ಮುಖ್ಯರಸ್ತೆ ಭೂಸ್ವಾಧೀನಕ್ಕೂ ಮುನ್ನ ಸಂತ್ರಸ್ತರಿಗೆ ಪರಿಹಾರ

KannadaprabhaNewsNetwork |  
Published : Jan 17, 2026, 03:30 AM IST
ಒಟ್ಟು ರು. 6.10 ಲಕ್ಷ ಪರಿಹಾರದ ಮೊತ್ತವನ್ನು ಪಡೆದುಕೊಳ್ಳುತ್ತಿರುವ ಮುಖ್ಯರಸ್ತೆಯಲ್ಲಿನ ಮಾಲೀಕರಾದ ರಾಮಣ್ಣ ಕೋಡಿಹಳ್ಳಿ. | Kannada Prabha

ಸಾರಾಂಶ

ಮುಖ್ಯ ರಸ್ತೆ ಅಗಲೀಕರಣದಲ್ಲಿ ಭೂಸ್ವಾಧೀನಪಡಿಸಿಕೊಂಡ ಸಂತ್ರಸ್ತರಿಗೆ ಚೆಕ್ ಮೂಲಕ ಪರಿಹಾರದ ಮೊತ್ತವನ್ನು ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಸಕ ಬಸವರಾಜ ಶಿವಣ್ಣನವರ ವಿತರಿಸಿದರು.

ಬ್ಯಾಡಗಿ: ಮುಖ್ಯ ರಸ್ತೆ ಅಗಲೀಕರಣದಲ್ಲಿ ಭೂಸ್ವಾಧೀನಪಡಿಸಿಕೊಂಡ ಸಂತ್ರಸ್ತರಿಗೆ ಚೆಕ್ ಮೂಲಕ ಪರಿಹಾರದ ಮೊತ್ತವನ್ನು ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಸಕ ಬಸವರಾಜ ಶಿವಣ್ಣನವರ ವಿತರಿಸಿದರು.

ನಿಗದಿಪಡಿಸಿದಂತೆ 66 ಅಡಿಗಳಷ್ಟು ಅಗಲದ ಮುಖ್ಯರಸ್ತೆ ನಿರ್ಮಾಣಕ್ಕೆ ನಿವೇಶನ ಹಾಗೂ ಕಟ್ಟಡಗಳ ಸ್ವಾಧೀನಕ್ಕೂ ಮುನ್ನ ಪರಿಹಾರದ ಹಣ ವಿತರಿಸಿದ್ದು ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಎನ್ನಲಾಗುತ್ತಿದ್ದು, ಇಂತಹದ್ದೊಂದು ಐತಿಹಾಸಿಕ ಕ್ಷಣಕ್ಕೆ ಇಂದಿನ ಸಭೆ ಸಾಕ್ಷಿಯಾಯಿತು.

100ಕ್ಕೂ ಅಧಿಕ ಜನರು ಒಪ್ಪಿಗೆ: ಯಾವುದೇ ತಕರಾರಿಲ್ಲದೇ ಪರಿಹಾರದ ಮೊತ್ತವನ್ನು ಪಡೆದುಕೊಳ್ಳಲು ನೂರಕ್ಕೂ ಹೆಚ್ಚು ಜನರು ಸಮ್ಮತಿ ಸೂಚಿಸಿದ್ದು ಭೂಮಿ ಹಾಗೂ ಕಟ್ಟಡಗಳ ನಿರ್ಮಾಣಕ್ಕೆ ವಿವಿಧ ದಾಖಲೆಗಳನ್ನು ಉಪವಿಭಾಗಾಧಿಕಾರಿಗಳಿಗೆ ಸಲ್ಲಿಸಿದರು, 100ಕ್ಕೂ ಅಧಿಕ ಜನರು ಪರಿಹಾರ ಮೊತ್ತವನ್ನು ಪಡೆದುಕೊಳ್ಳಲು ಸೂಚನೆ ನೀಡಿದ್ದಾರೆ.

