ಗಜೇಂದ್ರಗಡ: ಪ್ರತಿ ಇಲಾಖೆಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರದ ಮಂತ್ರಿಗಳಲ್ಲಿ ನಾನೆಷ್ಟು ದುಡ್ಡು ಮಾಡಿದೆ, ನೀ ಎಷ್ಟು ಮಾಡಿದಿ ಎನ್ನುವ ಪೈಪೋಟಿ ನಡೆಯುತ್ತಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಮಾಜಿ ಸಚಿವ ಕಳಕಪ್ಪ ಬಂಡಿ ನಿವಾಸದ ಆವರಣದಲ್ಲಿ ಶನಿವಾರ ನಡೆದ ಬಿಜೆಪಿ ರೋಣ ಮಂಡಲ, ಮೋರ್ಚಾಗಳ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ನಿಕಟಪೂರ್ವ ಪದಾಧಿಕಾರಿಗಳ ಅಭಿನಂದನಾ ಸಭೆಯಲ್ಲಿ ಮಾತನಾಡಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂತ್ರಿಗಳು ಉತ್ತಮ ಕೆಲಸ ಮಾಡಲು ಪೈಪೋಟಿ ನಡೆಸುತ್ತಿದ್ದರು. ಆದರೆ ಕಾಂಗ್ರೆಸ್ ಸರ್ಕಾರದ ಮಂತ್ರಿಗಳಲ್ಲಿ ಹಣ ಮಾಡಲು ಪೈಪೋಟಿ ನಡೆಯುತ್ತಿದೆ. ಅನ್ಯಾಯವಾದಾಗ ಪ್ರತಿಭಟನೆ ನಡೆಸುವ ಬಿಜೆಪಿ ಕಾರ್ಯಕರ್ತರ ಮೇಲೆ 1 ತಾಸಿನಲ್ಲಿ ಎಫ್‌ಐಆರ್ ಹಾಕಿ ಬಂಧಿಸಲಾಗುತ್ತಿದೆ. ಸರ್ವಾಧಿಕಾರಿ ಆಡಳಿತ ಖಂಡಿಸಿ ಕೊಡಗಿನ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡು, ಇದಕ್ಕೆಲ್ಲಾ ನಾನು ಶಾಸಕರ ವಿರುದ್ಧ ಪ್ರತಿಭಟನೆ ಮಾಡಿದ್ದೇ ಕಾರಣ ಎಂದು ಹೇಳಿದ್ದಾನೆ. ದ್ವೇಷದ ರಾಜಕಾರಣ ಮಿತಿಮೀರುತ್ತಿದೆ. ಇದನ್ನೆಲ್ಲಾ ನೋಡಿದರೆ ಎಮರ್ಜೆನ್ಸಿ ನೆನಪಾಗುತ್ತಿದೆ ಎಂದರು.
ಮಾಜಿ ಸಚಿವ ಕಳಕಪ್ಪ ಬಂಡಿ ಮಾತನಾಡಿ, ಜನರಿಂದ ಸ್ಟ್ಯಾಂಪ್, ಡೀಸೆಲ್ ಸೇರಿ ವಿವಿಧ ಬೆಲೆಗಳನ್ನು ಏರಿಕೆ ಮಾಡುವ ಮೂಲಕ ಜನರಿಂದ ಲೂಟಿ ಮಾಡಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನೀಡುತ್ತದೆ. ಅಭಿವೃದ್ಧಿ ಮರೆತಿರುವ ಪರಿಣಾಮ ಕಾಂಗ್ರೆಸ್ ದುರಾಡಳಿತದಿಂದ ಜನತೆ ಬೇಸತ್ತಿದ್ದಾರೆ ಎಂದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಒಮ್ಮೆ ಹುದ್ದೆ ಸಿಗುತ್ತದೆ ಅದು ಒಂದೇ ಕುಟುಂಬಕ್ಕೆ ಸೀಮಿತವಾಗಿರುತ್ತದೆ. ಆದರೆ ಬಿಜೆಪಿಯಲ್ಲಿ ಕಾರ್ಯಕರ್ತರಿಗೆ ಮೂರು ವರ್ಷಕ್ಕೆ ಅಧಿಕಾರ ನೀಡುವ ಪದ್ಧತಿಯಿದೆ. ಹೀಗಾಗಿ ನಿಷ್ಠಾವಂತ ಪಕ್ಷದ ಕಾರ್ಯಕರ್ತರನ್ನು ಬಿಜೆಪಿ ಗುರುತಿಸುತ್ತದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಮಾತನಾಡಿ, ತಾಪಂ, ಜಿಪಂ ಚುನಾವಣೆ ಯಾವುದೇ ಕ್ಷಣದಲ್ಲಿ ಘೋಷಣೆಯಾಗಬಹುದು, ಗ್ರಾಮಗಳಲ್ಲಿ ಮೋದಿ, ಬಿಎಸ್‌ವೈ ಹಾಗೂ ಬೊಮ್ಮಾಯಿ ಅವರ ಜನಪರ ಮತ್ತು ರೈತಪರ ಕಾರ್ಯಕ್ರಮಗಳನ್ನು ಜನತೆಗೆ ತಲುಪಿಸುವ ಕಾರ್ಯವನ್ನು ನೂತನ ಪದಾಧಿಕಾರಿಗಳು ಮಾಡಬೇಕು ಎಂದರು.
ಬಿಜೆಪಿ ರೋಣ ಮಂಡಲ ನಿಕಟಪೂರ್ವ ಅಧ್ಯಕ್ಷ ಮುತ್ತಣ್ಣ ಕಡಗದ ಮಾತನಾಡಿದರು.ಬಸವರಾಜ ಬೆಲ್ಲದ, ಬಿ.ಎಂ. ಸಜ್ಜನ, ನಿಂಗಪ್ಪ ಕೆಂಗಾರ, ಅಶೋಕ ನವಲಗುಂದ, ಆರ್.ಕೆ. ಚವ್ಹಾಣ, ಮುದಿಯಪ್ಪ ಕರಡಿ, ರಾಜೇಂದ್ರ ಘೋರ್ಪಡೆ, ಬಸವರಾಜ ಬಂಕದ, ಸಿದ್ದಣ್ಣ ಬಳಿಗೇರ, ಬಾಳು ಭೋಸ್ಲೆ, ಯು.ಆರ್. ಚೆನ್ನಮ್ಮನವರ, ದತ್ತು ಬಾಕಳೆ, ಅಶೋಕ ವನ್ನಾಲ, ಡಿ.ಜಿ. ಕಟ್ಟಿಮನಿ ಸೇರಿ ಇತರರು ಇದ್ದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರೋಣ ಮತಕ್ಷೇತ್ರದಿಂದ ಮಾಜಿ ಸಚಿವ ಕಳಕಪ್ಪ ಬಂಡಿ ಹಾಗೂ ರಾಜ್ಯದ ಎಲ್ಲ ವಿಧಾನಸಭಾ ಮತಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ತರುವವರೆಗೆ ವಿರಮಿಸುವುದಿಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.