ದತ್ತುಗ್ರಾಮದಡಿ ಮೋರನಾಳ ಸಂಪೂರ್ಣ ಅಭಿವೃದ್ಧಿ: ರಾಜಶೇಖರ ಹಿಟ್ನಾಳ

KannadaprabhaNewsNetwork |  
Published : Dec 01, 2024, 01:32 AM IST
30ಕೆಪಿಎಲ್27 ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗೆ ಸಂಸದ ರಾಜಶೇಖರ ಹಿಟ್ನಾಳ ಅಡಿಗಲ್ಲು ನೆರವೇರಿಸಿದರು. | Kannada Prabha

ಸಾರಾಂಶ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಯೋಜನೆ (ನರೇಗಾ)ಯಡಿ ಮೋರನಹಳ್ಳಿ ಗ್ರಾಮ ದತ್ತು ಪಡೆಯಲಾಗಿದ್ದು, ಶನಿವಾರ ಸಂಸದ ರಾಜಶೇಖರ ಹಿಟ್ನಾಳ ಗ್ರಾಮದ ಸಮಗ್ರ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು.

ಕೊಪ್ಪಳ: ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆಯಡಿ ಮೋರನಾಳ ಗ್ರಾಮವನ್ನು ದತ್ತು ಪಡೆಯಲಾಗಿದ್ದು, ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದ್ದಾರೆ.

ತಾಲೂಕಿನ ಮೋರನಹಳ್ಳಿ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ, ಜಿಲ್ಲಾ ಪಂಚಾಯಿತಿ, ತಾಪಂ, ಬೆಟಗೇರಿ ಗ್ರಾಪಂ ವತಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಯೋಜನೆ (ನರೇಗಾ)ಯಡಿ ಮೋರನಹಳ್ಳಿ ಗ್ರಾಮದ ಅಡಿಗಲ್ಲು ಸಮಾರಂಭದಲ್ಲಿ ಅವರು ಮಾತನಾಡಿದರು.

ನರೇಗಾ ಯೋಜನೆಯ ಮೂಲಕ ಗ್ರಾಮೀಣ ಭಾಗದ ಜನರ ಆರ್ಥಿಕ ಅಭಿವೃದ್ಧಿ ಜತೆಗೆ ಸಮುದಾಯದ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಗ್ರಾಮೀಣ ಭಾಗಕ್ಕೆ ಇನ್ನು ಹೆಚ್ಚು ಒತ್ತು ನೀಡಿ ಲೋಕಸಭಾ ವ್ಯಾಪ್ತಿಯ ಎರಡು ಗ್ರಾಮಗಳ ಸಮಗ್ರ ಅಭಿವೃದ್ಧಿಗೊಳಿಸಿ ಮಾದರಿ ಗ್ರಾಮವನ್ನು ಮಾಡುವ ಉದ್ದೇಶದಿಂದ ಮೋರನಹಳ್ಳಿ ಗ್ರಾಮವನ್ನು ಸಮಗ್ರ ಅಭಿವೃದ್ಧಿಗೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾಮಗಾರಿಗಳನ್ನು ನಡೆಸಿ, ಗ್ರಾಮವನ್ನು ಮಾದರಿಯಾಗಿ ಮಾಡಲಾಗುವುದು. ಈ ದತ್ತು ಗ್ರಾಮ ಯೋಜನೆ ಯಶಸ್ವಿಯಾದಲ್ಲಿ ಪ್ರತಿ ವಿಧಾನಸಭೆ ಕ್ಷೇತ್ರ ೫ ಗ್ರಾಮಗಳನ್ನು ದತ್ತು ಪಡೆದು, ಪ್ರತಿ ವರ್ಷ ಅಭಿವೃದ್ಧಿಪಡಿಸುವ ಯೋಚನೆ ಇದೆ. ಕಾರಣ ಗ್ರಾಮಸ್ಥರು ಈ ಯೋಜನೆಗೆ ಸಹಕರಿಸಿ ಎಂದರು.

