ರಾ.ಹೆ 150ಎ ರಸ್ತೆ ಬಾಕಿ ಕಾಮಗಾರಿ ಪೂರ್ಣಗೊಳಿಸಿ

KannadaprabhaNewsNetwork |  
Published : Dec 06, 2025, 02:00 AM IST
ಚಿತ್ರ 1 | Kannada Prabha

ಸಾರಾಂಶ

ಬೆಂಗಳೂರಿನ ವಿಕಾಸ ಸೌಧದಲ್ಲಿ ಗುರುವಾರ ಹಿರಿಯೂರು ಮತ್ತು ಚಳ್ಳಕೆರೆ ತಾಲೂಕುಗಳಲ್ಲಿ ಹಾದು ಹೋಗಿರುವ ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ 150-ಎ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸೂಚನೆ । ಬೀದರ್-ಶ್ರೀರಂಗಪಟ್ಟಣ ರಾ.ಹೆ 150-ಎ ರಸ್ತೆ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆಕನ್ನಡಪ್ರಭ ವಾರ್ತೆ ಹಿರಿಯೂರು

ಬೆಂಗಳೂರಿನ ವಿಕಾಸಸೌಧದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರ ಕೊಠಡಿಯಲ್ಲಿ ಹಿರಿಯೂರು ಮತ್ತು ಚಳ್ಳಕೆರೆ ತಾಲೂಕುಗಳಲ್ಲಿ ಹಾದು ಹೋಗಿರುವ ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ 150-ಎ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆಯನ್ನು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಸಭೆ ಉದ್ದೇಶಿಸಿ ಮಾತನಾಡಿದ ಸಚಿವ ಡಿ.ಸುಧಾಕರ್, ಹಿರಿಯೂರು ತಾಲೂಕಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ 150-ಎ ಕಾಮಗಾರಿಯು ಬಹುತೇಕ ಪೂರ್ಣಗೊಂಡಿದ್ದು ಕಳೆದ ಒಂದು ವರ್ಷದಿಂದ ವಾಹನಗಳ ಓಡಾಟ ಪ್ರಾರಂಭವಾಗಿರುತ್ತದೆ. ಆದರೆ ಹಿರಿಯೂರು ತಾಲೂಕಿನ ಯರಬಳ್ಳಿ ಗ್ರಾಮದ ಬಳಿ ಹೆದ್ದಾರಿ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವುದರಿಂದ ಈ ಗ್ರಾಮಗಳ ಜನರು ರಸ್ತೆ ದಾಟುವಾಗ ಅಪಘಾತಗಳು ಹೆಚ್ಚಾಗುತ್ತಿವೆ. ಕಾಮಗಾರಿ ಪೂರ್ಣಗೊಳಿಸಲು ಇರುವ ಸಮಸ್ಯೆಗಳೇನು ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಹೆದ್ದಾರಿ ಪ್ರಾಧಿಕಾರದ ರಾಜ್ಯ ಯೋಜನಾ ಅಧಿಕಾರಿಗಳು ಭೂಸ್ವಾಧೀನ ಸಂಬಂಧ ಈ ಗ್ರಾಮದ ಕಾಮಗಾರಿ ವಿಳಂಬವಾಗಿ ಪ್ರಾರಂಭವಾಗಿದ್ದು ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಸೇತುವೆ ಕಾಮಗಾರಿ ಪ್ರಗತಿಯಲ್ಲಿದ್ದು ಅದರೊಂದಿಗೆ ರಸ್ತೆ ಕಾಮಗಾರಿ ಸಹ ಪ್ರಾರಂಭಗೊಳಸಿ ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಹಿರಿಯೂರು ನಗರದ ಬೈಪಾಸ್ ನ ರಾ.ಹೆ.48ರಲ್ಲಿ ಈ ಹೊಸ ರಾ.ಹೆ 150-ಎ ಹಾದು ಹೋಗಿದ್ದು ಹುಳಿಯಾರು ಕಡೆಯಿಂದ ಬರುವ ವಾಹನಳಿಗೆ ರಾ.ಹೆ 48 ರಲ್ಲಿ ಬೆಂಗಳೂರು ಕಡೆಗೆ ಹೋಗಲು ಮಾರ್ಗವೇ ಗೊತ್ತಾಗದೇ ಅನೇಕ ಬಾರಿ ದಾರಿ ತಪ್ಪುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಚಳ್ಳಕೆರೆ ಕಡೆಯಿಂದ ಬೆಂಗಳೂರಿಗೆ ರಾ.ಹೆ 48ಕ್ಕೆ ಸೇರಲು ಸರ್ವೀಸ್ ರಸ್ತೆಯು ಬಹಳ ಚಿಕ್ಕದಾಗಿದ್ದು ವಾಹನ ದಟ್ಟಣೆ ಉಂಟಾಗುತ್ತದೆ. ಇದಲ್ಲದೇ ಬೆಂಗಳೂರು ಕಡೆಯಿಂದ ರಾ.ಹೆ 48ರಿಂದ ಚಳ್ಳಕೆರೆ ರಾ.ಹೆ.150-ಎಗೆ ಸೇರಲು ಸರಿಯಾದ ಮಾರ್ಗ ನಿರ್ಮಾಣ ಮಾಡದೇ ಇರುವುದರಿಂದ ವಾಹನ ಸವಾರರಿಗೆ ತುಂಬಾ ತೊಂದರೆಯುಂಟಾಗುತ್ತಿದೆ. ಬೆಂಗಳೂರು ಕಡೆಯಿಂದ ಹಿರಿಯೂರು ನಗರದ ಒಳಗೆ ಹೋಗುವ ರಸ್ತೆಯ ಭಾಗದಲ್ಲಿ ಕಿಮೀಗಟ್ಟಲೇ ಲಾರಿಗಳು ನಿಂತಿರುತ್ತವೆ. ನಗರದ ಒಳಗೆ ಹೋಗುವ ದಾರಿಯೇ ಕಾಣುವುದಿಲ್ಲ. ಅದರಲ್ಲೂ ರಾತ್ರಿ ವೇಳೆ ಅಪಘಾತಗಳು ಸಂಭವಿಸುತ್ತಿದ್ದು ಈ ವರ್ಷದಲ್ಲಿ ಈ ಸ್ಥಳಗಳಲ್ಲಿ 8 ಜನ ಸಾವಿಗೀಡಾಗಿದ್ದಾರೆ. ಇದಕ್ಕೆಲ್ಲಾ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಹೆದ್ದಾರಿ ನಿರ್ಮಾಣ ಕಾಮಗಾರಿಯೇ ಕಾರಣ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

