ಕಾಂಗ್ರೆಸ್ಸಿನಲ್ಲಿಯೇ ಸಿಎಂ ಸ್ಥಾನಕ್ಕಾಗಿ ಪೈಪೋಟಿ

KannadaprabhaNewsNetwork | Published : Oct 9, 2024 1:49 AM

ಸಾರಾಂಶ

ಅಲ್ಪಸಂಖ್ಯಾತ ಮತ್ತು ದಲಿತರನ್ನು ಕೇವಲ ಮತ ಬ್ಯಾಂಕ್ ಆಗಿ ಕಾಂಗ್ರೆಸ್ ಪರಿಗಣಿಸುತ್ತಲೇ ಬಂದಿದೆ

ಗದಗ: ಕಾಂಗ್ರೆಸ್ ಪಕ್ಷದಲ್ಲಿಯೇ ಸಿಎಂ ಸ್ಥಾನಕ್ಕಾಗಿ ಪೈಪೋಟಿ ಜೋರಾಗಿ ನಡೆಯುತ್ತಿದೆ, ಹಲವಾರು ನಾಯಕರು ಗೌಪ್ಯ ಸಭೆ ಮಾಡಿ ಸಿಎಂ ಸ್ಥಾನಕ್ಕಾಗಿ ಪ್ರಯತ್ನ ನಡೆಸುತ್ತಿದ್ದಾರೆ ಎನ್ನುವುದು ಜಗಜ್ಜಾಹೀರವಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಲವು ಬಾರಿ ಅಧಿಕಾರಕ್ಕೆ ಬಂದಿದೆ. ಈ ಹಿಂದೆ ದಲಿತ ಮುಖ್ಯಮಂತ್ರಿ ಏಕೆ ಮಾಡಲಿಲ್ಲ? ಈಗ ದಲಿತ ಮುಖ್ಯಮಂತ್ರಿ ಆಗಬೇಕು ಎಂದು ಕಾಂಗ್ರೆಸ್ ನಲ್ಲಿ ಚರ್ಚೆ ಮುನ್ನೆಲೆಗೆ ಬಂದಿದೆ. ಈ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ದಲಿತರು ನೆನಪಿಗೆ ಬರಲಿಲ್ಲವೇ ಎಂದು ಪ್ರಶ್ನಿಸಿದರು.

ಅಲ್ಪಸಂಖ್ಯಾತ ಮತ್ತು ದಲಿತರನ್ನು ಕೇವಲ ಮತ ಬ್ಯಾಂಕ್ ಆಗಿ ಕಾಂಗ್ರೆಸ್ ಪರಿಗಣಿಸುತ್ತಲೇ ಬಂದಿದೆ. ಈಗಲೂ ಅದನ್ನೇ ಮುಂದುವರಿಸಿಕೊಂಡು ಹೋಗುತ್ತಿದೆ. ಮುಡಾ ವಿಷಯದಲ್ಲಿ ನ್ಯಾಯಾಲಯ ಸ್ಪಷ್ಟವಾಗಿ ಆದೇಶಿಸಿದೆ. ಆದರೂ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಿಲ್ಲ. ಸಿದ್ದರಾಮಯ್ಯ ರಾಜೀನಾಮೆ ನೀಡದಿರುವುದು ನ್ಯಾಯಾಲಯಕ್ಕೆ ಮಾಡಿದ ಅಪಮಾನ ಎಂದರು.

ಅ.20 ರಂದು ಬೃಹತ್ ಸಮಾವೇಶ:

