ರೈಲು ಸಂಚಾರ ಅಭಿವೃದ್ಧಿಗೆ ಪೂರಕ: ಕೆ.ವಿರೂಪಾಕ್ಷಪ್ಪ

KannadaprabhaNewsNetwork | Published : Mar 15, 2024 1:15 AM

ಸಾರಾಂಶ

ಬಹುನಿರೀಕ್ಷಿತ ಸಿಂಧನೂರಿನಿಂದ ರೈಲು ಸಂಚಾರ ಆರಂಭ ಸಂತಸವಾಗಿದೆ. ಈ ಯೋಜನೆ ಸಿಂಧನೂರುವರೆಗೆ ಪೂರ್ಣಗೊಳ್ಳಲು ಸಂಗಣ್ಣನವರ ಶ್ರಮವಿದೆ. ಜನರ ಬಹುದಿನದ ಕನಸು ನನಸು ಮಾಡಿದ ಪ್ರಧಾನಿ ಮೋದಿ, ಕೇಂದ್ರ ರೈಲ್ವೆ ಸಚಿವರಿಗೆ ಹಾಗೂ ಕೊಪ್ಪಳ ಲೋಕಸಭೆ ಕ್ಷೇತ್ರದ ಸಂಸದ ಸಂಗಣ್ಣ ಕರಡಿಗೆ ಧನ್ಯವಾದ ತಿಳಿಸಿದರು.

ಕನ್ನಡಪ್ರಭ ವಾರ್ತೆ ಸಿಂಧನೂರು

ಹಲವು ವರ್ಷಗಳ ಜನರ ಬಹುನಿರೀಕ್ಷಿತ ಕನಸಾದ ಸಿಂಧನೂರಿನಿಂದ ರೈಲು ಸಂಚಾರ ಆರಂಭವಾಗುತ್ತಿರುವುದು ಹರ್ಷದ ಸಂಗತಿಯಾಗಿದೆ. ಇದರಿಂದ ತಾಲೂಕಿನ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣವಾಗಲಿದೆ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವರಾಜ ರಾಯರೆಡ್ಡಿ ಅವರು ಸಂಸದರಾಗಿದ್ದಾಗ 1997ರಲ್ಲಿ ಮುನಿರಾಬಾದ್-ಮಹೆಬೂಬ್‌ ನಗರ ರೈಲ್ವೆ ಮಾರ್ಗ ಯೋಜನೆಗೆ ಶಂಕುಸ್ಥಾಪನೆ ಮಾಡಲಾಗಿತ್ತು. ನಂತರ ದಿನಗಳಲ್ಲಿ ಯೋಜನೆ ನೆನಗುದಿಗೆ ಬಿದ್ದಿತ್ತು. ತಾವು ಸಂಸದರಾದ ನಂತರ ಕೊಪ್ಪಳ, ರಾಯಚೂರು ಜಿಲ್ಲಾಧಿಕಾರಿಗಳ ಸಭೆ ನಡೆಸಿ, ಸರ್ವೆ ಕಾರ್ಯ, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡು ರೈಲ್ವೆ ಮಾರ್ಗದ ಕಾಮಗಾರಿಗೆ ಟೆಂಡರ್ ಕರೆಯಲಾಗಿತ್ತು. ಅಷ್ಟರಲ್ಲಿ 2009 ಲೋಕಸಭೆ ಚುನಾವಣೆ ಬಂದ ಹಿನ್ನೆಲೆಯಲ್ಲಿ ಕಾಮಗಾರಿ ಪ್ರಕ್ರಿಯೆ ಸ್ಥಗಿತಗೊಂಡಿತು ಎಂದು ವಿವರಿಸಿದರು.

ತದನಂತರ ಸಂಸದರಾದ ಶಿವರಾಮೇಗೌಡ ಅವಧಿಯಲ್ಲಿ ರೈಲ್ವೆ ಮಾರ್ಗ ಕಾಮಗಾರಿ ಪ್ರಗತಿಯೇ ಕಂಡಿಲ್ಲ. ಆದರೆ ಸಂಗಣ್ಣ ಕರಡಿ ಸಂಸದರಾದ ನಂತರ ಚುರುಕಿನಿಂದ ಕೆಲಸ ನಡೆಯಿತು. ಈ ಯೋಜನೆ ಸಿಂಧನೂರುವರೆಗೆ ಪೂರ್ಣಗೊಳ್ಳಲು ಸಂಗಣ್ಣನವರ ಶ್ರಮವಿದೆ. ಜನರ ಬಹುದಿನದ ಕನಸು ನನಸು ಮಾಡಿದ ಪ್ರಧಾನಿ ಮೋದಿ, ಕೇಂದ್ರ ರೈಲ್ವೆ ಸಚಿವರಿಗೆ ಹಾಗೂ ಕೊಪ್ಪಳ ಲೋಕಸಭೆ ಕ್ಷೇತ್ರದ ಸಂಸದ ಸಂಗಣ್ಣ ಕರಡಿಗೆ ಧನ್ಯವಾದ ತಿಳಿಸಿದರು.

