ಯತ್ನಾಳ ಆಕಾಶಕ್ಕೆ ಉಗಿದರೆ ಆತನ ಮುಖಕ್ಕೇ ಬೀಳುತ್ತದೆ ಎಂಬ ಪರಿಜ್ಞಾನ ಇಲ್ಲದ ವ್ಯಕ್ತಿ. ಒಮ್ಮೆ ಆತನ ವಿರುದ್ಧ ಸ್ಪರ್ಧೆ ಮಾಡಿ ಬುದ್ಧಿ ಕಲಿಸುವ ಇಚ್ಛೆ ಇದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ವಿಜಯಪುರ : ಶಾಸಕ ಯತ್ನಾಳ ಆಕಾಶಕ್ಕೆ ಉಗಿದರೆ ಆತನ ಮುಖಕ್ಕೇ ಬೀಳುತ್ತದೆ ಎಂಬ ಪರಿಜ್ಞಾನ ಇಲ್ಲದ ವ್ಯಕ್ತಿ. ಒಮ್ಮೆ ಆತನ ವಿರುದ್ಧ ಸ್ಪರ್ಧೆ ಮಾಡಿ ಬುದ್ಧಿ ಕಲಿಸುವ ಇಚ್ಛೆ ಇದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಜಂಟಿ ಆಕ್ಷನ್ ಕಮಿಟಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ವೇದಿಕೆಯಲ್ಲಿ ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ಅಣ್ಣ ಬಸವಣ್ಣನವರ ಕುರಿತು ಅಪಮಾನಕರ ರೀತಿ ಮಾತನಾಡಿದ್ದ ಹುಚ್ಚು ಮನಸ್ಥಿತಿಯ ಬಸನಗೌಡ ಪಾಟೀಲ ಯತ್ನಾಳ, ಇದೀಗ ಇಸ್ಲಾಂ ಧರ್ಮಿಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತೆ ಪ್ರವಾದಿ ಮಹಮ್ಮದ್ ಪೈಗಂಬರ್ ಕುರಿತು ಅವಮಾನಕರ ರೀತಿಯಲ್ಲಿ ಮಾತನಾಡಿದ್ದಾರೆ. ಪರಿಜ್ಞಾನ ಇಲ್ಲದ ವ್ಯಕ್ತಿ ಎಂದು ಟೀಕಾ ಪ್ರಹಾರ ನಡೆಸಿದರು.
ಯತ್ನಾಳರನ್ನು ಶಾಸಕ, ಸಂಸದ, ಕೇಂದ್ರ ಸಚಿವರನ್ನಾಗಿ ಮಾಡಿದೆ. ದೇವರು ಎಲ್ಲವನ್ನೂ ಕೊಟ್ಟರೂ ಇವರು ಹಾಳು ಮಾಡಿಕೊಂಡಿದ್ದಾರೆ. ಇಂತಹ ವರ್ತನೆಯ ಕಾರಣಕ್ಕೆ ಪಕ್ಷದಿಂದಲೂ ಹೊರ ಹಾಕಿಸಿಕೊಂಡರೂ ಬುದ್ಧಿ ಬಂದಿಲ್ಲ. ಸಮಾಜ ಒಡೆಯುವ ಮನಸ್ಥಿತಿಯ ಹೇಳಿಕೆ ನೀಡುತ್ತಿರುವ ಯತ್ನಾಳಗೆ ಈ ಬೃಹತ್ ಹೋರಾಟದ ಮೂಲಕ ಸ್ಪಷ್ಟ ಎಚ್ಚರಿಕೆ ನೀಡಿದೆ. ಇನ್ನಾದರೂ ಮನುಷ್ಯತ್ವ ಇರಿಸಿಕೊಂಡು ಬದಲಾವಣೆಗೆ ದೇವರು ಬುದ್ದಿ ಕೊಡಲಿ ಎಂದರು.
ಈ ಹೋರಾಟದ ಬಳಿಕವಾದರೂ ಸುಧಾರಣೆ ಆದರೆ ಅವರಿಗೆ ಒಳಿತು ಎಂದು ಯತ್ನಾಳಗೆ ಎಚ್ಚರಕೆ ಕೊಟ್ಟ ಸಚಿವ ಶಿವಾನಂದ ಪಾಟೀಲ, ಯಾವುದೇ ಸಮಾಜದ ಕುರಿತು ಮಾತನಾಡಬಾರದು ಎಂದು ಕಿವಿಮಾತು ಹೇಳಿದರು.
ಭಾರತ ನಮ್ಮ ಮನೆ ನಮ್ಮನ್ನು ಕೆಡಿಸೋಕೆ ಜಾತಿ ವಿಷ ಬೀಜ ಬಿತ್ತುತ್ತಾರೆ, ಇಂಥ ವ್ಯಕ್ತಿಗಳ ಕುರಿತು ಎಚ್ಚರದಿಂದಿರಬೇಕು. ಪೆಹೆಲ್ಗಾಮ್ ಘಟನೆಯನ್ನು ಖಂಡಿಸಿದ ಸಚಿವರು, ಜನರೆಲ್ಲರೂ ದೇಶದ ಪರವಾಗಿದ್ದಾರೆ. ಉಗ್ರರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ನಮ್ಮೆಲ್ಲರ ಬೆಂಬಲ ಇದೆ ಎಂದು ಘೋಷಿಸಿದರು.
