ಹಾವೇರಿ: ಬೆಳೆ ಪರಿಹಾರ ಪಡೆಯಲು ರೈತರ ಹೆಸರಿನಲ್ಲಿರುವ ಸರ್ವೇ ನಂಬರ್ ಪ್ರಕಾರ ಜಮೀನುಗಳ ವಿಸ್ತೀರ್ಣದ ಎಲ್ಲ ದತ್ತಾಂಶವನ್ನು ಫ್ರೂಟ್ ಐಡಿಯಲ್ಲಿ (ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿಗಳ ಮಾಹಿತಿ ವ್ಯವಸ್ಥೆಯ ತಂತ್ರಾಂಶ) ದಾಖಲು ಮಾಡುವುದು ಕಡ್ಡಾಯವಾಗಿದೆ. ಬಾಕಿ ಉಳಿದಿರುವ ದತ್ತಾಂಶ ದಾಖಲಾತಿ ಮೂರು ದಿನಗಳ ಒಳಗಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಸೂಚನೆ ನೀಡಿದರು.
ಸ್ಥಳೀಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ರೈತರ ಬೆಳೆ ಮಾಹಿತಿ ಫ್ರೂಟ್ ಐಡಿಯಲ್ಲಿ ದಾಖಲಿಸಿರುವ ಪ್ರಗತಿ ಕುರಿತಂತೆ ವಿಡಿಯೋ ಸಂವಾದ ನಡೆಸಿದ ಅವರು, ಫ್ರೂಟ್ ಐಡಿಯಲ್ಲಿ ಒಬ್ಬ ರೈತನಿಗೆ ಒಂದು ಅಥವಾ ಒಂದಕ್ಕಿಂತ ಹೆಚ್ಚು ಸರ್ವೇ ನಂಬರಗಳು ಹಾಗೂ ಆಯಾ ಸರ್ವೇ ನಂಬರಿನ ಜಮೀನಿನ ವಿಸ್ತೀರ್ಣದ ಮಾಹಿತಿ ದಾಖಲಿಸಿದರೆ ಮಾತ್ರ ಪರಿಹಾರ ನೀಡಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲ ರೈತರು ತಮ್ಮ ಜಮೀನಿನ ಸರ್ವೇ ನಂಬರವಾರು ಜಮೀನಿನ ವಿಸ್ತೀರ್ಣ ಮಾಹಿತಿ ದಾಖಲಿಸಬೇಕು ಎಂದು ತಿಳಿಸಿದರು.ಕೆಲ ರೈತರು ಫ್ರೂಟ್ ಐಡಿ ಹೊಂದಿದ್ದರೂ ಹಲವು ಸರ್ವೇ ನಂಬರನಲ್ಲಿ ಜಮೀನ ಇದ್ದರೂ ಈ ಎಲ್ಲ ಸರ್ವೇ ನಂಬರಗಳ ಜಮೀನಗಳನ್ನು ದಾಖಲಿಸಿಲ್ಲ. ಕೇವಲ ಒಂದು, ಎರಡು ಸರ್ವೇ ನಂಬರಗಳ ಜಮೀನುಗಳ ವಿಸ್ತೀರ್ಣ ದಾಖಲಿಸಿದ್ದಾರೆ. ಕೆಲ ರೈತರು ಜಮೀನು ಹೊಂದಿದ್ದರೂ ಫ್ರೂಟ್ ಐಡಿ ಮಾಡಿಕೊಂಡಿಲ್ಲ. ಕಾರಣ ಜಮೀನಿನ ವಿಸ್ತೀರ್ಣ ದಾಖಲಿಸಲು ಸಾಧ್ಯವಾಗಿಲ್ಲ. ಇಂತಹ ರೈತರು ಸಮೀಪದ ರೈತ ಸಂಪರ್ಕ ಕೇಂದ್ರಗಳು,ಗ್ರಾಮ ಆಡಳಿತಾಧಿಕಾರಿಗಳ ಬಳಿ ತೆರಳಿ ಸರ್ವೇ ನಂಬರವಾರು ಮಾಹಿತಿ ನೀಡಿ ಫ್ರೂಟ್ ಐಡಿಯಲ್ಲಿ ದಾಖಲಿಸಲು ಮೂರು ದಿನಗಳ ಕಾಲಾವಕಾಶ ನೀಡಲಾಗಿದೆ. ಈವರೆಗೆ ಫ್ರೂಟ್ ಐಡಿಯಲ್ಲಿ ಒಂದಕ್ಕಿಂತ ಹೆಚ್ಚು ಸರ್ವೇ ನಂಬರ್ ಇದ್ದರೂ ಕೇವಲ ಒಂದೇ ಸರ್ವೇ ನಂಬರಿನ ಜಮೀನಿನ ವಿಸ್ತೀರ್ಣದ ಮಾಹಿತಿ ದಾಖಲಿಸಿದ ರೈತರು ಈ ಅವಕಾಶ ಬಳಸಿಕೊಂಡು ಉಳಿದ ಎಲ್ಲ ಸರ್ವೇ ನಂಬರಗಳ ಜಮೀನಿನ ವಿಸ್ತೀರ್ಣನ ಕುರಿತಂತೆ ವಿವರವನ್ನು ಫ್ರೂಟ್ ಐಡಿಯಲ್ಲಿ ದಾಖಲಿಸುವಂತೆ ತಿಳಿಸಿದರು. ಹಾಗೂ ಈವರೆಗೆ ಫ್ರೂಟ್ ಐಡಿ ಪಡೆಯದ ರೈತರು ಫ್ರೂಟ್ ಐಡಿ ಪಡೆದು ಮಾಹಿತಿ ನೀಡಲು ತಿಳಿಸಿದರು.
