ಕಾಲಮಿತಿಯೊಳಗೆ ಬೆಳೆ ಸಮೀಕ್ಷೆ ಪೂರ್ಣಗೊಳಿಸಿ: ತಹಸೀಲ್ದಾರ್‌ ಶರಣಮ್ಮ ಸೂಚನೆ

KannadaprabhaNewsNetwork |  
Published : Jul 11, 2025, 11:48 PM IST
ಹಾವೇರಿಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಬೆಳೆ ಸಮೀಕ್ಷೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಹಸೀಲ್ದಾರ್ ಶರಣಮ್ಮ ಅವರಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಯಾವ ಜಮೀನಿನಲ್ಲಿ ಯಾವ ಬೆಳೆ ಇದೆ ಆ ಬೆಳೆಯನ್ನೇ ನಮೂದಿಸಿ ಫೋಟೊ ತೆಗೆದು ಅಪ್‌ಲೋಡ್ ಮಾಡಬೇಕು. ಬೋರ್‌ವೆಲ್ ಇದ್ದರೆ ಇದೆ ಎಂದು, ಬೋರ್‌ವೆಲ್ ಇಲ್ಲಾಂದ್ರೆ ಇಲ್ಲವೆಂದು ನಮೂದು ಮಾಡಬೇಕು ಎಂದು ತಹಸೀಲ್ದಾರ್ ಶರಣಮ್ಮ ಕೆ. ತಿಳಿಸಿದರು.

ಹಾವೇರಿ: ಪೂರ್ವ ಮುಂಗಾರು ಹಂಗಾಮಿನ ರೈತರ ಹಾಗೂ ಪಿಆರ್‌ಗಳ ಬೆಳೆ ಸಮೀಕ್ಷೆ ಆ್ಯಪ್ ಈಗಾಗಲೇ ಬಿಡುಗಡೆಯಾಗಿದ್ದು, ತಾಲೂಕಿನ ಎಲ್ಲ ಖಾಸಗಿ ನಿವಾಸಿಗಳು(ಪಿಆರ್) ನಿಗದಿತ ಕಾಲಮಿತಿಯೊಳಗೆ ಬೆಳೆ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ತಹಸೀಲ್ದಾರ್ ಶರಣಮ್ಮ ಕೆ. ತಿಳಿಸಿದರು.ನಗರದ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಖಾಸಗಿ ನಿವಾಸಿಗಳ(ಪಿಆರ್) ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.ಖಾಸಗಿ ನಿವಾಸಿಗಳು ಬೆಳೆ ಸಮೀಕ್ಷೆ ಕಾರ್ಯಕ್ಕೆ ರೈತರ ಜಮೀನುಗಳಿಗೆ ತೆರಳಿದಾಗ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವುದು ಇಲಾಖೆ ಗಮನದಲ್ಲಿದೆ. ಇಂತಹ ಎಲ್ಲ ತಾಂತ್ರಿಕ ಸಮಸ್ಯೆಗಳನ್ನು ಮೆಟ್ಟಿ ನಿಂತು ಬೆಳೆ ಸಮೀಕ್ಷೆ ಕಾರ್ಯವನ್ನು ನಿಗದಿತ ಅವಧಿಯೊಳಗೆ ಮಾಡಿ ಪೂರ್ಣಗೊಳಿಸಬೇಕು. ಕೆಲಸವನ್ನು ಶ್ರದ್ಧೆಯಿಂದ ಮತ್ತು ಆಸಕ್ತಿ ವಹಿಸಿ ಮಾಡಿದರೆ ಬಹಳ ಬೇಗ ಯಶಸ್ವಿಯಾಗಲಿಕ್ಕೆ ಸಾಧ್ಯವಾಗಲಿದೆ ಎಂದರು.ಯಾವ ಜಮೀನಿನಲ್ಲಿ ಯಾವ ಬೆಳೆ ಇದೆ ಆ ಬೆಳೆಯನ್ನೇ ನಮೂದಿಸಿ ಫೋಟೊ ತೆಗೆದು ಅಪ್‌ಲೋಡ್ ಮಾಡಬೇಕು. ಬೋರ್‌ವೆಲ್ ಇದ್ದರೆ ಇದೆ ಎಂದು, ಬೋರ್‌ವೆಲ್ ಇಲ್ಲಾಂದ್ರೆ ಇಲ್ಲವೆಂದು ನಮೂದು ಮಾಡಬೇಕು. ಪಿಆರ್‌ಗಳು ಯಾವ ಒತ್ತಡಗಳಿಗೂ ಮಣಿಯಬಾರದು. ಇದರಿಂದ ರೈತರಿಗೆ ಬೆಳೆವಿಮೆ, ಬೆಳೆ ನಷ್ಟ ಪರಿಹಾರ, ಪಹಣಿಯಲ್ಲಿ ಬೆಳೆ ವಿವರ ದಾಖಲಾಗುವಿಕೆ ಹಾಗೂ ಇನ್ನಿತರ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಅನುಕೂಲವಾಗಲಿದೆ. ಹಾಗಾಗಿ ಆದಷ್ಟು ಶೀಘ್ರದಲ್ಲಿ ಬೆಳೆ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಬೇಕೆಂದು ತಿಳಿಸಿದರು.ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ ಬಿ.ಎಚ್. ಅವರು, ಯೂರಿಯಾ ರಸಗೊಬ್ಬರದ ಅತಿಯಾದ ಬಳಕೆಯಿಂದಾಗುವ ದುಷ್ಪರಿಣಾಮ ಕುರಿತು ಮಾಹಿತಿ ನೀಡಿ, ಎಲ್ಲದಕ್ಕೂ ಯೂರಿಯಾ ಒಂದೇ ಪರಿಹಾರವಲ್ಲ. ನಿಗದಿತ ಪ್ರಮಾಣದಲ್ಲಿ ರಸಗೊಬ್ಬರ ಬಳಕೆ ಮಾಡಬೇಕು. ಅತಿಹೆಚ್ಚು ಸಾವಯವ ಗೊಬ್ಬರ ಹಾಗೂ ಜೈವಿಕ ಗೊಬ್ಬರ ಬಳಕೆ ಮಾಡಬೇಕು. ಪ್ರತಿವರ್ಷ ಬೆಳೆಗಳನ್ನು ರೋಟೇಶನ್ ಮಾದರಿಯಲ್ಲಿ ಬೆಳೆಯಬೇಕು ಎಂದರು.ಈ ವೇಳೆ ಕರ್ಜಗಿ ರೈತ ಸಂಪರ್ಕ ಕೇಂದ್ರದ ಅಕಾರಿ ನಾಗರಾಜ ಅರ್ಕಸಾಲಿ, ಹಾವೇರಿ ಆರ್‌ಎಸ್‌ಕೆ ಅಕಾರಿ ಬಸನಗೌಡ ಪಾಟೀಲ ಸೇರಿದಂತೆ ಮೂರು ಹೋಬಳಿ ಆತ್ಮ ಅಧಿಕಾರಿಗಳು ಹಾಗೂ ತಾಲೂಕಿನ ಖಾಸಗಿ ನಿವಾಸಿಗಳು(ಪಿಆರ್) ಇದ್ದರು.