ಯತ್ನಾಳ ಗೊಡ್ಡೆಮ್ಮೆ:ವಿಜಯಾನಂದ ವಾಕ್ ಪ್ರಹಾರ
ಶಾಸಕ ಯತ್ನಾಳ ವಿರುದ್ಧ ಏಕವಚನದಲ್ಲಿಯೇ ಪ್ರಹಾರ ನಡೆಸಿದ ಶಾಸಕ ವಿಜಯಾನಂದ ಕಾಶಪ್ಪನವರ, ಗೊಡ್ಡೆಮ್ಮೆ’ಎಂದು ಜರಿಯುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದರು. ಇಲ್ಲಿ ಮುಂದಿನ ಸಾರಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಾಗುವುದು ಶತಃಸಿದ್ಧ. ನನಗೆ ಒಂದೆರೆಡು ತಿಂಗಳು ಇಲ್ಲಿಯೇ ಉಳಿದುಕೊಳ್ಳಲು ಅನುಮತಿ ನೀಡುವಂತೆ ನಾನು ಪಕ್ಷದವರಿಗೆ ಕೋರುತ್ತೇನೆ. ಆತನನ್ನು ಸೋಲಿಸಿ, ಕಾಂಗ್ರೆಸ್ ಅಭ್ಯರ್ಥಿ ಜಯದ ನಂತರವೇ ನಾನು ಊರಿಗೆ ಮರಳುತ್ತೇನೆ ಎಂದು ಹೇಳಿದರು.
ಪ್ರವಾದಿ ಮೊಹ್ಮದ್ ಪೈಗಂಬರ್ ಅವರ ಕಾಲು ಧೂಳಿಗೂ ಯತ್ನಾಳ ಸಮಾನವಲ್ಲ. ಪೈಗಂಬರ್ 1400 ವರ್ಷಗಳ ಹಿಂದೆ ಪ್ರಾಣಿಗಳ ಮೇಲೆ ದಯೆ, ಕರುಣೆ ಇರಬೇಕು ಎಂದು ಹೇಳಿದ್ದಾರೆ. ಯತ್ನಾಳ್ ನರಪಿಳ್ಳೆ. ಯತ್ನಾಳಗೆ ದಯೆ ಇಲ್ಲ. ಧರ್ಮವೂ ಇಲ್ಲದ ಹುಚ್ಚು ನಾಯಿ. ಯತ್ನಾಳ್ ಪೈಗಂಬರ್‌ರ ಕಾಲ ದೂಳು ಆಗಲ್ಲ. ಅಂತಹ ಶ್ರೇಷ್ಠ ವ್ಯಕ್ತಿಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಸರಿಯಲ್ಲ. ಅನೇಕ ರೀತಿಯ ಏಕವಚನ ಪದಗಳನ್ನು ತಮ್ಮ ಭಾಷಣದಲ್ಲಿ ಬಳಸುವ ಮೂಲಕ ಯತ್ನಾಳ ವಿರುದ್ಧ ಹರಿಹಾಯ್ದರು.
ನನ್ನ ಹೆಣವೂ ಕಾಂಗ್ರೆಸ್‌ಗೆ ಹೋಗುವುದಿಲ್ಲ ಎಂದು ಹೇಳಿರುವ ಯತ್ನಾಳರನ್ನು ನಮ್ಮ ಪಕ್ಷಕ್ಕೆ ಕರೆದವರು ಯಾರು? ಏನೇನೋ ತಲೆ ಕೆಟ್ಟವರಂತೆ ಮಾತನಾಡುತ್ತಿದ್ದಾರೆ. ವಿಜಯಪುರದ ಒಬ್ಬ ವ್ಯಕ್ತಿಗೆ ದಯವೂ ಇಲ್ಲ, ಧರ್ಮವೂ ಇಲ್ಲ. ಬಿಜೆಪಿಯಿಂದ ಉಚ್ಚಾಟನೆ ಮಾಡಿದ ಬಳಿಕ ಪೂರಾ ತಲೆ ಕೆಟ್ಟಿದೆ. ಇವ ತಪ್ಪಿ ಬಿಜಾಪುರದಾಗ ಹುಟ್ಟಿದ್ದಾನೆ. ಬಾಳ್ ಠಾಕ್ರೆ ಮನೆಯಲ್ಲಿ ಹುಟ್ಟಬೇಕಿತ್ತು. ನಮಗೆ ನ್ಯಾಯ ಬೇಕು. ನಾವು ಭಾರತೀಯರು. ಈ ದೇಶದ ಸ್ವಾತಂತ್ರ್ಯಕ್ಕಾಗಿ ಮುಸ್ಲಿಂ ಜನಾಂಗ ತ್ಯಾಗ ಮಾಡಿದೆ.
- ವಿಜಯಾನಂದ ಕಾಶಪ್ಪನವರ, ಕಾಂಗ್ರೆಸ್ ಶಾಸಕ