ಶಿಂಷಾ ಬ್ಯಾಂಕ್ ಬಹುಕೋಟಿ ಹಗರಣ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಎಸ್ಪಿಗೆ ದೂರು

KannadaprabhaNewsNetwork | Published : Aug 5, 2024 12:32 AM

ಸಾರಾಂಶ

ಬ್ಯಾಂಕ್‌ನಲ್ಲಿ ನಡೆದಿರುವ ಹಗರಣದ ಬಗ್ಗೆ ಕಳೆದ 2022 ಆಗಸ್ಟ್ 27ರಂದು ದೂರು ನೀಡಲಾಗಿದೆ. ಈ ಸಂಬಂಧ ಆರೋಪಿಗಳಾದ ಬ್ಯಾಂಕ್‌ನ ಸಿಇಒ ಲಕ್ಷ್ಮಿ ನಾರಾಯಣಗೌಡ, ವ್ಯವಸ್ಥಾಪಕ ಉಮಾಶಂಕರ್, ಕಿರಿಯ ಸಹಾಯಕ ಟಿ. ಗೋಪಿ, ಅಕೌಂಟೆಂಟ್ ಬಿ.ಎನ್. ಕುಮಾರ್ ಅವರು ಬ್ಯಾಂಕ್‌ನ ಹಣ 5,64,40,574 ರು. ದುರುಪಯೋಗ ಪಡಿಸಿಕೊಂಡಿರುವುದು ಆಡಿಟ್ ವರದಿಯಿಂದ ದೃಢಪಟ್ಟಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಪಟ್ಟಣದ ಶಿಂಷಾ ಸಹಕಾರ ಬ್ಯಾಂಕ್‌ನ ಬಹು ಕೋಟಿ ಹಗರಣದಲ್ಲಿ ತಪ್ಪಿತಸ್ಥರಾಗಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಲ್ಲಿ ಮದ್ದೂರು ಪೊಲೀಸರು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಬ್ಯಾಂಕ್‌ನ ಅಧ್ಯಕ್ಷ ಎಂ.ಚಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಬ್ಯಾಂಕ್‌ನಲ್ಲಿ ನಡೆದಿರುವ ಹಗರಣದ ಬಗ್ಗೆ ಕಳೆದ 2022 ಆಗಸ್ಟ್ 27ರಂದು ದೂರು ನೀಡಲಾಗಿದೆ. ಈ ಸಂಬಂಧ ಆರೋಪಿಗಳಾದ ಬ್ಯಾಂಕ್‌ನ ಸಿಇಒ ಲಕ್ಷ್ಮಿ ನಾರಾಯಣಗೌಡ, ವ್ಯವಸ್ಥಾಪಕ ಉಮಾಶಂಕರ್, ಕಿರಿಯ ಸಹಾಯಕ ಟಿ. ಗೋಪಿ, ಅಕೌಂಟೆಂಟ್ ಬಿ.ಎನ್. ಕುಮಾರ್ ಅವರು ಬ್ಯಾಂಕ್‌ನ ಹಣ 5,64,40,574 ರು. ದುರುಪಯೋಗ ಪಡಿಸಿಕೊಂಡಿರುವುದು ಆಡಿಟ್ ವರದಿಯಿಂದ ದೃಢಪಟ್ಟಿದೆ.

ಈ ನಾಲ್ವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮದ್ದೂರು ಪೊಲೀಸರಿಗೆ ದೂರು ನೀಡಲಾಗಿತ್ತು. ಆ ನಂತರ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ 403, 409, 417 ಮತ್ತು 420 ಅನ್ವಯ ಪ್ರಕರಣ ದಾಖಲು ಮಾಡಿಕೊಂಡಿದ್ದರು.

ಬಳಿಕ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 68 ರೀತಿ ಸಹ ವಿಚಾರಣೆ ನಡೆದಿದೆ. ವಿಚಾರಣೆಯಲ್ಲೂ ಸಹ ಹಣ ದುರುಪಯೋಗ ಸಾಬೀತಾಗಿ ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡುವಂತೆ ಸಹಕಾರ ಸಂಘ ಆದೇಶ ಮಾಡಿದೆ.

ಆಡಿಟ್ ವರದಿ ಮತ್ತು ತನಿಖೆಗೆ ಅಗತ್ಯವಾದ ಎಲ್ಲಾ ದಾಖಲಾತಿಗಳನ್ನು ಒದಗಿಸಲಾಗಿದೆ. ಆದರೆ, ಮದ್ದೂರು ಪೊಲೀಸರು ತನಿಖೆಯನ್ನು ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸದೆ ವಿಳಂಬ ಮಾಡುತ್ತಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ ಎಂದು ದೂರಿದ್ದಾರೆ.

ಸದರಿ ಪೊಲೀಸರ ವಿಳಂಬ ನೀತಿ ಬಗ್ಗೆ ವಿಚಾರ ನಡೆಸಲಾಗಿ ಪ್ರಕರಣದ ಕಡತಗಳನ್ನು ಮಂಡ್ಯದ ಸೆನ್ ಸೈಬರ್ ಕ್ರೈಮ್ ಆರ್ಥಿಕ ಅಪರಾಧಗಳ ವಿಭಾಗಕ್ಕೆ ಕಳಿಸಲಾಗಿದೆ. ಸೆನ್ ಠಾಣೆಯ ಅಧಿಕಾರಿಗಳು ಸಹ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸದೆ ವಿಳಂಬ ಮಾಡುತ್ತಿದ್ದಾರೆ. ಹೀಗಾಗಿ ಈ ಪ್ರಕರಣದ ತನಿಖೆಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸುವಂತೆ ಆದೇಶ ಹೊರಡಿಸುವಂತೆ ಬ್ಯಾಂಕಿನ ಅಧ್ಯಕ್ಷ ಎಂ.ಚಂದು ಜಿಲ್ಲಾ ಎಸ್ಪಿಗೆ ಮನವಿ ಮಾಡಿದ್ದಾರೆ.

Share this article