ಜಿಪಂ ಯೋಜನಾ ನಿರ್ದೇಶಕ ಪ್ರಕಾಶ ವಡ್ಡರ ಮಾತನಾಡಿ, ಭಾರತ ಹಳ್ಳಿಗಳ ದೇಶ. ಅವುಗಳ ಅಭಿವೃದ್ಧಿಯಲ್ಲಿ ನರೇಗಾ ಯೋಜನೆ ಬಹು ಪ್ರಮುಖ ಪಾತ್ರ ವಹಿಸಿದೆ. ಕಳೆದ ತಿಂಗಳು ನಡೆದ ದಿಶಾ ಸಮಿತಿ ಸಭೆಯ ಆಶಯದಂತೆ ಎರಡು ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ನರೇಗಾ, ಕೃಷಿ, ತೋಟಗಾರಿಕೆ, ಅರಣ್ಯ ಹಾಗೂ ಸಂಸದರ, ಶಾಸಕರ ಅನುದಾನದಲ್ಲಿ ಅಭಿವೃದ್ಧಿ ಕೈಕೊಳ್ಳಲಾಗುವುದು. ಮೋರನಹಳ್ಳಿ ದತ್ತು ಗ್ರಾಮವಾಗಿ ಸ್ವೀಕರಿಸಿ ಸಮಗ್ರ ಅಭಿವೃದ್ಧಿ ಮಾಡಲಾಗುವುದು. ಒಟ್ಟು ೫.೧೩ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕೈಕೊಳ್ಳಲಾಗುವುದು. ವೈಯಕ್ತಿಕ, ಸಮುದಾಯ ಕಾಮಗಾರಿ ಕೈಕೊಳ್ಳಲಾಗುವುದು ಎಂದರು.

ಜಿಲ್ಲೆಯಲ್ಲಿ ಒಟ್ಟು ೨ ಲಕ್ಷ ೧೯ ಸಾವಿರ ಕುಟುಂಬಗಳು ನರೇಗಾ ಯೋಜನೆಯ ಲಾಭ ಪಡೆಯುತ್ತಿದ್ದು, ಅದರಡಿ ೩ ಲಕ್ಷ ೯ ಸಾವಿರ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ನರೇಗಾ ಯೋಜನೆಯಡಿ ೨೭ ಸಾವಿರ ಸಮುದಾಯ ಕಾಮಗಾರಿ ಹಾಗೂ ೩೭ ಸಾವಿರ ವೈಯಕ್ತಿಕ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.

ಸಿದ್ದೇಶ್ವರ ಮಠದ ಶ್ರೀ ಮರುಳಾರಾದ್ಯ ಶಿವಾಚಾರ್ಯರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಮಾಜಿ ಉಪನಿರ್ದೇಶಕ ಮಲ್ಲೇಶಪ್ಪ ಹೊರಪೇಟಿ ಮಾತನಾಡಿದರು.

ತಹಸೀಲ್ದಾರ್‌ ವಿಠ್ಠಲ ಚೌಗಲೆ, ತಾಪಂ ಇಒ ದುಂಡೇಶ ತುರಾದಿ, ಬಿಇಒ ಶಂಕರಯ್ಯ, ದಿಶಾ ಸಮಿತಿಯ ದೊಡ್ಡಬಸನಗೌಡ ಬಯ್ಯಾಪುರ, ಸರಸ್ವತಿ, ಗ್ರಾಪಂ ಅಧ್ಯಕ್ಷ ದುರುಗಪ್ಪ ಭಜಂತ್ರಿ, ಪ್ರಮುಖರಾದ ವೆಂಕನಗೌಡ ಹಿರೇಗೌಡ, ಭರಮಪ್ಪ ನಗರ, ಗಾಳೆಪ್ಪ ಪೂಜಾರ, ಅಂದಪ್ಪ, ದೇವಪ್ಪ, ಭರಮಪ್ಪ, ರೋಹಿಣಿ, ಶರಣಪ್ಪ, ಯಂಕಣ್ಣ, ಲಲಿತಾ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!