ಬಿಜೆಪಿ ಬಾರಿ ಶೇ.10 ರಷ್ಟು ಹೊಸ ಮುಖಗಳಿಗೆ ಟಿಕೆಟ್ ನೀಡಿ ಮಣೆ ಹಾಕುವುದು ಸಹಜ. ಅದರಂತೆ ಸಂಗಣ್ಣ ಕರಡಿಗೆ ಟಿಕೆಟ್ ಕೈತಪ್ಪಿದ್ದು, ಡಾ.ಬಸವರಾಜ ಕ್ಯಾವಟೂರಗೆ ನೀಡಲಾಗಿದೆ. ಅವರು ಉನ್ನತ ವಿದ್ಯಾವಂತ, ವಿಶೇಷವಾಗಿ ವೈದ್ಯರು, ಜನಾಂಗದ ಪ್ರಾಬಲ್ಯ ಹೊಂದಿದ್ದಾರೆ. ಹೀಗಾಗಿ ಚುನಾವಣೆಯಲ್ಲಿ ಅವರ ಗೆಲುವನ್ನು ನಿರೀಕ್ಷಿಸಬಹುದಾಗಿದೆ ಎಂದು ತಿಳಿಸಿದರು.ರೈಲ್ವೆ ಇಲಾಖೆ ಬಾಕಿ ಬಿಲ್ ಪಾವತಿಗೆ ಕಾರ್ಮಿಕರ ಒತ್ತಾಯ

ಕನ್ನಡಪ್ರಭ ವಾರ್ತೆ ಸಿಂಧನೂರು

ರೈಲ್ವೆ ಇಲಾಖೆಯು ಬಾಕಿ ಬಿಲ್ ರು.2.5 ಕೋಟಿ ತಕ್ಷಣ ಪಾವತಿಸಬೇಕು ಹಾಗೂ ಬಾಕಿ ಕೆಲಸ ಮಾಡಲು ಅನುಮತಿ ಕೊಡಬೇಕು ಎಂದು ರೈಲ್ವೆ ಸ್ಟೇಷನ್ ಕಟ್ಟಡ ನಿರ್ಮಾಣ ಗುತ್ತಿಗೆ ಪಡೆದ ಗುತ್ತಿಗೆದಾರರು, ಸಿಬ್ಬಂದಿ, ಕಾರ್ಮಿಕರು ಒತ್ತಾಯಿಸಿದರು.

ಗುರುವಾರ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ರೈಲ್ವೆ ಸ್ಟೇಷನ್‌ಗೆ ಭೇಟಿ ನೀಡಿ ಕಾಮಗಾರಿಗಳನ್ನು ವೀಕ್ಷಿಸಿದ ಸಂದರ್ಭದಲ್ಲಿ ಗುತ್ತಿಗೆ ಕಂಪನಿಯ ಸೈಟ್ ಮ್ಯಾನೇಜರ್ ಕೃಷ್ಣ ಪ್ಲಾಟ್ ಫಾರಂ ಫಿನಿಶಿಂಗ್, ಅಪ್ರೋಚ್ ರೋಡ್, ಸರ್ಕೂಲೇಟಿಂಗ್ ಏರಿಯಾ ಕಾಂಕ್ರೀಟ್, ಫಾರ್ಕಿಂಗ್ ಏರಿಯಾ, ಕಂಪೌಂಡ್ ವಾಲ್, ಡ್ರೈನ್, ಗಾರ್ಡನ್, ವಾಟರ್ ಸಪ್ಲೆ ಹೀಗೆ ಅನೇಕ ಕೆಲಸಗಳು ಬಾಕಿಯಿವೆ ಎಂದು ತಿಳಿಸಿದರು.

ರೈಲ್ವೆ ಇಲಾಖೆಯ ಸಿಇ ವೆಂಕಟೇಶ್ವರರಾವ್, ಡೆಪ್ಯೂಟಿ ಸಿಇ ದನೀಶ್ ಖಾನ್, ಐಓಡಬ್ಲೂ ಪ್ರವೀಣ್ ಅವರು ಬಾಕಿ ಬಿಲ್ ಪಾವತಿ ಮಾಡದೆ, ಇತರೆ ಕೆಲಸಗಳನ್ನು ಪ್ರಾರಂಭಿಸಲು ಅನುಮತಿ ನೀಡದೆ ಸತಾಯಿಸುತ್ತಿದ್ದಾರೆ. ಇದರಿಂದ ಕಟ್ಟಡ ನಿರ್ಮಾಣ ಸಾಮಗ್ರಿಗಳ ಪೂರೈಕೆದಾರರಿಗೆ, ಯಂತ್ರೋಪಕರಣಗಳಿಗೆ ಹಾಗೂ ಕಾರ್ಮಿಕರಿಗೆ ಕೂಲಿ ಕೊಡಲು ತೊಂದರೆಯಾಗುತ್ತಿದೆ. ಆದ್ದರಿಂದ ಕೂಡಲೇ ರೈಲ್ವೆ ಇಲಾಖೆ ಬಾಕಿ ಬಿಲ್ ರು.2.5 ಕೋಟಿ ಪಾವತಿ ಮಾಡಬೇಕು ಎಂದು ಗಮನ ಸೆಳೆದರು.

ನಂತರ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಕೆಲಸಗಳನ್ನು ಮಾಡಲು ಅನುಮತಿ ನೀಡುವಂತೆ ಸಿಇ, ಡೆಪ್ಯೂಟಿ ಸಿಇ ಅವರೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಗುತ್ತಿಗೆ ಕಂಪನಿಯ ಸೈಟ್ ಎಂಜನಿಯರ್ ಪೈಜುಲ್, ಮುಖಂಡರಾದ ಗಂಗಣ್ಣ ಡಿಶ್, ವೀರರಾಜು, ವೀರೇಶ ಅಂಗಡಿ ಸೇರಿದಂತೆ ಕಾರ್ಮಿಕರು ಇದ್ದರು.

Share this article