ಕನ್ನಡಪ್ರಭ ವಾರ್ತೆ ಕಲಬುರಗಿ
ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಕಲಬುರಗಿ-ಸೇಡಂ ಮಾರ್ಗದ ಮಳಖೇಡ್‍ನಲ್ಲಿ ಕೆ.ಆರ್.ಐ.ಡಿ.ಎಲ್ ನಿಂದ ನಡೆಯುತ್ತಿರುವ ಕಾಗಿಣಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣದ ಅಂತಿಮ ಹಂತದ ಕಾಮಗಾರಿಯನ್ನು ವೀಕ್ಷಿಸಿ, ಕೂಡಲೆ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆಗೆ ಸೇಡಂ ತಾಲೂಕು ಪ್ರವಾಸ ಕೈಗೊಂಡಿದ್ದ ಅವರು, ಮಳೆ ಹೆಚ್ಚಾದಲ್ಲಿ ಹಳೇ ಸೇತುವೆ ಮುಳುಗಿ ಸಂಪರ್ಕ ಕಡಿತಗೊಳ್ಳುವುದು ಇಲ್ಲಿ ಸರ್ವೇ ಸಾಮಾನ್ಯವಾಗಿದೆ. ಆದ್ದರಿಂದ ಯುದ್ದೋಪಾದಿಯಲ್ಲಿ ಕೆಲಸ ಮುಗಿಸಬೇಕು ಮತ್ತು ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕೊಂಕನಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಮಳೆಯಿಂದ ಬಿದ್ದ ಮನೆಗೆ ಭೇಟಿ ನೀಡಿ ಸಂತ್ರಸ್ತರನ್ನು ಮಾತಾಡಿಸಿದರು. ಬಳಿಕ ಅಲ್ಲಿಯೇ ಇದ್ದ ಅಂಗನವಾಡಿಗೆ ಭೇಟಿ ನೀಡಿದ ಅವರು ಪುಟಾಣಿ ಮಕ್ಕಳೊಂದಿಗೆ ಸ್ವಲ್ಪ ಹೊತ್ತು ಕಳೆದರು. ಗರ್ಭಿಣಿ-ಬಾಣಂತಿಯರಿಗೆ ನೀಡಲಾಗುತ್ತಿರುವ ಪೌಷ್ಟಿಕ ಆಹಾರಗಳ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯಿಂದ ಮಾಹಿತಿ ಪಡೆದರು.ಸೇಡಂ ಪಟ್ಟಣದಲ್ಲಿ ನಗರೋತ್ಥಾನ ಯೋಜನೆಯಡಿ ನಡೆಯುತ್ತಿರುವ ಸಿಸಿ ರಸ್ತೆ ಕಾಮಗಾರಿ ಮತ್ತು ಸೇಡಂ ಪುರಸಭೆ ಸಿಬ್ಬಂದಿ ಕಟ್ಟಡ ಸಹ ಪರಿಶೀಲಿಸಿದರು. ಮುಖ್ಯಾಧಿಕಾರಿ ಶರಣಯ್ಯ ಸ್ವಾಮಿ ಕಾಮಗಾರಿಗಳ ಬಗ್ಗೆ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು.
ಕೋಡ್ಲಾ ಸಿಮೆಂಟ್ ಘಟಕ್ಕೆ ಭೇಟಿ:ತಾಲೂಕಿನ ಕೋಡ್ಲಾ-ಬೆನಕನಳ್ಳಿಯ ಶ್ರೀ ಸಿಮೆಂಟ್ ಘಟಕದಲ್ಲಿ ಇತ್ತೀಚೆಗೆ ಕೆಲಸದಲ್ಲಿ ನಿರತನಾಗಿದ್ದ ಕಾರ್ಮಿಕನೊಬ್ಬ ಮೃತಪಟ್ಟಿದ್ದು, ಇಲ್ಲಿನ ಸಿಮೆಂಟ್ ಘಟಕಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಕಾರ್ಮಿಕ ಸಾವನ್ನಪ್ಪಿರುವ ಘಟನಾ ಸ್ಥಳ ವೀಕ್ಷಿಸಿದಲ್ಲದೆ ಘಟನೆಗೆ ಕಾರಣ ಏನು ಎಂಬುದರ ಬಗ್ಗೆ ಕಂಪನಿಯ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಕಾರ್ಮಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ಕಂಪನಿಯ ಆವರಣದಲ್ಲಿ ಎಲ್ಲೆಡೆ ಸುರಕ್ಷತೆಯ ಸಂಕೇತ ಬೋರ್ಡ್‍ಗಳು ಹಾಕಬೇಕು. ಸುರಕ್ಷತೆಯಿಂದ ಕಾರ್ಯನಿರ್ವಹಣೆ ಕುರಿತು ಕಾರ್ಮಿಕರಿಗೆ ಅರಿವು ನೀಡುವುದಲ್ಲದೆ ಸುರಕ್ಷಾ ಪರಿಕರಗಳನ್ನು ಕಂಪನಿ ವಿತರಿಸಬೇಕು. ಮುಂದೆ ಇಂತಹ ಯಾವುದೇ ಅವಘಡ ಆಗದಂತೆ ಆಡಳಿತ ಮಂಡಳಿ ಎಚ್ಚರಿಕೆ ವಹಿಸಬೇಕೆಂದು ಕಾರ್ಖಾನೆಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಂ.ಸತೀಷಕುಮಾರ ಈ ಸಂದರ್ಭದಲ್ಲಿ ಇದ್ದರು.ಕಾರ್ಖಾನೆ ಎದುರು ವಿವಿಧ ಬೇಡಿಕೆಗೆ ಆಗ್ರಹಿಸಿ ಧರಣಿ ನಡೆಸುತ್ತಿರುವ ರೈತ ಸಂಘಟನೆಗಳ ಅಹವಾಲು ಆಲಿಸಿದರು. ಕೋಡ್ಲಾ ಗ್ರಾಮದಲ್ಲಿ ನಿರ್ಮಿತಿ ಕೇಂದ್ರದಿಂದ ನೂತನವಾಗಿ ನಿರ್ಮಿಸಲಾಗುತ್ತಿರುವ ನಾಡ ಕಚೇರಿ ಕಟ್ಟಡ ಕಾಮಗಾರಿ ವೀಕ್ಷಿಸಿದಲ್ಲದೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಕ್ಕಳೊಂದಿಗೆ ಕೆಲ ಹೊತ್ತು ಕಳೆದು ಅವರ ಶೈಕ್ಷಣಿಕ ಚಟುವಟಿಕೆ ಬಗ್ಗೆ ಮಾಹಿತಿ ಪಡೆದಿದ್ದಲ್ಲದೆ ಅವರ ಸಮಸ್ಯೆಗಳನ್ನು ಆಲಿಸಿದರು.
ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಸೀಲ್ದಾರ್ ಶ್ರೀಯಾಂಕ್ ಧನಶ್ರೀ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.