದ್ಯಾನಕ್ಕೆ ₹50 ಕೋಟಿ
ಬೆಂಗಳೂರು ಯಲಹಂಕ ಬಳಿಯ ಮಾದಪ್ಪನಹಳ್ಳಿಯಲ್ಲಿ 153.39 ಎಕರೆ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ವಿಶ್ವ ಗುರು ಬಸವಣ್ಣ ಜೀವ ವೈವಿಧ್ಯ ಬೃಹತ್ ಉದ್ಯಾನ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಈ ಬೃಹತ್ ಉದ್ಯಾನ ನಿರ್ಮಾಣಕ್ಕೆ 50.29 ಕೋಟಿ ರು. ವೆಚ್ಚವಾಗಲಿದ್ದು, ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸುವ ಸಾಧ್ಯತೆಗಳಿವೆ. ರಾಜೀವ್‌ಗಾಂಧಿ ಎದೆರೋಗ ಆಸ್ಪತ್ರೆ ಆವರಣದ 10 ಎಕರೆ ಭೂಮಿಯಲ್ಲಿ ಅಜೀಂ ಪ್ರೇಂಜಿ ಫೌಂಡೇಷನ್ ಮೂಲಕ ಸೂಪರ್ ಸ್ಪೆಷಾಲಿಟಿ ಟರ್ಷಿಯರಿ ಆರೈಕೆ ಆಸ್ಪತ್ರೆ ನಿರ್ಮಾಣ ಮತ್ತು 99 ವರ್ಷಗಳ ನಿರ್ವಹಣೆ ಅವಧಿಗೆ ಗುತ್ತಿಗೆ ನೀಡುವ ವಿಚಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿದೆ. ಕಿದ್ವಾಯಿ ಸ್ಮಾರಕ ಗಂಧಿ ಸಂಸ್ಥೆಗೆ 24.61 ಕೋಟಿ ರು. ವೆಚ್ಚದಲ್ಲಿ ಟೆಸ್ಲಾ ಎಂಆರ್‌ಐ ಮತ್ತು ಸ್ಲೈಸ್ ಸಿಟಿ ಸ್ಕ್ಯಾನ್ ಯಂತ್ರ ಖರೀದಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲೂಕುಗಳ 97 ಸರ್ಕಾರಿ ಶಾಲೆ ಮತ್ತು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ 16 ಸರ್ಕಾರಿ ಶಾಲೆಗಳನ್ನು ಇನ್ಫೋಸಿಸ್ ಸಂಸ್ಥೆಯು ಸಿಎಸ್‌ಆರ್ ಅಡಿಯಲ್ಲಿ 685.57 ಕೋಟಿ ರು. ವೆಚ್ಚ ಮಾಡಿ ಕರ್ನಾಟಕ ಪಬ್ಲಿಕ್ ಶಾಲೆಯನ್ನಾಗಿ ಉನ್ನತೀಕರಿಸುವ ವಿಷಯಗಳು ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿವೆ.