ರಂಗೇನಹಳ್ಳಿ ಏತ ನೀರಾವರಿ ಯೋಜನೆ 2ನೇ ಹಂತ ಪೂರ್ಣಗೊಳಿಸಿ: ಎಚ್.ಟಿ.ಮಂಜು

KannadaprabhaNewsNetwork |  
Published : Oct 02, 2026, 01:45 AM IST
1ಕೆಎಂಎನ್ ಡಿ17 | Kannada Prabha

ಸಾರಾಂಶ

ರಂಗೇನಹಳ್ಳಿ ಏತ ನೀರಾವರಿ ಯೋಜನೆ ಪೂರ್ಣಗೊಳ್ಳಲು ಇನ್ನೂ 3.5 ಕಿ.ಮೀ ಕಾಮಗಾರಿ ಪೆಂಡಿಗ್ ಇದೆ. ಭೂ ಸಮಸ್ಯೆಯಿಂದ ಕಾಮಗಾರಿಗೆ ಅಡಚಣೆಯಾಗಿದೆ. ಸರ್ಕಾರಿ ಗೋಮಾಳದಲ್ಲಿ ಕೆಲವರು ತೆಂಗು ಮತ್ತಿತರ ಬೆಳೆಗಳನ್ನು ಮಾಡಿ ಅನುಭವದಲ್ಲಿದ್ದಾರೆ. ಇದರಿಂದ ಭೂ ಸಮಸ್ಯೆ ಪರಿಹಾರವಾಗಿಲ್ಲ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ರಂಗೇನಹಳ್ಳಿ ಏತ ನೀರಾವರಿ ಯೋಜನೆ 2ನೇ ಹಂತದ ಕಾಮಗಾರಿಗೆ ಇರುವ ಸಮಸ್ಯೆಯನ್ನು ಪರಿಹರಿಸಿ ಅಕ್ಕಿಹೆಬ್ಬಾಳು ಹೋಬಳಿಯ 11 ಕೆರೆಗಳನ್ನು ತುಂಬಿಸುವಂತೆ ಶಾಸಕ ಎಚ್.ಟಿ.ಮಂಜು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣದ ಮಿನಿ ವಿಧಾನಸೌಧದ ಆವರಣದ ಕಂದಾಯ ಇಲಾಖೆ ಸಭಾಂಗಣದಲ್ಲಿ ಸಾರ್ವಜನಿಕರ ಕುಂದುಕೊರತೆ ಸಭೆ ನಡೆಸಿ ಮಾತನಾಡಿ, 22.05 ಕೋಟಿ ರು. ಅಂದಾಜು ವೆಚ್ಚದ ಯೋಜನೆ ಪೂರ್ಣಗೊಳ್ಳದೆ ಹೋಬಳಿ ವ್ಯಾಪ್ತಿ ಕೆರೆಗಳು ನೀರಿಲ್ಲದೆ ಬಣಗುಡುತ್ತಿವೆ ಎಂದರು.

ಕೆರೆ ಬಯಲಿನ ಹಲವು ರೈತರು ಕುಂದುಕೊರತೆ ಪರಿಶೀಲನೆ ಸಭೆಗೆ ಆಗಮಿಸಿ ನೀರಿಗಾಗಿ ಆಗ್ರಹಿಸಿದರು. ಯೋಜನೆ ಪೂರ್ಣಗೊಳ್ಳಲು ಇನ್ನೂ 3.5 ಕಿ.ಮೀ ಕಾಮಗಾರಿ ಪೆಂಡಿಗ್ ಇದೆ. ಭೂ ಸಮಸ್ಯೆಯಿಂದ ಕಾಮಗಾರಿಗೆ ಅಡಚಣೆಯಾಗಿದೆ. ಸರ್ಕಾರಿ ಗೋಮಾಳದಲ್ಲಿ ಕೆಲವರು ತೆಂಗು ಮತ್ತಿತರ ಬೆಳೆಗಳನ್ನು ಮಾಡಿ ಅನುಭವದಲ್ಲಿದ್ದಾರೆ. ಇದರಿಂದ ಭೂ ಸಮಸ್ಯೆ ಪರಿಹಾರವಾಗಿಲ್ಲ ಎನ್ನುವ ಅಂಶವನ್ನು ಸಭೆಯಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು ಶಾಸಕರ ಗಮನಕ್ಕೆ ತಂದರು.

