ಆರೋಗ್ಯಕರ ಸಮಾಜ ಕಟ್ಟಲು ರಾಷ್ಟ್ರೀಯ ಸೇವಾ ಯೋಜನೆ ಪೂರಕ

KannadaprabhaNewsNetwork | Published : Jul 8, 2024 12:32 AM

ಸಾರಾಂಶ

ರಾಷ್ಟ್ರೀಯ ಸೇವಾ ಯೋಜನೆ ಶಿಬರದಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದರಿಂದ ಸಾಮಾಜಿಕವಾಗಿ, ವ್ಯಕ್ತಿಗತವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಅಲ್ಲದೇ, ಭವಿಷ್ಯದಲ್ಲಿ ಸಂಸ್ಕಾರಯುತ ಜೀವನ ನಡೆಸಲು ಹಾಗೂ ಆರೋಗ್ಯಕರ ಸಮಾಜ ಕಟ್ಟಲು ಸಾಧ್ಯವಾಗುತ್ತದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ನ್ಯಾಮತಿಯಲ್ಲಿ ಹೇಳಿದ್ದಾರೆ.

- ಬಸವನಹಳ್ಳಿಯಲ್ಲಿ ನ್ಯಾಮತಿ ಸರ್ಕಾರಿ ಕಾಲೇಜಿನ ಎನ್ನೆಸ್ಸೆಸ್‌ ಶಿಬಿರ - - - ಕನ್ನಡಪ್ರಭ ವಾರ್ತೆ, ನ್ಯಾಮತಿ

ರಾಷ್ಟ್ರೀಯ ಸೇವಾ ಯೋಜನೆ ಶಿಬರದಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದರಿಂದ ಸಾಮಾಜಿಕವಾಗಿ, ವ್ಯಕ್ತಿಗತವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಅಲ್ಲದೇ, ಭವಿಷ್ಯದಲ್ಲಿ ಸಂಸ್ಕಾರಯುತ ಜೀವನ ನಡೆಸಲು ಹಾಗೂ ಆರೋಗ್ಯಕರ ಸಮಾಜ ಕಟ್ಟಲು ಸಾಧ್ಯವಾಗುತ್ತದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ತಾಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ನ್ಯಾಮತಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ 2ಘಟಕಗಳ 2023- 2024ನೇ ಸಾಲಿನ ವಾರ್ಷಿಕ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಮನುಷ್ಯನ ಜೀವನದಲ್ಲಿ ಒಮ್ಮೆ ಸಿಕ್ಕ ಅವಕಾಶ ಮತ್ತೆ ಬಾರದು. ಹಾಗಾಗಿ, ವಿದ್ಯಾರ್ಥಿ ಜೀವನ ಚಿನ್ನದಂತ ಜೀವನ ಅನ್ನುವ ಮಾತಿನಂತೆ ಮತ್ತೆ ನಿಮ್ಮಗಳ ಜೀವನದಲ್ಲಿ ವಿದ್ಯಾರ್ಥಿ ಜೀವನ ಸಮಯ ಹಿಂತಿರುಗುವುದಿಲ್ಲ. ಸರ್ಕಾರಗಳು ವಿದ್ಯಾರ್ಥಿಗಳ ಪಠ್ಯದ ಕಲಿಕೆ ಜೊತೆಗೆ ಇಂತಹ ಶಿಬಿರ ಆಯೋಜಿಸುತ್ತಾರೆ. ವಿದ್ಯಾರ್ಥಿಗಳು ಶಿಬಿರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಶಿಬಿರದ ಉದ್ದೇಶ ಯಶಸ್ವಿಗೊಳಿಸಿ ಕಾಲೇಜು ಸೇರಿ ತಂದೆ ತಾಯಿಯರಿಗೆ ಹೆಸರು ತನ್ನಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಟಿ.ಸಿ.ಭಾರತಿ ಮಾತನಾಡಿ, ಜು.5ರಿಂದ 11ರವರೆಗೆ ಒಂದು ವಾರಗಳ ಕಾಲ ನಡೆಯಲಿರುವ ಶಿಬಿರದಲ್ಲಿ ವಿದ್ಯಾರ್ಥಿಗಳು ಗ್ರಾಮಸ್ಥರು ಸಹಕಾರದೊಂದಿಗೆ ಶಿಬಿರಕ್ಕೆ ಯಾವುದೇ ನ್ಯೂನ್ಯತೆ ಬಾರದೆ ಯಶಸ್ವಿಗೊಳಿಸುವಂತೆ ಹೇಳಿದರು.

ಎನ್‌ಎಸ್‌ಎಸ್‌ ಶಿಬಿರಾರ್ಥಿಗಳಾದ ಪ್ರಿಯಾಂಕ, ಸಚ್ಚಿನ್‌ ಸೇರಿದಂತೆ ವಿದ್ಯಾರ್ಥಿಗಳು ಶಿಬಿರದ ಕುರಿತು ತಮ್ಮ ಅನಿಸಿಕೆ ಅಭಿಪ್ರಾಯ ಹಂಚಿಕೊಂಡರು. ಸ.ಪ.ಪೂ.ಬಾಲಕಿಯರ ಕಾಲೇಜಿನ ಪ್ರಾಂಶುಪಾಲ ಔರಸಂಗ ಸ್ವಾಗತಿಸಿದರು. ರಾಘವೇಂದ್ರ ವಂದಿಸಿದರು, ರಾಜಶೇಖರ್‌ ಜಿ.ಆರ್‌. ನಿರೂಪಿಸಿದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಹೊಸಮನೆ ಮಲ್ಲಿಕಾರ್ಜುನ, ಎನ್‌ಎಸ್‌ಎಸ್‌ ಕಾರ್ಯಕ್ರಮಾಧಿಕಾರಿ ಶಿವಕುಮಾರ್‌, ದಯಾನಂದಮೂರ್ತಿ, ಬಸವನಹಳ್ಳಿ ಗ್ರಾಮದ ದೊಡ್ಡೇಶ್‌, ರತ್ನಮ್ಮ, ಹರೀಶ್‌ ಸೇರಿದಂತೆ ಗ್ರಾಮಸ್ಥರು ಮತ್ತಿತರರಿದ್ದರು.

- - -(-ಫೋಟೋ: ಕಾರ್ಯಕ್ರಮದಲ್ಲಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿದರು. )

Share this article