ಗಣೇಶೋತ್ಸವದೊಳಗೆ ಫ್ಲೈಓವರ್‌ ಕಾಮಗಾರಿ ಪೂರ್ಣಗೊಳಿಸಿ

KannadaprabhaNewsNetwork |  
Published : Jul 07, 2025, 11:48 PM IST
ಪರಿಶೀಲನೆ | Kannada Prabha

ಸಾರಾಂಶ

ಕಾರ್ಮಿಕರ ಕೊರತೆಯಿಂದಾಗಿ ನಿಗದಿತ ಅವಧಿಗಿಂತ ಕಾಮಗಾರಿ ಬಾಕಿ ಉಳಿದಿದೆ ಎಂದು ಗುತ್ತಿಗೆದಾರ ತಿಳಿಸಿದರು. ಇದರಿಂದ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಹೆಚ್ಚುವರಿ ನೂರು ಕಾರ್ಮಿಕರನ್ನು ಬಳಸಿಕೊಂಡು ಆಗಸ್ಟ್ 30ರೊಳಗೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಎಂದು ತಾಕೀತು ಮಾಡಿದರು.

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿನ ಗಣೇಶೋತ್ಸವಕ್ಕೆ ತನ್ನದೇ ಆದ ಇತಿಹಾಸವಿದೆ. ಅತ್ಯಂತ ವೈಭವದಿಂದ ನಡೆಯುತ್ತದೆ. ಆದರೆ, ಚೆನ್ನಮ್ಮ ಸರ್ಕಲ್‌ನಲ್ಲಿನ ಫ್ಲೈಓವರ್‌ ಕಾಮಗಾರಿಯ ವೇಗ ನೋಡಿದರೆ ಗಣೇಶೋತ್ಸವಕ್ಕೂ ಮುನ್ನ ಮುಗಿಯುವುದು ಡೌಟು ಎಂದೆನ್ನಿಸುತ್ತಿದೆ. ಕೂಡಲೇ ಹೆಚ್ಚುವರಿ ಕಾರ್ಮಿಕರನ್ನು ನಿಯೋಜಿಸಿ ಆದಷ್ಟು ಬೇಗನೆ ಪೂರ್ಣಗೊಳಿಸಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ತಾಕೀತು ಮಾಡಿದರು.

ಇಲ್ಲಿನ ಚೆನ್ನಮ್ಮ ಸರ್ಕಲ್‌ನಲ್ಲಿ ಫ್ಲೈಓವರ್‌ ಕಾಮಗಾರಿಯನ್ನು ಪರಿಶೀಲಿಸಿದ ಬಳಿಕ ಅಧಿಕಾರಿಗಳು, ಗುತ್ತಿಗೆದಾರರೊಂದಿಗೆ ಮಾತನಾಡಿದರು. ನಗರದ ಹಳೇ ಬಸ್ ನಿಲ್ದಾಣ ಎದುರಿನ ಬಸವವನದಿಂದ ಹಳೇ ಕೋರ್ಟ್ ವೃತ್ತದವರೆಗಿನ ಫ್ಲೈಓವರ್ ಕಾಮಗಾರಿಯನ್ನು ಪರಿಶೀಲಿಸಿದರು.

ಗಣೇಶ ಚತುರ್ಥಿ ವೇಳೆಗೆ ಚನ್ನಮ್ಮ ಸರ್ಕಲ್-ಹಳೆ ಬಸ್‌ನಿಲ್ದಾಣ ಬಳಿಯ ಫ್ಲೈಓವರ್ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳಿಗೆ ತಿಳಿಸಿದರು.

ಕಾರ್ಮಿಕರ ಕೊರತೆಯಿಂದಾಗಿ ನಿಗದಿತ ಅವಧಿಗಿಂತ ಕಾಮಗಾರಿ ಬಾಕಿ ಉಳಿದಿದೆ ಎಂದು ಗುತ್ತಿಗೆದಾರ ತಿಳಿಸಿದರು. ಇದರಿಂದ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಹೆಚ್ಚುವರಿ ನೂರು ಕಾರ್ಮಿಕರನ್ನು ಬಳಸಿಕೊಂಡು ಆಗಸ್ಟ್ 30ರೊಳಗೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಎಂದು ತಾಕೀತು ಮಾಡಿದರು.

ಸ್ಥಳೀಯ ಕಾರ್ಮಿಕರಿಂದ ಕಾಮಗಾರಿ ನಿರ್ವಹಿಸಲು ಸಾಧ್ಯವಿಲ್ಲ. ಹಾಗಾಗಿ ಪಶ್ಚಿಮ ಬಂಗಾಳದಿಂದ ಕಾಮಿರ್ಕರನ್ನು ಕರೆ ತರಲಾಗುವುದು ಎಂದು ಗುತ್ತಿಗೆದಾರರು ಶಾಸಕರಿಗೆ ತಿಳಿಸಿದರು.

ಆಗಸ್ಟ್ 20ರೊಳಗೆ ಪೂರ್ಣಗೊಳಿಸುವಂತೆ ಈ ಹಿಂದೆಯೇ ತಿಳಿಸಲಾಗಿತ್ತು. ಪ್ರಸ್ತುತ ಕೆಲಸ ನೋಡಿದಾಗ ಹಾಗೆ ಅನಿಸುತ್ತಿಲ್ಲ. 4 ತಿಂಗಳೊಳಗೆ ಈ ಮಾರ್ಗದ ಕಾಮಗಾರಿ ಮುಗಿಸುತ್ತೇವೆ ಎಂದು ವ್ಯಾಪಾರಸ್ಥರಿಗೆ ತಿಳಿಸಿದ್ದೇವೆ. ಸಿಟಿ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಗುತ್ತಿಗೆದಾರರ ಬೇಜವಾಬ್ದಾರಿ ಪರಿಣಾಮ ಎಲ್ಲರೂ ಕಿರಿಕಿರಿ ಅನುಭವಿಸುವಂತಾಗಿದೆ ಎಂದರು.

ಪರಿಶೀಲನೆ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಶಾಸಕ ಟೆಂಗಿನಕಾಯಿ, ಬಸವವನದಿಂದ ಹಳೇ ಕೋರ್ಟ್ ವೃತ್ತದವರೆಗೆ 76 ಗಲ್ಡರ್‌ಗಳನ್ನು ಅಳವಡಿಸಬೇಕಿತ್ತು. ಈವರೆಗೆ 34 ಮಾತ್ರ ಅಳವಡಿಸಲಾಗಿದೆ. ಸದ್ಯ 20 ಗಲ್ಡರ್‌ಗಳು ತಯಾರಿದ್ದು, ಅಳವಡಿಸುವುದು ಬಾಕಿ ಇದೆ ಎಂದು ಎಂಜಿನಿಯರ್‌ಗಳು ಹೇಳುತ್ತಾರೆ. ಆದರೆ, ಬಾಕಿ ಎಲ್ಲ ಕಾಮಗಾರಿಗಳನ್ನು ಆ. 30ರೊಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಚನ್ನಮ್ಮ ಸರ್ಕಲ್‌ನಲ್ಲಿ ಇನ್ನೊಂದು ಪಿಲ್ಲರ್ ಅಳವಡಿಕೆಯ ಅವಶ್ಯಕತೆ ಇದ್ದು, ಆ ಕಾಮಗಾರಿಯೂ ಆರಂಭಗೊಂಡಿದೆ. ಇನ್ನು ಮುಂದೆ ಪ್ರತಿವಾರ ಕಾಮಗಾರಿ ಪರಿಶೀಲಿಸಲಾಗುವುದು. ಜು.15ಕ್ಕೆ ಮತ್ತೆ ಕಾಮಗಾರಿ ಪರಿಶೀಲನೆ ನಡೆಸಲಾಗುವುದು. ಅಷ್ಟರೊಳಗೆ ಇನ್ನೂ ಕನಿಷ್ಟ 100 ಕಾಮಿರ್ಕರನ್ನು ಕರೆತಂದು ಕಾಮಗಾರಿಗೆ ವೇಗ ನೀಡಬೇಕೆಂದು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ತಿಳಿಸಿದ್ದೇವೆ ಎಂದರು.

ರಾಷ್ಟ್ರೀಯ ಹೆದ್ದಾರಿ ಪಿಡಬ್ಲುಡಿ ಹಿರಿಯ ಅಧಿಕಾರಿಗಳಾದ ಸತೀಶ ನಾಗನೂರ, ರಮೇಶ ಹವೇಲಿ, ಪ್ರೊಜೆಕ್ಟ್ ಮ್ಯಾನೇಜರ್ ಆರ್.ಆರ್. ಸಿಂಗ್ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಪದಾಧಿಕಾರಿಗಳು, ಸ್ಥಳಿಯ ವ್ಯಾಪಾರಸ್ಥರು ಹಾಗೂ ಇತರರು ಇದ್ದರು.

PREV