ಕನ್ನಡಪ್ರಭ ವಾರ್ತೆ ಶಿವಮೊಗ್ಗ ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ರಾಷ್ಟ್ರೀಯ ಹೆದ್ದಾರಿ, ವರ್ತುಲ ರಸ್ತೆಗಳು, ಮೇಲ್ಸೇತುವೆ ನಿರ್ಮಾಣ, ರಸ್ತೆ ಅಗಲೀಕರಣ ಮುಂತಾದ ಕಾಮಗಾರಿಗೆ ಅಡ್ಡಿಯಾಗಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ಕಾಮಗಾರಿಗಳನ್ನು ಆರಂಭಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ತಾಕೀತು ಮಾಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ವಿವಿಧ ಯೋಜನೆಗಳ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಫಾರೆಸ್ಟ್ ಕ್ಲಿಯರೆನ್ಸ್, ಭೂಸ್ವಾಧೀನ ಹಾಗೂ ಯುಟಿಲಿಟಿ ಶಿಫ್ಟಿಂಗ್‍ಗಳ ಕುರಿತು ಪರಿಶೀಲಿಸಲು ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಕಾಮಗಾರಿಗಳನ್ನು ಆರಂಭಿಸಲು ತೊಡಕು ಉಂಟಾಗಿರುವ ಸ್ಥಳಗಳಲ್ಲಿನ ನಿವಾಸಿಗಳು ಅಥವಾ ಭೂ ಮಾಲೀಕರ ಸಭೆ ಕರೆದು ವಾಸ್ತವ ಸ್ಥಿತಿಗತಿಗಳನ್ನು ಮನವರಿಕೆ ಮಾಡಿಕೊಡಬೇಕು. ಇರುವ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಂಡ ನಂತರ ಭೂಮಾಲೀಕರಿಗೆ ಸರ್ಕಾರ ಈಗಾಗಲೇ ನಿಗಧಿಪಡಿಸಿದ ಪರಿಹಾರಧನವನ್ನು ನಿಯಮಾನುಸಾರ ನೀಡಿ, ಒಪ್ಪಿಗೆ ಪಡೆದು, ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಆರಂಭಿಸುವಂತೆ ಸೂಚನೆ ನೀಡಿದರು. ಕಾಮಗಾರಿಗಳು ಅನುಮೋದನೆಗೊಂಡು ಅನೇಕ ತಿಂಗಳುಗಳು ಉರುಳಿದರೂ ಭೂಸ್ವಾದೀನ ಪ್ರಕ್ರಿಯೆ ಆರಂಭಿಸಲು ಸರ್ವೇ ಕಾರ್ಯ ಆಗದಿರುವ ತಾಳಗುಪ್ಪ- ಹೊಸೂರು ರೈಲ್ವೆ ಮೇಲ್ಸೇತುವೆ ಕಾಮಗಾರಿ, ಚಿತ್ರದುರ್ಗ- ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ-13ರ ರಸ್ತೆ ಅಗಲೀಕರಣ ಹಾಗೂ ಶಿಕಾರಿಪುರ ಹೊರವರ್ತುಲ ರಸ್ತೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕೂಡಲೇ ಸರ್ವೇ ಕಾರ್ಯ ಕೈಗೊಂಡು ನವೆಂಬರ್ 1ರೊಳಗೆ ಸರ್ವೇ ಕಾರ್ಯ ಪೂರ್ಣಗೊಳಿಸಿ, ವರದಿ ನೀಡುವಂತೆ ತಿಳಿಸಿದರು. ಶಿವಮೊಗ್ಗ ನಗರದಲ್ಲಿ ಈಗಾಗಲೇ ಆರಂಭಿಸಲಾಗಿರುವ ವಿದ್ಯಾನಗರ– ಎಲ್.ಸಿ.46 ಮತ್ತು ಭದ್ರಾವತಿಯ ಕಡದಕಟ್ಟೆ ರೈಲ್ವೆ ಮೇಲ್ಸೇತುವೆ ಕಾಮಗಾರಿಗಳ ಅವಧಿ ಪೂರ್ಣಗೊಂಡಿದ್ದರೂ ಕಾಮಗಾರಿ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ. ಈ ಕಾಮಗಾರಿಗಳು ಪೂರ್ಣಗೊಳಿಸುವಲ್ಲಿ ಅನಗತ್ಯ ವಿಳಂಬವಾಗುತ್ತಿದೆ. ಇದರಿಂದಾಗಿ ಲಘು ಮತ್ತು ಭಾರೀ ವಾಹನಗಳ ಸಂಚಾರಕ್ಕೆ ತೀವ್ರ ತರಹದ ಅಡ್ಡಿಯಾಗುತ್ತಿದೆ. ಅಷ್ಟೇ ಅಲ್ಲ, ಆಕಸ್ಮಿಕ ಅಪಘಾತಗಳು ಸಂಭವಿಸುತ್ತವೆ. ಈ ಹಿನ್ನೆಲೆ ಕೂಡಲೇ ಈ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಬೇಕು. ನವೆಂಬರ್ ಅಂತ್ಯದೊಳಗೆ ಈ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಸಭೆಯಲ್ಲಿ ಶರಾವತಿ ಹಿನ್ನೀರಿನಲ್ಲಿ ಅಂಬಾರಗೋಡ್ಲು ಕಳಸವಳ್ಳಿಗೆ ಹೋಗಲು ಸೇತುವೆ ನಿರ್ಮಾಣ, ಸಾಗರ ಚತುಷ್ಪಥ ರಸ್ತೆ ಅಗಲೀಕರಣ, ತುಂಗಾನದಿ ಸೇತುವೆ ನಿರ್ಮಾಣ, ಬೆಕ್ಕೋಡಿ ಯೋಜನೆ ಕಾಮಗಾರಿ, ರಾಷ್ಟ್ರೀಯ ಹೆದ್ದಾರಿ-766ಸಿ ಬೈಂದೂರು- ನಾಗೋಡಿ ಸೆಕ್ಷನ್ ಕಾಮಗಾರಿ ಸೇರಿದಂತೆ ಜಿಲ್ಲೆಯಲ್ಲಿ ಮಂಜೂರಾಗಿ ಅನುಷ್ಠಾನದಲ್ಲಿರುವ ಅನೇಕ ಮಹತ್ವದ ಯೋಜನೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನಕೃಷ್ಣ, ಉಪವಿಭಾಗಾಧಿಕಾರಿ ಸತ್ಯನಾರಾಯಣ, ಪಲ್ಲವಿ ಸಾತೇನಹಳ್ಳಿ, ಪೀರ್‌ಪಾಶ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಭಿಯಂತರರು, ತಹಸೀಲ್ದಾರರು, ಕಂದಾಯ ಅಧಿಕಾರಿ-ಸಿಬ್ಬಂದಿ ಸಭೆಯಲ್ಲಿ ಹಾಜರಿದ್ದರು. - - - -13ಎಸ್‌ಎಂಜಿಕೆಪಿ01: ಫಾರೆಸ್ಟ್ ಕ್ಲಿಯರೆನ್ಸ್, ಭೂಸ್ವಾಧೀನ ಹಾಗೂ ಯುಟಿಲಿಟಿ ಶಿಫ್ಟಿಂಗ್‍ಗಳ ಕುರಿತು ಪರಿಶೀಲಿಸಲು ಏರ್ಪಡಿಸಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಮಾತನಾಡಿದರು.