13ಕ್ಕೆ ಅಖಂಡ ಕರ್ನಾಟಕ ಬಂದ್‌

KannadaprabhaNewsNetwork |  
Published : Aug 06, 2026, 03:00 AM IST
ಕನ್ನಡ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ವಾಟಾಳ್ ನಾಗರಾಜ್‌ ಬೆಳಗಾವಿಯಲ್ಲಿ ಕನ್ನಡಪರ ಸಂಘಟನೆಗಳೊಂದಿಗೆ ಸಭೆ ನಡೆಸಿದರು | Kannada Prabha

ಸಾರಾಂಶ

ಕಾವೇರಿ, ಮಹದಾಯಿ, ಕಳಸಾ-ಬಂಡೂರಿ ಯೋಜನೆ, ಬೆಳಗಾವಿ ಗಡಿ ಸಮಸ್ಯೆ, ಉತ್ತರ ಕರ್ನಾಟಕದ ಅಭಿವೃದ್ಧಿ ಹಾಗೂ ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆ. 13ರಂದು ರಾಜ್ಯಾದ್ಯಂತ ಸಂಪೂರ್ಣ ಕರ್ನಾಟಕ ಬಂದ್ ಕರೆ ನೀಡಲಾಗಿದೆ ಎಂದು ಕನ್ನಡ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕಾವೇರಿ, ಮಹದಾಯಿ, ಕಳಸಾ-ಬಂಡೂರಿ ಯೋಜನೆ, ಬೆಳಗಾವಿ ಗಡಿ ಸಮಸ್ಯೆ, ಉತ್ತರ ಕರ್ನಾಟಕದ ಅಭಿವೃದ್ಧಿ ಹಾಗೂ ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆ. 13ರಂದು ರಾಜ್ಯಾದ್ಯಂತ ಸಂಪೂರ್ಣ ಕರ್ನಾಟಕ ಬಂದ್ ಕರೆ ನೀಡಲಾಗಿದೆ ಎಂದು ಕನ್ನಡ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಸಾಂಕೇತಿಕ ಬಂದ್ ಅಲ್ಲ. ಬೆಳಗ್ಗೆಯಿಂದ ಸಂಜೆಯವರೆಗೆ ಶಾಂತಿಯುತವಾಗಿ ಸಂಪೂರ್ಣ ಬಂದ್ ನಡೆಯಲಿದೆ. ಕನ್ನಡಪರ ಸಂಘಟನೆಗಳು, ವ್ಯಾಪಾರಿಗಳು, ಸಾರಿಗೆ ಸಂಘಟನೆಗಳು ಹಾಗೂ ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಬಂದ್‌ಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.ಬೆಳಗಾವಿ ಮತ್ತು ಗಡಿನಾಡಿನ ಸಮಸ್ಯೆಗಳು ಯಾವುದೇ ರಾಜಕೀಯ ಪಕ್ಷಗಳಿಗೆ ಬೇಕಾಗಿಲ್ಲ. ಬೆಳಗಾವಿಯಲ್ಲಿ ಕನ್ನಡ ಉಳಿದಿದ್ದರೆ ಅದಕ್ಕೆ ಕನ್ನಡಪರ ಸಂಘಟನೆಗಳ ನಿರಂತರ ಹೋರಾಟವೇ ಕಾರಣ. ಗಡಿ ವಿಚಾರದಲ್ಲಿ ಒಬ್ಬ ಶಾಸಕ, ಸಂಸದ ಅಥವಾ ವಿಧಾನ ಪರಿಷತ್ ಸದಸ್ಯರೂ ಬೀದಿಗಿಳಿದು ಹೋರಾಟ ನಡೆಸಿಲ್ಲ. ಬೆಳಗಾವಿ ಪರ ಗಟ್ಟಿಯಾಗಿ ಧ್ವನಿ ಎತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಬೆಳಗಾವಿಯಲ್ಲಿ ಕಾಟಾಚಾರಕ್ಕೆ ಅಧಿವೇಶನ ನಡೆಸಲಾಗುತ್ತಿದೆ. ಬೆಳಗಾವಿ ಜಿಲ್ಲೆಯ ಸಮಸ್ಯೆಗಳು, ಗಡಿ ವಿವಾದ ಹಾಗೂ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ವಿಶೇಷ ಚರ್ಚೆ ನಡೆಯುತ್ತಿಲ್ಲ. ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಸಮಸ್ಯೆಗಳ ಬಗ್ಗೆಯೂ ಸಮಗ್ರ ಚರ್ಚೆಯಾಗುತ್ತಿಲ್ಲ. ನಮ್ಮ ರಾಜಕಾರಣಿಗಳಿಗೆ ಕರ್ನಾಟಕ ಏಕೀಕರಣದ ಇತಿಹಾಸ ಮತ್ತು ಅದರ ಮಹತ್ವವೇ ಗೊತ್ತಿಲ್ಲ ಎಂದು ಟೀಕಿಸಿದರು.ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಶ್ವೇತಪತ್ರ ಬಿಡುಗಡೆ ಮಾಡಬೇಕು. ಅಖಂಡ ಕರ್ನಾಟಕ ನಮ್ಮದು ಎಂಬ ಭಾವನೆಯೊಂದಿಗೆ ಪ್ರತಿಯೊಂದು ಜಿಲ್ಲೆಯ ಸಮಸ್ಯೆಗೂ ಸರ್ಕಾರ ಸ್ಪಂದಿಸಬೇಕು. ನೀರಾವರಿ, ಶಿಕ್ಷಣ, ಉದ್ಯೋಗ, ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಪ್ರಾದೇಶಿಕ ಸಮತೋಲನದ ಆಧಾರದ ಮೇಲೆ ಯೋಜನೆಗಳನ್ನು ರೂಪಿಸಬೇಕು ಎಂದು ಆಗ್ರಹಿಸಿದರು.

ಬಳ್ಳಾರಿಯ ಭೂಗರ್ಭ ಸಂಪತ್ತನ್ನು ಲೂಟಿ ಮಾಡಲಾಗಿದೆ. ಅಕ್ರಮದಲ್ಲಿ ಭಾಗಿಯಾದವರೇ ಶಾಸಕರು ಮತ್ತು ಸಚಿವರಾಗುತ್ತಿರುವುದು ದುರಂತ. ರಾಜ್ಯದ ಸಂಪತ್ತನ್ನು ಲೂಟಿ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆ ಜಾರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ರಾಜಕೀಯ ಇಚ್ಛಾಶಕ್ತಿ ಇಲ್ಲ. ಚಿಕ್ಕ ರಾಜ್ಯವಾದ ಗೋವಾವನ್ನೇ ಎದುರಿಸಲು ಸಾಧ್ಯವಾಗುತ್ತಿಲ್ಲ. ರಾಜ್ಯದಿಂದ ಪ್ರಹ್ಲಾದ ಜೋಶಿ, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ ಮತ್ತು ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ನಾಲ್ವರು ಕೇಂದ್ರ ಸಚಿವರಿದ್ದರೂ ಯೋಜನೆ ಜಾರಿಯಾಗಿಲ್ಲ. ಅವರು ಹೇಳುವುದನ್ನೇ ನಾವು ಕೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿಕಾರಿದರು.ಕಾವೇರಿ ನೀರಿನ ವಿಚಾರದಲ್ಲಿಯೂ ಸರ್ಕಾರ ಗೊಂದಲದ ನಿಲುವು ತಳೆದಿದೆ. ಕಾವೇರಿ ವಿವಾದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವುದನ್ನು ಬಿಟ್ಟು ಕಬಿನಿಯಿಂದ ನೀರು ಬಿಟ್ಟಿದ್ದೇವೆ ಎಂದು ಹೇಳಿ ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ಕಾವೇರಿ ನೀರು ನಿರ್ವಹಣಾ ಸಮಿತಿ ಕುರಿತು ಸರ್ಕಾರ ಸ್ಪಷ್ಟ ನಿಲುವು ಪ್ರಕಟಿಸಬೇಕು ಎಂದರು.ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ವಿರೋಧ ಪಕ್ಷದವರಿಗೆ ರಾಜಕೀಯ ತಂತ್ರ ತೋರಿಸಿದಂತೆ ಕನ್ನಡಪರ ಸಂಘಟನೆಗಳಿಗೂ ತಂತ್ರ ಪ್ರಯೋಗಿಸಲು ಮುಂದಾಗಿದ್ದಾರೆ. ಬಂದ್ ಕೈಬಿಡುವಂತೆ ಸರ್ಕಾರ ಮನವಿ ಮಾಡುತ್ತಿದೆ. ಆದರೆ, ಯಾವುದೇ ಕಾರಣಕ್ಕೂ ಕರ್ನಾಟಕ ಬಂದ್ ಹಿಂಪಡೆಯುವುದಿಲ್ಲ. ಆ. 13ರಂದು ರಾಜ್ಯಾದ್ಯಂತ ಸಂಪೂರ್ಣ ಬಂದ್ ಯಶಸ್ವಿಯಾಗಲಿದೆ ಎಂದು ಸ್ಪಷ್ಟಪಡಿಸಿದರು.ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಕನ್ನಡಪರ ಗೊತ್ತುವಳಿಯನ್ನು ಅಂಗೀಕರಿಸುವಂತೆ ಹಲವು ತಿಂಗಳಿಂದ ಒತ್ತಾಯಿಸಲಾಗುತ್ತಿದೆ. ಆದರೂ ಪಾಲಿಕೆ ಯಾವುದೇ ಬದ್ಧತೆ ಪ್ರದರ್ಶಿಸುತ್ತಿಲ್ಲ. ಹಿಂದಿನ ಸಿದ್ದರಾಮಯ್ಯ ಸರ್ಕಾರವೂ ಕ್ರಮ ಕೈಗೊಂಡಿಲ್ಲ. ಈಗಿನ ಸರ್ಕಾರವೂ ಈ ವಿಚಾರದಲ್ಲಿ ಮೌನವಾಗಿದೆ ಎಂದು ಆರೋಪಿಸಿದರು.ಪಾಲಿಕೆ ಕೂಡಲೇ ಕರ್ನಾಟಕದ ಪರ ಗೊತ್ತುವಳಿಯನ್ನು ಅಂಗೀಕರಿಸಬೇಕು. ಇಲ್ಲದಿದ್ದರೆ ಬೆಳಗಾವಿ ಮಹಾನಗರ ಪಾಲಿಕೆಯನ್ನು ಸೂಪರ್‌ಸೀಡ್ ಮಾಡಬೇಕು. ಈ ಕುರಿತು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ನಾನೇ ಒತ್ತಾಯ ಮಾಡುತ್ತೇನೆ ಎಂದರು.ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳಲ್ಲಿ ಮೊದಲ ಆದ್ಯತೆ ನೀಡಬೇಕು. ಖಾಸಗಿ ಮತ್ತು ಸರ್ಕಾರಿ ವಲಯಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ನ್ಯಾಯಯುತ ಅವಕಾಶ ಕಲ್ಪಿಸಬೇಕು. ಕನ್ನಡ ಭಾಷೆ, ಗಡಿನಾಡು, ಜಲವಿವಾದಗಳು ಮತ್ತು ಉತ್ತರ ಕರ್ನಾಟಕದ ಅಭಿವೃದ್ಧಿಯ ವಿಚಾರದಲ್ಲಿ ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.ಈ ಎಲ್ಲ ಬೇಡಿಕೆಗಳ ಹಿನ್ನೆಲೆಯಲ್ಲಿ ಆ. 13 ರಂದು ಬೆಳಗ್ಗೆಯಿಂದ ಸಂಜೆಯವರೆಗೆ ಶಾಂತಿಯುತ ಹಾಗೂ ಸಂಪೂರ್ಣ ಕರ್ನಾಟಕ ಬಂದ್ ನಡೆಸಲಾಗುವುದು. ರಾಜ್ಯದ ಎಲ್ಲ ಕನ್ನಡಪರ ಸಂಘಟನೆಗಳು ಮತ್ತು ಸಾರ್ವಜನಿಕರು ಬಂದ್‌ಗೆ ಬೆಂಬಲ ನೀಡಬೇಕು ಎಂದು ವಾಟಾಳ್ ನಾಗರಾಜ್ ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಕನ್ನಡಪರ ಸಂಘಟನಟೆಗಳ ಮುಖಂಡರಾದ ಅಶೋಕ ಚಂದರಗಿ, ಮಹಾದೇವ ತಳವಾರ, ಮಹಾಂತೇಶ ರಣಗಟ್ಟಿಮಠ, ಬಲರಾಮ ಮಾಸೇನಟ್ಟಿ ಮೊದಲಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಡಿಪಿಒ ಹುದ್ದೆಗೆ ಇಬ್ಬರ ಕಾದಾಟ!
ಪತ್ರಕರ್ತರು ಜನಸಾಮಾನ್ಯರ ಧ್ವನಿ