ಪರಿಹಾರದ ಚೆಕ್ ವಿತರಿಸಿ ಮಾತನಾಡಿದ ಶಾಸಕ ಬಸವರಾಜ ಶಿವಣ್ಣನವರ, ಮುಖ್ಯರಸ್ತೆಯಲ್ಲಿನ ಮಾಲೀಕರ ಸಹಕಾರವಿಲ್ಲದೇ ಅಗಲೀಕರಣ ಸಾಧ್ಯವಿಲ್ಲ ಅದಾಗ್ಯೂ ಕಳೆದ ಜೂನ್‌ ತಿಂಗಳಲ್ಲಿ ನಡೆದ ಪ್ರತಿಭಟನೆ ವೇಳೆ ತಮ್ಮೆಲ್ಲರ ಒಪ್ಪಿಗೆಯನ್ನು ಪಡೆದುಕೊಂಡೇ ಪ್ರತಿಭಟನೆ ಹಿಂದಕ್ಕೆ ಪಡೆದುಕೊಂಡಿದ್ದಲ್ಲದೇ ಅಗಲೀಕರಣದ ಕೆಲಸಕ್ಕೆ ಹೆಜ್ಜೆಯನ್ನು ಇಡಲಾಗಿತ್ತು, ಇದೀಗ ಪರಿಹಾರದ ಮೊತ್ತ ನೀಡುವ ಹಂತಕ್ಕೆ ಬಂದಿದ್ದರೂ ಸಹ ಮುಖ್ಯರಸ್ತೆಯಲ್ಲಿನ ಕೆಲ ಮಾಲೀಕರು ಕೋರ್ಟ್‌ ಮೆಟ್ಟಿಲನ್ನು ಏರಿದ್ದು ತಾಲೂಕಿನ ಸಾರ್ವಜನಿಕರ ಮಟ್ಟಿಗೆ ಅತ್ಯಂತ ನೋವಿನ ಸಂಗತಿ ಎಂದರು.

ಸುಳ್ಳು ವದಂತಿ ನಂಬಬೇಡಿ: ಮುಖ್ಯರಸ್ತೆ ಅಗಲೀಕರಣದ ದಾರಿಯನ್ನು ತಪ್ಪಿಸುವ ಕೆಲವರು ಕೋರ್ಟ್‌ ಸೇರಿದಂತೆ ಸಾರ್ವಜನಿಕರಲ್ಲಿ ತಪ್ಪು ಸಂದೇಶವನ್ನು ನೀಡುತ್ತಿದ್ದಾರೆ, ಪರಿಹಾರದ ಮೊತ್ತ ನೀಡಲು ಹಣದ ಕೊರತೆ ಇಲ್ಲ ಹಾಗೇ ಅಭಿವೃದ್ಧಿಗೂ ಅನುದಾನ ಮೀಸಲಿಟ್ಟಿದ್ದೇವೆ. 20 ಅಡಿಗಳಷ್ಟು ಸೆಟ್ ಬ್ಯಾಕ್ ಬಿಡಲೇಬೇಕೆಂಬ ಸುಳ್ಳು ವದಂತಿ ಹಬ್ಬಿಸುತ್ತಿದ್ದು ಮುಖ್ಯರಸ್ತೆಯಲ್ಲಿನ ಮಾಲೀಕರ ದಾರಿ ತಪ್ಪಿಸುವ ಕೆಲಸ ನಡೆದಿದೆ, ಯಾವುದೇ ಕಾರಣಕ್ಕೂ ಸರ್ಕಾರ ನಿಗದಿಪಡಿಸಿದ 66 ಅಡಿಗಳಷ್ಟು ಹೊರತುಪಡಿಸಿ ಇನ್ನಿತರ ಜಾಗಕ್ಕೆ ಕೈಹಾಕುವುದಿಲ್ಲ ನಮ್ಮ ಮೇಲೆ ವಿಶ್ವಾಸವಿಡುವಂತೆ ಮನವಿ ಮಾಡಿದರು.