ಕಾಮಗಾರಿ ನಡೆಯಬೇಕಾಗಿರುವ ಜಾಗ ಸರ್ಕಾರಿ ಗೋಮಾಳವಾಗಿದ್ದರೆ ಪೊಲೀಸರ ರಕ್ಷಣೆ ಪಡೆದು ಕಾಮಗಾರಿ ಆರಂಭಿಸಿ ಖಾಸಗಿ ಸ್ವತ್ತಾಗಿದ್ದರೆ ಸರ್ವೇ ಇಲಾಖೆ ಮೂಲಕ ಅಳತೆ ಮಾಡಿಸಿ ನಿಯಮಾನುಸಾರ 11 ಇ-ಸ್ಕೆಚ್ ಮಾಡಿಸಿ ರೈತರಿಗೆ ಸೂಕ್ತ ಪರಿಹಾರ ನೀಡಿ. 11 ಕೆರೆಗಳ ಜೊತೆಗೆ ಯೋಜನಾ ವ್ಯಾಪ್ತಿಯಿಂದ ಹೊರಗಿರುವ ಹಂಗರಹಳ್ಳಿ ಮತ್ತು ದುಡುಕನಹಳ್ಳಿ ಕೆರೆಗಳನ್ನು ಸೇರಿಸಿಕೊಂಡು ಒಟ್ಟು 13 ಕೆರೆಗಳಿಗೂ ನೀರು ತುಂಬಿಸುವಂತೆ ಶಾಸಕರು ಎಂಜಿನಿಯರುಗಳಿಗೆ ಸೂಚಿಸಿದರು.

ಕಂದಾಯ ಮತ್ತು ಸರ್ವೇ ಇಲಾಖೆಗಳು ಸಂಯುಕ್ತಯಾಗಿ ಯೋಜಿಸಿ ತಾಲೂಕಿನ ಕೆರೆಗಳ ಸರ್ವೇ ಮಾಡಿ ಕೆರೆ ಒತ್ತುವರಿ ತೆರವುಗೊಳಿಸಬೇಕು. ತಾಲೂಕಿನ ನಾಟನಹಳ್ಳಿ ಕೆರೆ ಒತ್ತುವರಿಗೆ ಸಂಬಂಧಿಸಿದಂತೆ ಸರ್ವೇ ಕಾರ್ಯ ಆಗಿದೆ. ಒತ್ತುವರಿ ಪ್ರದೇಶವನ್ನು ಗುರುತಿಸಲಾಗಿದೆ. ಆದರೆ, ಅಧಿಕಾರಿಗಳು ಇದುವರೆಗೂ ಒತ್ತುವರಿ ತೆರವಿಗೆ ಮುಂದಾಗಿಲ್ಲ ಎಂದರು.

ತಾಲೂಕು ಆಡಳಿತ ಕೆರೆಗಳ ಸಂರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು. ಕಿಕ್ಕೇರಿ ಹೋಬಳಿಯ ಮಾದಾಪುರ ನಾಲೆ ಬಳಿ ರೈತರು ಬಂಡಿದಾರಿ ಬಿಡಿಸಿಕೊಡಲು ಸತತ ಮನವಿ ಮಾಡುತ್ತಿದ್ದರೂ ದಾರಿ ಬಿಡಿಸಿಲ್ಲ. ರೈತರ ವಿಚಾರದಲ್ಲಿ ತಾಲೂಕು ಆಡಳಿತ ಮಂದಗತಿಯ ವರ್ತನೆ ಸರಿಯಲ್ಲ ಎಂದರು.