ರಾಯಣ್ಣ ಬ್ರಿಗೇಡ್ ಗೆ ಬೇರೆ ಹೆಸರು ಇಡಬೇಕು ಎಂದು ಚರ್ಚೆ ನಡೆದಿದೆ. ಅ.20 ರಂದು ಬೃಹತ್ ಸಮಾವೇಶ ನಡೆಸುವ ಕುರಿತು ಯೋಜನೆ ರೂಪಿಸಲಾಗುತ್ತಿದೆ. ಆ ಮೇಲೆ ಹೊಸ ಹೆಸರು ಘೋಷಣೆ ಮಾಡಲಾಗುವುದು. ಹಿಂದುಳಿದವರಿಗೆ, ದಲಿತರಿಗೆ ಹಿಂದೂ ಸಮಾಜದಲ್ಲಿ ಯಾವ ಸಂಘಟನೆಯ ಬೆಂಬಲವೂ ಸಿಗುತ್ತಿಲ್ಲ, ಹಾಗಾಗಿ ನಮ್ಮ ಸಂಘಟನೆಯ ಅವಶ್ಯಕತೆ ಇದೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಕೂಡಾ ಸಮಾವೇಶಕ್ಕೆ ಬರುತ್ತಾರೆ. ಬಿಜೆಪಿಯಲ್ಲಿ ಹಿಂದುತ್ವ ಬಿಟ್ಟು ಸ್ವಜನ ಪಕ್ಷಪಾತ ನಡೆಯುತ್ತಿದೆ ಎಂದು ಆರೋಪಿಸಿದ ಈಶ್ವರಪ್ಪ, ಇದಕ್ಕೆ ಸರಿಯಾಗಿ ಬ್ರೇಕ್ ನೀಡಬೇಕು. ಹಿಂದುತ್ವಕ್ಕೆ ಬೆಲೆ ಸಿಗಬೇಕು. ಬಿಜೆಪಿನಲ್ಲಿ ಕುಟುಂಬ ರಾಜಕಾರಣದಿಂದ ಮುಕ್ತವಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದರು.

ರಾಜ್ಯದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಬಿಜೆಪಿ ಪಕ್ಷ ಬೆಳೆದು ಬಂದಿದೆ, ಆದರೀಗ ಶಾಸಕರ ಸಂಖ್ಯೆ ಕಡಿಮೆಯಾಗಿದೆ. ಇಡೀ ರಾಜ್ಯದ ಪ್ರಮುಖ ನಾಯಕರು ನೊಂದಿದ್ದಾರೆ. ಹೊಂದಾಣಿಕೆ ರಾಜಕಾರಣಕ್ಕೆ ಪರಿಹಾರ ಕಂಡು ಹಿಡಿಯಬೇಕು ಎನ್ನುವುದು ನಮ್ಮ ಪ್ರಯತ್ನವಾಗಿದೆ. ಬಿಜೆಪಿ ಪಕ್ಷದಲ್ಲಿ ಈಶ್ವರಪ್ಪ ಅವರಿಗೆ ಅನ್ಯಾಯವಾಗಿದೆ ಎಂದು ಕಾರ್ಯಕರ್ತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕೇವಲ ನನಗೆ ಮಾತ್ರವಲ್ಲ ಅನೇಕರಿಗೆ ಅನ್ಯಾಯವಾಗಿದೆ, ಆದರೂ ಸುಮ್ಮನೆ ಕುಳಿತುಕೊಂಡಿದ್ದಾರೆ. ಆದರೆ ಈಶ್ವರಪ್ಪ ಸುಮ್ಮನ್ನೇ ಕುಳಿತುಕೊಂಡಿಲ್ಲ. ಅನ್ಯಾಯ ಆಗಿದಕ್ಕಾಗಿಯೇ ನಾನು ಚುನಾವಣೆಗೆ ಸ್ಪರ್ಧೆ ಮಾಡಿದ್ದೆ, ಅದು ಕೇಂದ್ರ ನಾಯಕರಿಗೆ ಗೊತ್ತಾಗಲಿ ಎಂದು ನಾನು ಚುನಾವಣೆಗೆ ಸ್ಪರ್ಧೆ ಕೂಡಾ ಮಾಡಿದ್ದೆ. ಸಿ.ಟಿ.ರವಿ, ಪ್ರತಾಪ್ ಸಿಂಹ, ಅನಂತಕುಮಾರ ಹೆಗಡೆ ಹೀಗೆ ಹಲವಾರು ಜನರಿಗೆ ಅನ್ಯಾಯವಾಗಿದೆ. ಹಿಂದುತ್ವದ ಬಗ್ಗೆ ಮಾತನಾಡಿದ್ದೇ ತಪ್ಪಾ..? ಎಂದು ಮಾಜಿ ಉಪಮುಖ್ಯಮಂತ್ರಿ ..ಕೆ.ಎಸ್.ಈಶ್ವರಪ್ಪ ಹೇಳಿದರು.

Share this article