ಹರಿಹರ ನಗರಸಭೆ ಪೌರಾಯುಕ್ತ ಸೇರಿ 7 ಜನರ ವಿರುದ್ಧ ದೂರು

KannadaprabhaNewsNetwork | Published : Apr 10, 2025 1:02 AM

ಸಾರಾಂಶ

ಸರ್ಕಾರಿ ನೌಕರಂತೆ ಇಬ್ಬರು ವ್ಯಕ್ತಿಗಳಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದ ಹರಿಹರ ನಗರಸಭೆ ಪೌರಾಯುಕ್ತ, ಕಂದಾಯ ಅಧಿಕಾರಿ, ಪ್ರಭಾರ ಕಂದಾಯ ಅಧಿಕಾರಿ, ಕಚೇರಿ ವ್ಯವಸ್ಥಾಪಕಿ ಸೇರಿದಂತೆ 7 ಜನರ ವಿರುದ್ಧ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಲೋಕಾಯುಕ್ತ ಪೊಲೀಸರು ಬುಧವಾರ ದೂರು ದಾಖಲಿಸಿದ್ದಾರೆ.

- ಅನಧಿಕೃತ ವ್ಯಕ್ತಿಗಳು ಕೆಲಸ ಮಾಡಲು ಅವಕಾಶ: ಲೋಕಾಯುಕ್ತರಿಂದ ದೂರು ದಾಖಲು - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಸರ್ಕಾರಿ ನೌಕರಂತೆ ಇಬ್ಬರು ವ್ಯಕ್ತಿಗಳಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದ ಹರಿಹರ ನಗರಸಭೆ ಪೌರಾಯುಕ್ತ, ಕಂದಾಯ ಅಧಿಕಾರಿ, ಪ್ರಭಾರ ಕಂದಾಯ ಅಧಿಕಾರಿ, ಕಚೇರಿ ವ್ಯವಸ್ಥಾಪಕಿ ಸೇರಿದಂತೆ 7 ಜನರ ವಿರುದ್ಧ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಲೋಕಾಯುಕ್ತ ಪೊಲೀಸರು ಬುಧವಾರ ದೂರು ದಾಖಲಿಸಿದ್ದಾರೆ.

ನಗರಸಭೆ ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ, ಕಚೇರಿ ವ್ಯವಸ್ಥಾಪಕಿ ನಿರಂಜನಿ, ಕಂದಾಯ ನಿರೀಕ್ಷಕಿ ಚಿತ್ರಾ, ಪ್ರಭಾರ ಕಂದಾಯ ನಿರೀಕ್ಷಕ ರಮೇಶ ಹಾಗೂ ಸರ್ಕಾರಿ ನೌಕರರಂತೆ ಕೆಲಸ ಮಾಡುತ್ತಿದ್ದ ಮೌನೇಶ, ಮಹಮ್ಮದ್ ಹಫೀಜ್‌ವುಲ್ಲಾ ಮತ್ತು ಹನುಮಂತಪ್ಪ ತುಂಬಿಗೆರೆ ವಿರುದ್ಧ ಲೋಕಾಯುಕ್ತ ಉಪಾಧೀಕ್ಷಕಿ ಕಲಾವತಿ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಲೋಕಾಯುಕ್ತ ಪೊಲೀಸರು ಏ.7ರಂದು ಹರಿಹರ ನಗರಸಭೆಗೆ ದಿಢೀರ್‌ ಭೇಟಿ ನೀಡಿದ್ದರು. ಈ ವೇಳೆ ಮೌನೇಶ, ಮಹಮ್ಮದ್ ಹಫೀಜ್‌ವುಲ್ಲಾ ಸರ್ಕಾರಿ ನೌಕಕರಂತೆ ಕೆಲಸ ಮಾಡುತ್ತಿದ್ದರು. ಇಬ್ಬರನ್ನೂ ಲೋಕಾಯುಕ್ತ ಪೊಲೀಸರು ವಿಚಾರಿಸಿದರು. ಆಗ ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ, ಕಚೇರಿ ವ್ಯವಸ್ಥಾಪಕಿ ನಿರಂಜನಿ, ಕಂದಾಯ ನಿರೀಕ್ಷಕಿ ಚಿತ್ರಾ, ಪ್ರಭಾರ ಕಂದಾಯ ನಿರೀಕ್ಷಕ ರಮೇಶ್ ಆದೇಶದಂತೆ ತಾವು ಕೆಲಸ ಮಾಡುತ್ತಿದ್ದು, ತಮ್ಮೊಂದಿಗೆ ಹನುಮಂತಪ್ಪ ತುಂಬಿಗೆರೆ ಸಹ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ವಿಚಾರ ಬಾಯಿಬಿಟ್ಟಿದ್ದಾರೆ.

ಹರಿಹರದಲ್ಲಿ ಏ.1ರಿಂದ 7ರವರೆಗೆ ಸಾರ್ವಜನಿಕರಿಂದ ಅರ್ಜಿ ಇತರೆ ಕೆಲಸಕ್ಕೆಂದು ಒಟ್ಟು ₹1,63,266 ಅನ್ನು ಸರ್ಕಾರಿ ನೌಕರರಂತೆ ಕೆಲಸ ಮಾಡುತ್ತಿದ್ದ ಇಬ್ಬರೂ ಅನಧಿಕೃತ ವ್ಯಕ್ತಿಗಳು ಸಂಗ್ರಹಿಸಿದ್ದರು. ಈ ಹಣದಲ್ಲಿ ₹89,400 ಅನ್ನು ಹಫೀಜ್‌ವುಲ್ಲಾ ಸಹೋದರ ಮಹಮ್ಮದ್‌ ತೌಸೀಫ್‌ವುಲ್ಲಾನ ಎಸ್‌ಬಿಐ ಬ್ಯಾಂಕ್ ಖಾತೆಗೆ ಜಮಾ ಮಾಡಿರುವುದು ಪರಿಶೀಲನೆ ವೇಳೆ ಲೋಕಾಯುಕ್ತ ಅಧಿಕಾರಿಗಳ ಗಮನಕ್ಕೆ ಬಂದಿತು.

ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪೌರಾಯುಕ್ತ ಸೇರಿದಂತೆ ಅಧಿಕಾರಿ, ಸಿಬ್ಬಂದಿ ವಿರುದ್ಧ ಲೋಕಾಯುಕ್ತರು ದೂರು ದಾಖಲಿಸಿದರು. ಮುಂದಿನ ತನಿಖೆ ಕೈಗೊಳ್ಳಲಾಗಿದೆ.

- - -

(ಸಾಂದರ್ಭಿಕ ಚಿತ್ರ)

Share this article