ಮಾಸಿಕ ಗೌರವಧನ ನೀಡಲು ಆಗ್ರಹ

ಕೃಷಿ ಇಲಾಖೆಯ ಬೆಳೆ ಸಮೀಕ್ಷಾದಾರರನ್ನು ಕಾಯಂಗೊಳಿಸಬೇಕು. ಮಾಸಿಕ ಗೌರವಧನ ನೀಡಬೇಕು. ಗುರುತಿನ ಚೀಟಿ, ಸೇವಾಭದ್ರತೆ, ಜೀವ ವಿಮೆ ಸೌಲಭ್ಯ ಕಲ್ಪಿಸಬೇಕು. ಮುಂಗಾರಿನಲ್ಲಿ ಶೂ, ರೇನ್‌ಕೋಟ್, ಹಿಂಗಾರಿನಲ್ಲಿ ಟೋಪಿ, ನೀರಿನ ಬಾಟಲ್ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಬೆಳೆ ಸಮೀಕ್ಷಾದಾರರ ಸಂಘ ಜಿಲ್ಲಾ ಸಮಿತಿ ಪದಾಧಿಕಾರಿಗಳು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ರಮೇಶ ಮಡ್ಲೂರ, ಸಮೀಕ್ಷಾಗಾರರಾದ ಕನಕಪ್ಪ ದಾಸಣ್ಣನವರ, ರಾಮನಗೌಡ ಲೆಕ್ಕನಗೌಡ್ರ, ಶಿವರಾಜ ಚಾಕಲಬ್ಬಿ, ಲೋಕೇಶ ಯತ್ತಿನಹಳ್ಳಿ, ರಾಘವೇಂದ್ರ ಸೇರಿದಂತೆ ವಿವಿಧ ಗ್ರಾಮಗಳ ಬೆಳೆ ಸಮೀಕ್ಷಾಗಾರರು ಪಾಲ್ಗೊಂಡಿದ್ದರು.

PREV