ಕುಷ್ಟಗಿ:
ಬೇಸಿಗೆ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ನಿತ್ಯ ಮನೆ-ಮನೆಗೆ ನೀರು ಒದಗಿಸಬೇಕೆಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.ತಾಲೂಕಿನ ತಾವರಗೇರಾ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ತಾವರಗೇರಾ ಹೋಬಳಿ ಮಟ್ಟದ ಪ್ರಗತಿ ಪರೀಶಿಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜೆಜೆಎಂ ಕಾಮಗಾರಿ ಕೆಲ ಹಳ್ಳಿಯಲ್ಲಿ ಅರೆಬರೆಯಾಗಿದೆ. ಕೂಡಲೇ ಅವುಗಳನ್ನು ಗುರುತಿಸಿ ಪೂರ್ಣಗೊಳಿಸಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು. ಇದೇ ವೇಳೆ ಕೆಲ ಗ್ರಾಮಸ್ಥರು ಹಾಗೂ ಗ್ರಾಪಂ ಸದಸ್ಯರು ಜೆಜೆಎಂ ಕಾಮಗಾರಿ ಅವ್ಯವಸ್ಥೆ ಕುರಿತು ದೂರಿನ ಸುರಿಮಳೆಗೈದರು. ಇದನ್ನು ಆಲಿಸಿದ ಸಂಸದರು ಆರ್‌ಡಬ್ಲ್ಯೂಎಸ್ ಎಇಇ ಸುರೇಶ ಅವರಿಗೆ ಸ್ಥಳ ಪರಿಶೀಲಿಸಿ ಮೂರು ದಿನಗಳಲ್ಲಿ ಕ್ರಮಕೈಗೊಂಡಿರುವ ಕುರಿತು ಮಾಹಿತಿ ನೀಡುವಂತೆ ಹೇಳಿದರು.
ತಾಪಂ ಇಒ ಪಂಪಾಪತಿ ಹಿರೇಮಠ ಮಾತನಾಡಿ, ತಾಲೂಕಿನಲ್ಲಿ ಮುದೇನೂರು ಹಾಗೂ ಹೂಲಗೇರ ಸಂಸದರ ದತ್ತು ಗ್ರಾಮಕ್ಕೆ ಆಯ್ಕೆಯಾಗಿದೆ. ಈ ಕುರಿತು ಗ್ರಾಮದಲ್ಲಿ ಸರ್ವೇ ಮಾಡುತ್ತಿದ್ದು ನೆಡುತೋಪು, ಗೋದಾಮು, ಅಂಗನವಾಡಿ, ಸಿಸಿ ರಸ್ತೆ , ಚರಂಡಿ, ಸ್ಮಶಾನ ಅಭಿವೃದ್ಧಿ, ಶೌಚಾಲಯ ಹಾಗೂ ವೈಯಕ್ತಿಕ ಕಾಮಗಾರಿ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಎಲ್ಲ ಕಾಮಗಾರಿಗಳನ್ನೊಳಗೊಂಡ ₹ ೧೦ ಕೋಟಿಗೂ ಅಧಿಕ ಮೊತ್ತದ ಕ್ರಿಯಾಯೋಜನೆ ಸಿದ್ಧಪಡಿಸಿ ಅನುಮೋದನೆಗೆ ಜಿಪಂಗೆ ಕಳುಹಿಸಲಾಗುವುದು ಎಂದರು. ತಾವರಗೇರಾ ಹೋಬಳಿ ವ್ಯಾಪ್ತಿಯ ಗ್ರಾಪಂಗಳಲ್ಲಿ ಸೃಜನೆಗೊಂಡ ಮಾನವ ದಿನಗಳ ವರದಿ ಹಾಗೂ ಎಸ್‌ಬಿಎಂ, ಎನ್‌ಆರ್‌ಎಲ್‌ಎಂ- ಸಂಜೀವಿನಿ ಯೋಜನೆ, ನರೇಗಾ ಪ್ರಗತಿ ಕುರಿತು ಮಾಹಿತಿ ನೀಡಿದರು. ಇದೇ ವೇಳೆ ಇಲಾಖೆಗಳ ಮುಖ್ಯಸ್ಥರು ಪ್ರಗತಿ ಪರಿಶೀಲನಾ ವರದಿ ಓದಿ ತಿಳಿಸಿದರು.ಇದೇ ವೇಳೆ ನರೇಗಾ ಯೋಜನೆ ಅಡಿ ದುಡಿಯೋಣ ಬಾ ಹಾಗೂ ಸ್ತ್ರೀ ಚೇತನ ಅಭಿಯಾನಕ್ಕೆ ನರೇಗಾ ಜಾಗೃತಿ ಕರಪತ್ರ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿದರು.
ಈ ವೇಳೆ ತಹಸೀಲ್ದಾರ್ ಅಶೋಕ ಶಿಗ್ಗಾಂವಿ, ಪಪಂ ಅಧ್ಯಕ್ಷ ನಾರಾಯಣಗೌಡ ಮೆದಿಕೇರಿ, ದಿಶಾ ಸಮಿತಿ ಸದಸ್ಯ ದೊಡ್ಡಬಸವನಗೌಡ ಬಯ್ಯಾಪೂರ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಫಾರೂಕ್ ಡಾಲಾಯತ್, ಜಿಲ್ಲಾ ಗ್ಯಾರಂಟಿ ಯೋಜನೆಯ ಉಪಾಧ್ಯಕ್ಷ ಅಮರೇಶ ಗಾಂಜಿ, ನಾಮ ನಿರ್ದೇಶನ ಸದಸ್ಯರಾದಹನುಮಗೌಡ ಪಾಟೀಲ್, ನರಸಪ್ಪ ಬಿಂಗಿ, ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಪಟ್ಟಣ ಪಂಚಾಯಿತಿ ಸದಸ್ಯರು, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಕೆಡಿಪಿ ಹಾಗೂ ವಿವಿಧ ಸಮಿತಿ ಸದಸ್ಯರು ಇದ್ದರು.2 ಗಂಟೆ ಸಭೆ ವಿಳಂಬಸಭೆ ಬೆಳಗ್ಗೆ 10.30ಕ್ಕೆ ನಿಗದಿಯಾಗಿದ್ದು ಬಹುತೇಕ ಅಧಿಕಾರಿಗಳು ಹಾಗೂ ಗ್ರಾಪಂ ಅಧ್ಯಕ್ಷರು, ಸದಸ್ಯರು ಆಗಮಿಸಿದ್ದರು. ಆದರೆ, ಸಂಸದರು ಸುಮಾರು ಎರಡು ತಾಸು ತಡವಾಗಿ ಆಗಮಿಸಿದರು. ಇವರು ಬರುವಷ್ಟರಲ್ಲಿಯೇ ಕೆಲವರು ಸಭೆಯಿಂದ ನಿರ್ಗಮಿಸಿದ್ದರು.