ಇದಕ್ಕೆ ಸಹಮತ ವ್ಯಕ್ತಪಡಿಸಿದ ಆಮ್ಲಾನ್ ಆದಿತ್ಯ ಬಿಸ್ವಾಸ್ ರವರು, ನಾನು ಸಹ ಈ ಸ್ಥಳದಲ್ಲಿ ಬಳ್ಳಾರಿ ಕಡೆಗೆ ಹೋಗಲು ದಾರಿ ಗೊತ್ತಾಗದೇ ಹೋಗಿದ್ದೇನೆ. ಲಾರಿಗಳಿಂದ ಟ್ರಾಫಿಕ್ ಜಾಮ್ ಆಗಿರುವುದನ್ನು ಗಮನಿಸಿದ್ದೇನೆ. ಸದರಿ ಭಾಗದಲ್ಲಿ ಎರಡು ಡಯೋಗ್ನಲ್ ಸೆಮಿ ಕ್ಲೋವರ್‌ಗಳನ್ನು ನಿರ್ಮಾಣ ಮಾಡುವ ಅವಶ್ಯಕತೆ ಇದ್ದು, ಈ ಸಂಬಂಧ ಭೂಸ್ವಾಧೀನ ಪ್ರಕ್ರಿಯೆ ಮತ್ತು ಅಂದಾಜು ತಯಾರಿಸುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.

ಇದಕ್ಕೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಭಾಗದಲ್ಲಿ ನಾಲ್ಕು ಕ್ಲೋವರ್ ನಿರ್ಮಾಣ ಕಾಮಗಾರಿಯ ಅಂದಾಜು ತಯಾರಿಸಲಾಗಿದ್ದು ಭೂಸ್ವಾಧೀನ ಪ್ರದೇಶಗಳ ಪ್ರಾಥಮಿಕ ಅಧಿಸೂಚನೆ ಮಾಡಲಾಗಿತ್ತು. ಈಗ ಎರಡು ಡಯೋಗ್ನಲ್ ಸೆಮಿ ಕ್ಲೋವರ್‌ಳನ್ನು ನಿರ್ಮಾಣ ಮಾಡಲು ಪರಿಷ್ಕೃತ ಅಂದಾಜು ಮತ್ತು ಪರಿಷ್ಕೃತ ಭೂಸ್ವಾಧೀನ ಪ್ರಕ್ರಿಯೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.