ಈಗಾಗಲೇ ಕಂದಾಯ ಸಚಿವರು ಹಾಗೂ ಆಯುಕ್ತರು ವಿಡಿಯೋ ಕಾನ್ಫರೆನ್ಸ್ ನಡೆಸಿ ಬರ ಪರಿಹಾರ ಹಣ ನೀಡಲು ಸರ್ಕಾರ ಸಿದ್ಧವಿದೆ. ಆದರೆ ಪರಿಹಾರ ಫ್ರೂಟ್ ತಂತ್ರಾಂಶದಲ್ಲಿ ಪೂರ್ಣ ಪ್ರಮಾಣದ ದತ್ತಾಂಶ ದಾಖಲಿಸಿಲ್ಲ. ಆದರೆ ಫ್ರೂಟ್ಸ್ ನಲ್ಲಿ ಮಾಹಿತಿ ದಾಖಲಿಸದಿದ್ದರೆ ಬರಪರಿಹಾರದಿಂದ ವಂಚಿತರಾಗುತ್ತಾರೆ ಎಂದು ತಿಳಿಸಿದ್ದಾರೆ. ಕಾರಣ ಯಾವ ರೈತರ ಬೆಳೆ ಮಾಹಿತಿ ಕೈಬಿಟ್ಟು ಹೋಗಬಾರದು. ಯಾರಿಗೂ ತೊಂದರೆಯಾಗಬಾರದು. ಈ ನಿಟ್ಟಿನಲ್ಲಿ ರೈತರು ನಿಖರವಾದ ಮಾಹಿತಿ ಅಧಿಕಾರಿಗಳಿಗೆ ನೀಡಬೇಕು ಎಂದು ತಿಳಿಸಿದ್ದಾರೆ.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ತೋಟಗಾರಿಕೆ ಉಪನಿರ್ದೇಶಕ ಪ್ರದೀಪ, ತಹಸೀಲ್ದಾರ್ ಆರ್.ಶಂಕರ್, ಉಪ ವಿಭಾಗಾಧಿಕಾರಿಗಳು ಹಾಗೂ ವಿವಿಧ ತಾಲೂಕುಗಳ ತಹಸೀಲ್ದಾರರು, ಕೃಷಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು, ಬರ ನಿರ್ವಹಣೆಗೆ ಹೋಬಳಿವಾರು ನೇಮಕಗೊಂಡ ನೋಡಲ್ ಅಧಿಕಾರಿಗಳು ಇದ್ದರು.
ಶೇ.೯೦ರಷ್ಟು ಗುರಿ:ಶನಿವಾರ, ಭಾನುವಾರ ಹಾಗೂ ಸೋಮವಾರದ ರಜಾ ದಿನಗಳನ್ನು ಬಳಸಿಕೊಳ್ಳದೆ ಈ ಮೂರು ದಿನಗಳು ಕೆಲಸಮಾಡಿ, ಬಾಕಿ ಇರುವ ಸರ್ವೇ ನಂಬರವಾರು ಜಮೀನಿನ ವಿಸ್ತೀರ್ಣವನ್ನು ಫ್ರೂಟ್ ಐಡಿಯಲ್ಲಿ ದಾಖಲಿಸುವ ಕಾರ್ಯ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಗಡುವು ನೀಡಿದರು. ಜಿಲ್ಲೆಯಲ್ಲಿ ಈವರೆಗೆ ಫ್ರೂಟ್ ಐಡಿಯಲ್ಲಿ ಶೇ. ೭೬ರಷ್ಟು ದತ್ತಾಂಶ ದಾಖಲೀಕರಿಸಲಾಗಿದೆ. ಕನಿಷ್ಟ ಶೇ.೯೦ರಷ್ಟು ರೈತರ ಜಮೀನಿನ ಪೂರ್ಣ ವಿಸ್ತೀರ್ಣವನ್ನು (ವಿವಿಧ ಸರ್ವೇ ನಂಬರವಾರು) ಮಾಹಿತಿಯನ್ನು ಫ್ರೂಟ್ ಐಡಿಯಲ್ಲಿ ದಾಖಲಿಸುವ ಕಾರ್ಯ ಸಂಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ತಾಕೀತು ಮಾಡಿದರು.