ಸಹಕಾರಕ್ಕೆ ಧನ್ಯವಾದಗಳು: ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ಅಂತಾರಾಷ್ಟ್ರೀಯ ಮಾರುಕಟ್ಟೆ ಹೊಂದಿರುವ ಬ್ಯಾಡಗಿ ಪಟ್ಟಣಕ್ಕೆ ಮುಖ್ಯರಸ್ತೆ ಎಷ್ಟು ಮುಖ್ಯ ಎಂಬುದು ಎಲ್ಲರಿಗೂ ಈಗಾಗಲೇ ಅರಿವಾಗಿದೆ, ಮುಖ್ಯರಸ್ತೆಯಲ್ಲಿನ ಸಾಕಷ್ಟು ಜನ ಸಮಸ್ಯೆಯನ್ನು ಅರಿತು ತಾವೇ ಪರಿಹಾರ ಪಡೆಯಲು ಮುಂದೆ ಬಂದಿರುವುದು ಸಂತೋಷದ ವಿಚಾರ, ಅಗಲೀಕರಣ ಬೇಡ ಎಂದವರ ಬೇಡಿಕೆ ಈಡೇರಿಸಲು ನಾವೆಲ್ಲಾ ಬೇಷರತ್ ಒಪ್ಪಿಗೆ ನೀಡಿ ಸಹಕರಿಸಿದ್ದೇವೆ, ಅಗಲೀಕರಣಕ್ಕೆ ಒಪ್ಪಿಗೆ ಸೂಚಿಸಿ ಪರಿಹಾರ ಮೊತ್ತ ಪಡೆದುಕೊಂಡವರಿಗೆ ಹೃದಯ ಪೂರ್ವಕ ಧನ್ಯವಾದ ಎಂದರು.

ವೇದಿಕೆಯಲ್ಲಿ ಈ ವೇಳೆ ರಾಮಣ್ಣ ಕೋಡಿಹಳ್ಳಿ, ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ, ಹೊನ್ನೂರಪ್ಪ ಕಾಡಸಾಲಿ, ಜಯದೇವ ಶಿರೂರ, ಗಂಗಣ್ಣ ಎಲಿ, ರಾಜು ಮೋರಿಗೇರಿ, ದಾನಪ್ಪ ಚೂರಿ, ಬಸವರಾಜ ಸಂಕಣ್ಣನವರ, ಶಿವಯೋಗಿ ಶಿರೂರ, ಮುನಾಫ್ ಎರೆಶೀಮಿ, ಈರಣ್ಣ ಬಣಕಾರ, ದುರ್ಗೆಶ ಗೋಣೆಮ್ಮನವರ, ಸಿಪಿಐ ಚಿಕ್ಕಣ್ಣನವರ, ಪಿಎಸ್ಐ ಭಾರತಿ ಕುರಿ ಸೇರಿದಂತೆ ಇನ್ನಿತರರಿದ್ದರು.

ಎಪಿಎಂಸಿಯಿಂದ ₹ 10 ಕೋಟಿ: ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲರು ಪಟ್ಟಣದ ಎಪಿಎಂಸಿಯಲ್ಲಿನ ರು. 10 ಕೋಟಿಯನ್ನು ಮುಖ್ಯರಸ್ತೆ ಅಗಲೀಕರಣಕ್ಕೆ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ನೀಡುವುದಾಗಿ ತಿಳಿಸಿದ್ದಾರೆ ಹಾಗೂ ಪಟ್ಟಣಕ್ಕೊಂದು ವರ್ತುಲ ರಸ್ತೆಯನ್ನು (ರಿಂಗ್ ರೋಡ್‌) ಸಹ ಮಾಡಿಯೇ ತೀರುತ್ತೇನೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು. ಮೂರು ದಿನಗಳ ಕಾಲ ನಮ್ಮ ಸಿಬ್ಬಂದಿ ಪುರಸಭೆಯಲ್ಲಿ ಉಪಸ್ಥಿತರಿದ್ದು, ದಾಖಲೆಗಳ ಪರಿಶೀಲನೆ ಹಾಗೂ ಪರಿಹಾರ ವಿತರಣೆ ಕಾರ್ಯ ನಡೆಯಲಿದೆ. ಸೂಕ್ತ ದಾಖಲೆಗಳನ್ನು ನೀಡಿ ನಿಯಮಾನುಸಾರ ಪರಿಹಾರದ ಮೊತ್ತ ಪಡೆದುಕೊಳ್ಳಬಹುದಾಗಿದ್ದು, ಒಂದೇ ದಿನದಲ್ಲಿ ರು. 1 ಕೋಟಿಗೂ ಅಧಿಕ ಪರಿಹಾರ ವಿತರಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾಮಿ ವಿವೇಕಾನಂದರ ಆದರ್ಶ ಪಾಲಿಸಿ
ಪಾಟೀಲ ಪುಟ್ಟಪ್ಪ ಕನ್ನಡ ನಾಡು ಕಂಡ ಧೀಮಂತ ಸಾಹಿತಿ