ಹೊನ್ನಾಳಿ: ನೈಋತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎಸ್.ಪಿ. ದಿನೇಶ್ ಪರ ಮತದಾನ ಮಾಡುವ ಉದ್ದೇಶದಿಂದ ಹಣ ಹಂಚುತ್ತಿದ್ದಾರೆ ಎಂಬ ಆರೋಪದ ಮೇಲೆ ಪ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಶಶಿಧರ್ ನೀಡಿದ ದೂರಿನ ಆಧಾರದ ಮೇರೆಗೆ ಆರೋಪಿ ಎಂ.ಜಿ. ಶಶಿಕಲಾ ವಿರುದ್ಧ ದೂರು ದಾಖಲಿಸಿಕೊಂಡ ಘಟನೆ ಹೊನ್ನಾಳಿ ವ್ಯಾಪ್ತಿಯಲ್ಲಿ ನಡೆದಿದೆ.
ಸೋಮವಾರ ಎಂ.ಜಿ. ಶಶಿಕಲಾ ತಾಲೂಕು ಪಂಚಾಯಿತಿ ಕಚೇರಿ ಪಕ್ಕದಲ್ಲಿ ವ್ಯಾನಿಟಿ ಬ್ಯಾಗ್‌ನಲ್ಲಿ ಹಣ ಇಟ್ಟುಕೊಂಡು ಎಸ್.ಪಿ. ದಿನೇಶ್ ಪರ ಮತ ನೀಡುವಂತೆ ಹಣ ಹಂಚಿಕೆ ಮಾಡುತ್ತಿದ್ದರು ಎಂಬ ಮಾಹಿತಿ ಉಪವಿಭಾಗಾಧಿಕಾರಿ ಅವರು ನೀಡಿದ್ದರು. ಅವರ ಮಾಹಿತಿ ಮೇರೆಗೆ ಶಶಿಧರ್ ಅವರು ಹೊನ್ನಾಳಿ ಪೊಲೀಸರಿಗೆ ದೂರು ನೀಡಿದ್ದು, ಈ ಆರೋಪದ ಮೇರೆಗೆ ಮಹಿಳೆ ಮತ್ತು ಅವರಿಗೆ ಸಹಕಾರ ನೀಡುತ್ತಿದ್ದ ಆರೋಪದ ಮೇರೆಗೆ ಬಸವನಹಳ್ಳಿ ಬೀರೇಶ್ ಎಂಬಾತನನ್ನು ಬಂಧಿಸಿ ಸ್ಟೇಶನ್ ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಎಂ.ಜಿ. ಶಶಿಕಲಾ ಮೂಲತಃ ನ್ಯಾಮತಿ ತಾಲೂಕು ಮಾದಾಪುರ ಗ್ರಾಮದವರು. ಶಿಕಾರಿಪುರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿದ್ದಾರೆ. ಬೀರೇಶ್ ನ್ಯಾಮತಿ ತಾಲೂಕಿನ ಬಸವನಹಳ್ಳಿಯವರು ಎಂಬ ಮಾಹಿತಿ ಲಭ್ಯವಾಗಿದೆ. ಎಂ.ಜಿ. ಶಶಿಕಲಾ ಅವರ ವ್ಯಾನಿಟಿ ಬ್ಯಾಗ್ ಪೊಲೀಸ್ ಅಧಿಕಾರಿಗಳು ಪರಿಶೀಲಿಸಿದರು. ಆಗ ₹30 ಸಾವಿರ ನಗದು, ಸ್ಮಾರ್ಟ್‍ಫೋನ್, ಚುನಾವಣಾ ಐಡಿ ಕಾರ್ಡ್ ಪತ್ತೆಯಾಗಿದ್ದು, ವಶಪಡಿಸಿಕೊಳ್ಳಲಾಗಿದೆ. ಬೀರೇಶನ ಬಳಿ ಇದ್ದ ಸ್ಮಾರ್ಟ್ ಫೋನ್ ಮತ್ತು ಬೈಕ್ ಕೀ ಗೊಂಚಲುಗಳನ್ನು ಅಮಾನನುಪಡಿಸಿಕೊಳ್ಳಲಾಗಿದೆ ಎಂದು ಪಿಎಸ್‍ಐ ಶಾಂತಲಾ ತಿಳಿಸಿದ್ದಾರೆ.
- - - -3ಎಚ್.ಎಲ್.ಐ2.:ಹೊನ್ನಾಳಿ ಪಟ್ಟಣದಲ್ಲಿ ಪಕ್ಷೇತರ ಅಭ್ಯರ್ಥಿ ಎಸ್.ಪಿ. ದಿನೇಶ್ ಪರ ಹಣ ಹಂಚಿಕೆ ಆರೋಪಿಗಳನ್ನು ಉಪವಿಭಾಗಾಧಿಕಾರಿ ಅಭಿಷೇಕ್, ತಹಸೀಲ್ದಾರ್ ಪುರಂದರ್ ಹಾಗೂ ಪಿ.ಎಸ್.ಐ. ಶಾಂತಲಾ ವಿಚಾರಣೆ ನಡೆಸಿದರು.