ಜಮೀನು ಹದ್ದುಬಸ್ತು ಮಾಡಿಸಿಕೊಳ್ಳಲು ರೈತರು ನಿಯಮಾನುಸಾರ ಹಣ ಪಾವತಿಸಿ ಅರ್ಜಿ ಸಲ್ಲಿಸಿದ್ದಾರೆ. ರೈತರ ಅರ್ಜಿ ಸ್ವೀಕಾರವಾಗಿದ್ದರೂ ತಾಂತ್ರಿಕ ಸಮಸ್ಯೆಗಳನ್ನು ಮುಂದಿಟ್ಟು ಹದ್ದುಬಸ್ತು ಮಾಡಲು ಅಗತ್ಯ ಸರ್ವೆಯರುಗಳನ್ನು ಅಲಾಟ್ ಮಾಡುತ್ತಿಲ್ಲ. ಇದರಿಂದ ತಮ್ಮ ಜಮೀನು ಹದ್ದುಬಸ್ತು ಮಾಡಿಸಿಕೊಳ್ಳಲು ರೈತರು ಮೂರ್‍ನಾಲ್ಕು ತಿಂಗಳಿನಿಂದ ಕಾಯುತ್ತಿದ್ದಾರೆ ಎಂದರು.

ಸರ್ಕರಿ ಕಚೇರಿಯಲ್ಲಿನ ಆನ್ ಲೈನ್ ಸಮಸ್ಯೆ ಮೂರ್‍ನಾಲ್ಕ ತಿಂಗಳು ಕಳೆದರೂ ಸರಿಪಡಿಸಿಕೊಳ್ಳಲಾಗದ ಭೂ ಮಾಪನ ಇಲಾಖೆ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ತರಾಟೆಗೆ ತೆಗೆದುಕೊಂಡ ಶಾಸಕ ಎಚ್.ಟಿ.ಮಂಜು ಸ್ಥಳಲದಲ್ಲಿಯೇ ದೂರವಾಣಿ ಮೂಲಕ ಮೇಲಾಧಿಕಾರಿಗಳನ್ನು ಸಂಪರ್ಕಿಸಿ ಒಂದೆರಡು ದಿನಗಳಲ್ಲಿಯೇ ಆನ್ ಲೈನ್ ಸಮಸ್ಯೆ ಸರಿಪಡಿಸಿ ರೈತರ ಜಮೀನು ಹದ್ದುಬಸ್ತು ಪ್ರಕ್ರಿಯೆ ಸಮಸ್ಯೆ ಪರಿಹರಿಸುವಂತೆ ಸೂಚಿಸಿದರು.

ಪಟ್ಟಣ ವ್ಯಾಪ್ತಿ ಹಾದು ಹೋಗಿರುವ ಹೇಮಾವತಿ ವಿತರಣಾ ನಾಲೆಗಳನ್ನು ಕೆಲವು ಬಲಾಢ್ಯರು ಮುಚ್ಚಿ ನಿವೇಶನಗಳನ್ನಾಗಿ ಮಾಡಿಕೊಳ್ಳುತ್ತಿರುವ ವಿಷಯ ಈಗಾಗಲೇ ಬೆಳಕಿಗೆ ಬಂದಿದೆ. ನೀರಾವರಿ ಇಲಾಖೆ ಅಧಿಕಾರಿಗಳು ನಾಲೆಗಳ ಅಳತೆ ಮಾಡಿ ಎರಡೂ ಬದಿಗಳಲ್ಲಿರುವ ಸರ್ವೀಸ್ ರಸ್ತೆ ಗುರುತಿಸಿಕೊಂಡು ಒತ್ತುವರಿದಾರರನ್ನು ತೆರವುಗೊಳಿಸಲು ಕ್ರಮ ವಹಿಸುವಂತೆ ಸೂಚಿಸಿದರು.

ರೈತರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಿ ಕೆಲಸ ಮಾಡುವಂತೆ ಸೂಚಿಸಿದರು. ಸಭೆಯಲ್ಲಿ ತಹಸೀಲ್ದಾರ್ ಶ್ರೇಯಸ್, ಸರ್ವೇ ಅಧಿಕಾರಿ ಲಲ್ಲೂ ಪ್ರಸಾದ್, ಉಪ ತಹಸೀಲ್ದಾರ್ ಅಸ್ಲಂಭಾಷ, ನೀರಾವರಿ ಇಲಾಖೆ ಹಳೇ ಮೈಸೂರು ವಿಭಾಗದ ಎ.ಇ.ಇ ಅಶೋಕ್ ಸೇರಿದಂತೆ ಆರ್.ಐ ಗಳು ಮತ್ತು ಗ್ರಾಮ ಆಡಳಿತಾಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯಗೊಳ್ಳಬೇಕು: ಕಾವೇರಿ
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಕ್ರೀಡಾಕೂಟ..!