ಅನಧಿಕೃತ ಕಟ್ಟಡಗಳ ಬಗ್ಗೆ ದೂರು, ಕ್ರಮಕ್ಕೆ ಸೂಚನೆ

KannadaprabhaNewsNetwork | Published : Dec 22, 2023 1:30 AM

ಸಾರಾಂಶ

ಸ್ಥಳೀಯ ಪುರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳ ಬಗೆಗೆ ಸಾಕಷ್ಟು ದೂರು ಕೇಳಿ ಬರುತ್ತಿವೆ. ಕೂಡಲೇ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸುವಂತೆ ಶಾಸಕ ಶ್ರೀನಿವಾಸ ಮಾನೆ ಪುರಸಭೆ ಆಡಳಿತಾಧಿಕಾರಿ, ಸವಣೂರು ಉಪ ವಿಭಾಗಾಧಿಕಾರಿ ಮಹ್ಮದ್‌ ಖಿಜರ್ ಅವರಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಹಾನಗಲ್ಲ

ಸ್ಥಳೀಯ ಪುರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳ ಬಗೆಗೆ ಸಾಕಷ್ಟು ದೂರು ಕೇಳಿ ಬರುತ್ತಿವೆ. ಕೂಡಲೇ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸುವಂತೆ ಶಾಸಕ ಶ್ರೀನಿವಾಸ ಮಾನೆ ಪುರಸಭೆ ಆಡಳಿತಾಧಿಕಾರಿ, ಸವಣೂರು ಉಪ ವಿಭಾಗಾಧಿಕಾರಿ ಮಹ್ಮದ್‌ ಖಿಜರ್ ಅವರಿಗೆ ಸೂಚಿಸಿದರು.

ಪಟ್ಟಣದಲ್ಲಿ ಸವಣೂರು ಉಪ ವಿಭಾಗಾಧಿಕಾರಿ ಮಹ್ಮದ್‌ ಖಿಜರ್, ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ ಅವರೊಂದಿಗೆ ಪುರಸಭೆಯ ಸಮಸ್ಯೆಗಳ ಕುರಿತು ಸುದೀರ್ಘ ಸಭೆ ನಡೆಸಿ ಸಮಾಲೋಚಿಸಿದ ಅವರು, ವಸತಿ ಉದ್ದೇಶಕ್ಕೆ ಪರವಾನಗಿ ಪಡೆದು ಕಟ್ಟಡ ನಿರ್ಮಿಸಿಕೊಂಡು, ನಂತರ ವಾಣಿಜ್ಯ ಉದ್ದೇಶಗಳಿಗೆ ಅದನ್ನು ಬಳಕೆ ಮಾಡಲಾಗುತ್ತಿದೆ ಎಂಬ ದೂರುಗಳಿವೆ. ಅಂತಹ ಕಟ್ಟಡಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ವಿಳಂಬ ಸಲ್ಲದು ಎಂದು ಸೂಚಿಸಿದರು.

ಪಟ್ಟಣದಲ್ಲಿ ಹಲವು ವರ್ಷಗಳಿಂದ ಅಕ್ರಮ ನಲ್ಲಿಗಳ ಬಗೆಗೆ ಪುರಸಭೆ ನಿಗಾ ವಹಿಸಿಲ್ಲ. ಅಕ್ರಮ ನಲ್ಲಿಗಳನ್ನು ಪತ್ತೆ ಹಚ್ಚಿ ದಂಡ ಭರಿಸಿಕೊಂಡು ಅಧಿಕೃತವಾಗಿಸಲು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರ ಕೆಲಸಗಳನ್ನು ಕಾಲಮಿತಿಯೊಳಗೆ ಮುಗಿಸಬೇಕು. ತೆರಿಗೆ ಬಾಕಿ ಹಣ ಪಾವತಿಸಿದರೂ ಕೂಡ ಇ-ಸ್ವತ್ತು ಉತಾರ ಪೂರೈಸಲು ಪುರಸಭೆಯ ಅಧಿಕಾರಿಗಳು ವಿಳಂಬ ಮಾಡುತ್ತಿರುವ ಬಗೆಗೂ ದೂರುಗಳಿವೆ. ಇದು ಆಡಳಿತ ವೈಫಲ್ಯದ ಸೂಚನೆ. ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದು ಸಾರ್ವಜನಿಕರಿಂದಲೂ ಟೀಕೆಗೆ ಗುರಿಯಾಗಬೇಕಾಗಿದೆ. ವಿಳಂಬ ಮಾಡದೇ ತಕ್ಷಣವೇ ಉತಾರ ಪೂರೈಸಲು ಏನು ತೊಂದರೆ ಎಂದು ಪ್ರಶ್ನಿಸಿದ ಶಾಸಕರು, ಸಾರ್ವಜನಿಕ ಸಮಸ್ಯೆಗಳನ್ನು ನಿರ್ಲಕ್ಷ್ಯಿಸುವ ಸಿಬ್ಬಂದಿಗೆ ಎಚ್ಚರಿಕೆ ನೀಡಿ. ಮುಂದುವರೆದರೆ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ಜರುಗಿಸಿ. ಮತ್ತೆ ಇಂತಹ ದೂರುಗಳು ಬಂದರೆ ಅನಿವಾರ್ಯವಾಗಿ ತಮ್ಮ ಮೇಲೆ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿ, ಕೂಡಲೇ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಸೂಚನೆ ನೀಡಿದರು.

ಮುಖ್ಯಾಧಿಕಾರಿ ಜಗದೀಶ ವೈ.ಕೆ., ಅಭಿಯಂತರ ನಾಗರಾಜ ಮಿರ್ಜಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share this article