ಕುಮಟಾ: ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿ ೭೬೬ಇ ಹಾಗೂ ರಾಷ್ಟ್ರೀಯ ಹೆದ್ದಾರಿ ೬೬ ಚತುಷ್ಪಥ ಕಾಮಗಾರಿಯ ವಿಳಂಬಕ್ಕೆ ಇನ್ನೂ ನೆಪ ಹೇಳುತ್ತಾ ಕೂರದೇ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಶಾಸಕ ದಿನಕರ ಶೆಟ್ಟಿ ಕಟ್ಟುನಿಟ್ಟಾಗಿ ಎರಡೂ ಕಾಮಗಾರಿ ನಿರ್ವಹಣೆಯ ಗುತ್ತಿಗೆ ಕಂಪನಿಗೆ ಹಾಗೂ ಅಧಿಕಾರಿಗಳಿಗೆ ಎಚ್ಚರಿಸಿದರು.
ಕುಮಟಾ-ಶಿರಸಿ ರಸ್ತೆ ಕಾಮಗಾರಿ ವಿಳಂಬಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಗುತ್ತಿಗೆ ಕಂಪನಿಯವರನ್ನು ಶಾಸಕರು ತರಾಟೆಗೆ ತೆಗೆದುಕೊಂಡರು.
ಕಾಮಗಾರಿಗೆ ಬೇಕಾದ ಜಲ್ಲಿ ಮುಂತಾದ ಕಚ್ಚಾ ಸಾಮಗ್ರಿಗಳನ್ನು ದೂರದ ಹಾನಗಲ್ ಕಡೆಗಳಿಂದ ತರಬೇಕಾಗಿದೆ. ಹಣ ಸಂದಾಯವಾಗದ್ದರಿಂದ ವಿಳಂಬವಾಗುತ್ತಿದೆ ಎಂದು ಆರ್‌ಎನ್‌ಎಸ್ ಕಂಪನಿಯವರು ತಿಳಿಸಿದಾಗ ಪ್ರತಿಕ್ರಿಯಿಸಿದ ಶಾಸಕ ಶೆಟ್ಟಿ, ನೀವು ಇಂಥ ಕ್ಷುಲಕ ಕಾರಣ ಹೇಳುವ ಬದಲು ಮೊದಲು ರಸ್ತೆ ಕೆಲಸ ಮಾಡಿ. ಕೆಲಸ ವಿಳಂಬಕ್ಕೆ ಕುಂಟು ನೆಪ ಹೇಳುವ ಬದಲು ಸಾರ್ವಜನಿಕರ ಕೆಲಸ ಮಾಡಲು ಮೊದಲು ನಿಮ್ಮಲ್ಲಿ ಇಚ್ಚಾಶಕ್ತಿ ಇರಬೇಕು. ನೀವೇ ಒಪ್ಪಿಕೊಂಡಂತೆ ಡಿಸೆಂಬರ್-೨೦೨೫ ರೊಳಗೆ ಸಂಪೂರ್ಣ ಕಾಮಗಾರಿ ಮುಗಿಸಿ ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.ಖಾಸಗಿಯವರಿಂದ ಭೂಸ್ವಾಧೀನಪಡಿಸಿಕೊಂಡ ಸ್ಥಳದಲ್ಲಿಯ ಮರಗಳನ್ನು ಕಟಾವು ಕಾರ್ಯ ಶೀಘ್ರವಾಗಲಿ, ನಿಗದಿಯಂತೆ ವರ್ಷಾಂತ್ಯದೊಳಗೆ ಶಿರಸಿ-ಕುಮಟಾ ರಸ್ತೆ ಕಾಮಗಾರಿ ಮುಗಿಯಬೇಕು ಎಂದರು.
ಸರ್ಕಾರದ ಕಡೆಯಿಂದ ಉಪವಿಭಾಗಾಧಿಕಾರಿಗಳು ಈ ಬಗ್ಗೆ ಕೂಲಂಕುಷವಾಗಿ ಮಾಹಿತಿ ಮತ್ತು ದಾಖಲೆ ಪಡೆದು ಪರಿಶೀಲಿಸಬೇಕು ಎಂದು ಸೂಚಿಸಿದ ಶಾಸಕ ದಿನಕರ ಶೆಟ್ಟಿ, ಸಾರ್ವಜನಿಕರ ತೆರಿಗೆ ಹಣ ಯಾರೂ ಲೂಟಿ ಮಾಡದಂತೆ ತಡೆಯುವುದು ನಮ್ಮೆಲ್ಲರ ಜವಾಬ್ದಾರಿ ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಎಂದರು.