ಬಾಕಿ ಕಾಮಗಾರಿ ಬೇಗ ಪೂರ್ಣಗೊಳಿಸಿ

KannadaprabhaNewsNetwork |  
Published : Jul 06, 2024, 12:46 AM IST
ಆಶ್ರಯ ಮನೆಗಳ ಕಾಮಗಾರಿಯನ್ನು ವೀಕ್ಷಿಸಿ, ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ | Kannada Prabha

ಸಾರಾಂಶ

ಬಾಕಿ ಉಳಿದ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳಿಸಿ, ಫಲಾನುಭವಿಗಳ ವಾಸಕ್ಕೆ ಅನುಕೂಲ ಮಾಡಿಕೊಡಬೇಕೆಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸಂಬಂಧಿಸಿದ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಬಾಕಿ ಉಳಿದ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳಿಸಿ, ಫಲಾನುಭವಿಗಳ ವಾಸಕ್ಕೆ ಅನುಕೂಲ ಮಾಡಿಕೊಡಬೇಕೆಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸಂಬಂಧಿಸಿದ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.

ನಗರ ಮತಕ್ಷೇತ್ರದ ವ್ಯಾಪ್ತಿಯ ನಮೋ ನಗರದಲ್ಲಿ ಪ್ರಧಾನಮಂತ್ರಿ ಆವಾಸ ಯೋಜನೆಯಡಿ ನಿರ್ಮಿಸಲಾಗುತ್ತಿರುವ 1,493 ಆಶ್ರಯ ಮನೆಗಳ ಕಾಮಗಾರಿಯನ್ನು ವೀಕ್ಷಿಸಿ, ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ವಿಳಂಬ ಮಾಡದೆ, ವೇಗವಾಗಿ ಕಾಮಗಾರಿ ಮುಗಿಸಿ, ಬಡವರಿಗೆ ಅನುಕೂಲ ಮಾಡಿಕೊಡಬೇಕು ಎಂದರು.

ಕೇವಲ ಬಾಯಿ ಮಾತಿನಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ಕೊಟ್ಟರೆ ಸಾಲದು, ಹೇಳಿದಂತೆ ಕೆಲಸ ಮಾಡಬೇಕು ಎಂದು ಖಡಕ್ ಸೂಚನೆ ನೀಡಿದ ಅವರು, ಅಥಣಿ ಮುಖ್ಯ ರಸ್ತೆಯಿಂದ ನಮೋ ನಗರಕ್ಕೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ, ವಿದ್ಯುತ್ ಸಂಪರ್ಕ, ಚರಂಡಿ ವ್ಯವಸ್ಥೆ, ನೀರಿನ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.

ಮುಂದಿನ ವಾರ ಮತ್ತೊಮ್ಮೆ ಸಭೆ ನಡೆಸಲಾಗುವುದು. ಆ ಸಭೆಯಲ್ಲಿ ಈಗಾಗಲೇ ಹಂಚಿಕೆ ಮಾಡಲಾದ ಫಲಾನುಭವಿಗಳಿಗೆ ನಿಗದಿತ ಸಮಯದಲ್ಲಿ ಮನೆಗಳನ್ನು ಬಳಕೆಗೆ ನೀಡುವದು ಹಾಗೂ ಉಳಿದ ಮನೆಗಳನ್ನು ಪೂರ್ಣಗೊಳಿಸುವ ಗಡುವು ನೀಡಬೇಕು ಎಂದು ಹೇಳಿದರು.

ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಡುವೆ ಸಮನ್ವಯತೆ ಕೊರತೆ ಕಾಣುತ್ತಿದೆ. ಇದು ಕೂಡ ಕಾಮಗಾರಿ ವಿಳಂಬಕ್ಕೆ ಕಾರಣವಾಗಿರಬಹುದು. ಇನ್ನೂ ಮುಂದೆಯಾದರೂ ಇಬ್ಬರೂ ಸಮನ್ವಯತೆಯಿಂದ ಕೆಲಸ ಮಾಡಲು ಸಲಹೆ ನೀಡಿದ ಅವರು, ಜಿಲ್ಲಾಧಿಕಾರಿಗಳೊಂದಿಗೆ ಕನಿಷ್ಠ 15 ದಿನಗಳಿಗೊಮ್ಮೆ ಕಾಮಗಾರಿ ಪರಿಶೀಲನೆ ಹಾಗೂ ಸಭೆ ನಡೆಸುವುದಾಗಿ ಹೇಳಿದರು.

ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ರಿಷಿ ಆನಂದ, ಮಹಾನಗರ ಪಾಲಿಕೆ ಸದಸ್ಯರಾದ ಎಂ.ಎಸ್.ಕರಡಿ, ಶಿವರುದ್ರ ಬಾಗಲಕೋಟ, ಪ್ರೇಮಾನಂದ ಬಿರಾದಾರ, ರಾಹುಲ್ ಜಾಧವ, ಮಳುಗೌಡ ಪಾಟೀಲ, ರಾಜಶೇಖರ ಕುರಿಯವರ, ಕಿರಣ ಪಾಟೀಲ, ಮಲ್ಲಿಕಾರ್ಜುನ ಗಡಗಿ, ಜವಾಹಾರ ಗೋಸಾವಿ ಸೇರಿದಂತೆ ಮತ್ತಿತರರು ಇದ್ದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?