ಆಗ ಸಚಿವರು ಮಾತನಾಡಿ, ಹಿರಿಯೂರು ತಾಲೂಕಿನ ಕೆ.ಆರ್.ಹಳ್ಳಿ ಮತ್ತು ಗೊರ್ಲಡಕು ಬಳಿ ಸೇತುವೆ ನಿರ್ಮಾಣ ಕಾಮಗಾರಿ ನಿಧಾನ ಗತಿಯಲ್ಲಿ ನಡೆಯುತ್ತಿದ್ದು ಈ ಭಾಗದಲ್ಲಿ ಎರಡು ಬದಿಯ ಸರ್ವೀಸ್ ರಸ್ತೆಗಳು ತುಂಬಾ ಹಾಳಾಗಿದ್ದು ವಾಹನ ಸಂಚಾರಕ್ಕೆ ತುಂಬಾ ತೊಂದರೆ ಯುಂಟಾಗುತ್ತಿರುವುದಲ್ಲದೇ ರಾತ್ರಿ ವೇಳೆ ವಾರದ ಕೊನೆಯಲ್ಲಿ ಕಿಮೀಗಟ್ಟಲೇ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ವಾಹನ ಸವಾರರಿಗೆ ತುಂಬಾ ತೊಂದರೆ ಯಾಗುತ್ತಿದ್ದು ಕೂಡಲೇ ಸದರಿ ಸ್ಥಳಗಳ ಸೇತುವೆ ನಿರ್ಮಾಣ ಕಾಮಗಾರಿ ಚುರುಕುಗೊಳಿಸಿ ತುರ್ತಾಗಿ ಪೂರ್ಣಗೊಳಿಸಬೇಕು. ಈ ಭಾಗಗಳ ಸರ್ವೀಸ್ ರಸ್ತೆಗಳನ್ನು ಮರು ಡಾಂಬರೀಕರಣ ಮಾಡಲು ತುರ್ತುಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಭಾಗದ ಸರ್ವಿಸ್ ರಸ್ತೆ ಮರು ಡಾಂಬರೀಕರಣ ಮಾಡಲು ಅನುಮೋದನೆ ದೊರಕಿದ್ದು ಕೂಡಲೇ ಕಾಮಗಾರಿ ಪ್ರಾರಂಭಿಸಲಾಗುವುದು ಮತ್ತು ಸೇತುವೆ ಕಾಮಗಾರಿ ಗುತ್ತಿಗೆದಾರರು ಕಾಮಗಾರಿ ಸ್ಥಗಿತಗೊಳಿಸಿದ್ದು ಸದರಿ ಟೆಂಡರ್ ರದ್ದುಗೊಳಿಸಿ ಹೊಸ ಗುತ್ತಿಗೆದಾರರಿಗೆ ಕಾಮಗಾರಿ ನಿರ್ವಹಣೆ ಮಾಡಲು ಸೂಚಿಸಲಾಗುವುದು ಎಂದು ತಿಳಿಸಿದರು.

ಸಚಿವರು ಮಾತನಾಡಿ, ಹಿರಿಯೂರು ತಾಲೂಕು ರಾ.ಹೆ.48 ರ ಗುಯಿಲಾಳು ಟೋಲ್ ಬಳಿ ಇರುವ ಗಿಡ್ಡೋಬನಹಳ್ಳಿ ಗ್ರಾಮದ ಬಳಿ ಹೊಸದಾಗಿ ಅಂಡರ್ ಪಾಸ್ ನಿರ್ಮಾಣ, ಹುಲುಗಲಕುಂಟೆಯಿಂದ ಸೋಮೇರಹಳ್ಳಿಗೆ ಹೋಗುವ ರಾ.ಹೆ.150-ಎ ರಲ್ಲಿ ಹೊಸದಾಗಿ ಅಂಡರ್ ಪಾಸ್ ನಿರ್ಮಾಣ ಮತ್ತು ರಾ.ಹೆ.48ರ ಬಬ್ಬೂರು ಗ್ರಾಮದ ಎಪಿಎಂಸಿ ಹತ್ತಿರ ಹೊಸದಾಗಿ ಅಂಡರ್ ಪಾಸ್ ನಿರ್ಮಾಣ ಮಾಡ ಬೇಕಾಗಿದ್ದು ಈ ಸಂಬಂಧ ಒಂದು ದಿನ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಈ ಸಭೆಯಲ್ಲಿ ಚರ್ಚಿಸಲಾಗಿರುವ ಸ್ಥಳಗಳ ಪರಿಶೀಲನೆ ನಡೆಸಬೇಕಿದೆ ಎಂದರು.

ಈ ವೇಳೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಲೋಕೋಪಯೋಗಿ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್‍, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿಗಳಾದ ವಿಲಾಸ್.ಪಿ.ಬ್ರಹ್ಮಾಂಕರ್, ಚಿತ್ರದುರ್ಗ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿರಿಶ್ ಗಂಗಾಧರ್, ಭೂ ಸ್ವಾಧೀನಾಧಿಕಾರಿ ವೆಂಕಟೇಶ್‍ನಾಯ್ಕ್, ಡಿವೈಎಸ್.ಪಿ ಶಿವಕುಮಾರ್, ನಗರಸಭೆ ಪೌರಾಯುಕ್ತ ಎ ವಾಸಿಂ ಮುಂತಾದ ಅಧಿಕಾರಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈಜ್ಞಾನಿಕ ಪದ್ಧತಿಯಿಂದ ಉ‍ಳುಮೆ ಮಾಡಿ ಮಣ್ಣನ್ನು ಸಂರಕ್ಷಿಸಿ
ಇಂದು ನಗರಕ್ಕೆ ಸಿಎಂ ಸಿದ್ದರಾಮಯ್ಯ ಡಿಸಿಎಂ