ಗ್ರಾಹಕನಿಗೆ ಹಲ್ಲೆ ದೂರು, ಪ್ರತಿ ದೂರು ದಾಖಲು

KannadaprabhaNewsNetwork | Published : Jun 29, 2024 12:42 AM

ಸಾರಾಂಶ

ಜೂ. 27ರಂದು ಸಂಜೆ ಸಹಕಾರಿ ಸಿಬ್ಬಂದಿ ಅಜಯ ವೆಂಕಟೇಶ ನಾಯ್ಕ, ರಾಜೇಶ ಮಾದೇವ ನಾಯ್ಕ, ಕೀರ್ತಿರಾಜ ಪಾಂಡುರಂಗ ಶಿರಾಲಿ, ದೇವೇಂದ್ರ ಕುಪ್ಪಾ ನಾಯ್ಕ, ರೋಹಿತ ಸುರೇಶ ಮೊಗೇರ, ನಾಗರಾಜ ಪರಮೇಶ್ವರ ದೇವಾಡಿಗ ಅವರು ಆರೋಪಿತರು ಬೈದಿದ್ದಲ್ಲದೇ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಭಟ್ಕಳ: ಸಾಲ ವಸೂಲಿಗೆ ತೆರಳಿದ ಸೆಂಟ್ ಮಿಲಾಗ್ರೀಸ್ ಸಹಕಾರಿಯ ಸಿಬ್ಬಂದಿ ಗ್ರಾಹಕನಿಗೆ ಬೈದು ಹಲ್ಲೆ ನಡೆಸಿರುವ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಲಾಂದದ ನಿವಾಸಿ ಈಶ್ವರ ದುರ್ಗಪ್ಪ ನಾಯ್ಕ ಹಲ್ಲೆಗೊಳಗಾದ ಗ್ರಾಹಕ. ಈಶ್ವರ ನಾಯ್ಕ ಸೆಂಟ್ ಮಿಲಾಗ್ರೀಸ್ ಸಹಕಾರಿಯಲ್ಲಿ ವೈಯಕ್ತಿಕ ಸಾಲವನ್ನು ಪಡೆದುಕೊಂಡಿದ್ದು, ಕೌಟುಂಬಿಕ ಕಾರಣದಿಂದ ಸಾಲದ ಹಣವನ್ನು ತುಂಬದೇ ಬಾಕಿ ಇದ್ದ ಕಾರಣ ಕಳೆದ 15 ದಿನ ಹಿಂದೆ ಬ್ಯಾಂಕಿನ ಸಿಬ್ಬಂದಿ ಸಾಲವನ್ನು ಪಾವತಿಸಲು ಹೇಳಿದಾಗ ಸಾಲದ ಪೂರ್ತಿ ಹಣವನ್ನು 2 ತಿಂಗಳಲ್ಲಿ ಭರಣ ಮಾಡಿ ಕೊಡುವುದಾಗಿ ಕಾಲಾವಕಾಶ ಪಡೆದುಕೊಂಡಿದ್ದರು.

ಜೂ. 27ರಂದು ಸಂಜೆ ಸಹಕಾರಿ ಸಿಬ್ಬಂದಿ ಅಜಯ ವೆಂಕಟೇಶ ನಾಯ್ಕ, ರಾಜೇಶ ಮಾದೇವ ನಾಯ್ಕ, ಕೀರ್ತಿರಾಜ ಪಾಂಡುರಂಗ ಶಿರಾಲಿ, ದೇವೇಂದ್ರ ಕುಪ್ಪಾ ನಾಯ್ಕ, ರೋಹಿತ ಸುರೇಶ ಮೊಗೇರ, ನಾಗರಾಜ ಪರಮೇಶ್ವರ ದೇವಾಡಿಗ ಅವರು ಆರೋಪಿತರು ಬೈದಿದ್ದಲ್ಲದೇ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಕರಣದ ಬಗ್ಗೆ ಪ್ರತಿ ದೂರು ನೀಡಿರುವ ಬ್ಯಾಂಕಿನ ಸಿಬ್ಬಂದಿ ಅಜಯ ವೆಂಕಟೇಶ ನಾಯ್ಕ, ರಾಜೇಶ ಮಾದೇವ ನಾಯ್ಕ, ಕೀರ್ತಿರಾಜ ಪಾಂಡುರಂಗ ಶಿರಾಲಿ, ದೇವೇಂದ್ರ ಕುಪ್ಪಾ ನಾಯ್ಕ, ರೋಹಿತ ಸುರೇಶ ಮೊಗೇರ, ನಾಗರಾಜ ಪರಮೇಶ್ವರ ದೇವಾಡಿಗ ಸಾಲ ವಸೂಲಿಗಾಗಿ ಈಶ್ವರ ದುರ್ಗಪ್ಪ ನಾಯ್ಕ ಬಳಿ ಹೋದಾಗ, ಜೀವಬೆದರಿಕೆ ಹಾಕಿದ್ದಾರೆ ಎಂದೂ ದೂರಿನಲ್ಲಿ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಗಾಂಜಾ ಮಾರಾಟ, ಇಬ್ಬರ ಬಂಧನ

ಶಿರಸಿ: ನಗರ ಠಾಣೆ ಪೊಲೀಸರು ಅಕ್ರಮ ಗಾಂಜಾ ಸಾಗಾಟ, ಮಾರಾಟ ಮತ್ತು ಸೇವನೆ ಮಾಡುವವರ ಮೇಲೆ ದಾಳಿ ಮುಂದುವರಿಸಿದ್ದು, ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ.ಮುರುಡೇಶ್ವರ ಕಾಲನಿ ಹತ್ತಿರ ಗಾಂಜಾ ಸೇವನೆ ಮಾಡಿ ಅಮಲಿನಲ್ಲಿದ್ದ ಮಾರುತಿಗಲ್ಲಿಯ ನಾಗರಾಜ ರಾಜು ಹರಿಜನ ಮತ್ತು ದೇವಿಕೆರೆ ಸಮೀಪದ ಕೋರ್ಟ್ ರಸ್ತೆಯ ವಿನಯ ಗಣಪತಿ ಹರಿಜನ ಬಂಧಿತ ವ್ಯಕ್ತಿಗಳು.ಗಾಂಜಾ ಸೇವನೆ ಮಾಡಿರುವ ಅನುಮಾನದ ಮೇಲೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು, ಇಬ್ಬರ ವಿರುದ್ಧ ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಎಸ್‌ಪಿ ಗಣೇಶ ಕೆ.ಎಲ್., ವೃತ್ತ ನಿರೀಕ್ಷಕ ಶಶಿಕಾಂತ ವರ್ಮಾ ಮಾರ್ಗದರ್ಶನದಲ್ಲಿ ನಗರ ಠಾಣೆಯ ಪಿಎಸ್‌ಐ ನಾಗಪ್ಪ ಬಿ. ನೇತೃತ್ವದಲ್ಲಿ ಸಿಬ್ಬಂದಿಗಳಾದ ಹನುಮಂತ ಕಬಾಡಿ, ಪ್ರಶಾಂತ ಪಾವಸ್ಕರ್, ನಾಗಪ್ಪ ಲಮಾಣಿ, ಸದ್ದಾಂ ಹುಸೇನ್, ಮಂಜುನಾಥ ಕಾಶಿಕೋವಿ, ಪ್ರವೀಣ ಎನ್. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Share this article